ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿದ್ದು, ದಂಡಮಾಲೆಯ ದಿನ ವಾದ ಶುಕ್ರವಾರ ತುಲಾಭಾರ ಸೇವೆ ನಡೆಯಿತು.
ಕಳೆದ ವರ್ಷದವರೆಗೆ ರಥೋತ್ಸವದ ಮರುದಿನ ಆರಡದಂದು (ಅವಭೃತ ಸ್ನಾನ) ತುಲಾಭಾರ ಸೇವೆ ನಡೆಯುತ್ತಿತ್ತು. ಆದರೆ ಈ ವರ್ಷದಿಂದ ದಂಡಮಾಲೆಯ ದಿನಗಳಲ್ಲಿ ತುಲಾಭಾರ ಸೇವೆಗೆ ಅವಕಾಶ ನೀಡಿದ್ದು, ಇದರಿಂದಾಗಿ ನೂರಾರು ಭಕ್ತರು ತಮ್ಮ ಹರಕೆ ತೀರಿಸಿಕೊಂಡರು.
ಶುಕ್ರವಾರ ಬೆಳಗ್ಗೆ ಹರಕೆ ಹೊತ್ತ ಭಕ್ತರು ಅಕ್ಕಿ, ಬೆಲ್ಲ, ಸೀಯಾಳ, ಮೊದಲಾದ ಸೊತ್ತುಗಳಿಂದ ತುಲಾಭಾರ ಸೇವೆ ನಡೆಸಿದರು. ಎ. 3, 12: ತುಲಾಭಾರ ಇನ್ನು ಎಪ್ರಿಲ್ 3, 12ರಂದು ತುಲಾಭಾರ ನಡೆಯಲಿದೆ. ಸ್ವಯಂಸೇವಕರು ಬಂದ ಭಕ್ತರಿಗೆ ಅನುಕೂಲವಾಗುವಂತೆ ಸಹಕರಿಸುತ್ತಿದ್ದರು.
ವರ್ಷಾವಧಿ ಜಾತ್ರೆ
ಮಾ. 14ರಂದು ಪೊಳಲಿ ದೇವಸ್ಥಾನದ ವರ್ಷಾವಧಿ ಜಾತ್ರೆ ಆರಂಭಗೊಂಡಿದ್ದು, ಎ. 1ರಂದು ಕೋಳಿಕುಂಟ (ಬೆಳ್ಳಿ ರಥ), ಎ. 3ರಂದು 20ನೇ ದಂಡಮಾಲೆ (ನವಿಲು ರಥ), ಎ. 6ರಂದು ಪ್ರಥಮ ಚೆಂಡು (ಕುಮಾರ ತೇರು), ಎ. 7ರಂದು ಎರಡನೇ ಚೆಂಡು (ಹೂವಿನ ತೇರು), ಎ. 8ರಂದು ಮೂರನೇ ಚೆಂಡು (ಸೂರ್ಯ ಮಂಡಲ ರಥ), ಎ. 9ರಂದು ನಾಲ್ಕನೇ ಚೆಂಡು (ಚಂದ್ರ ಮಂಡಲ ರಥ), ಎ. 10ರಂದು ಕಡೇ ಚೆಂಡು (ಆಳು ಪಲ್ಲಕ್ಕಿ ರಥ) (ಬೆಳ್ಳಿ ರಥ), ಎ. 11ರಂದು ಮಹಾ ರಥೋತ್ಸವ (ಸಂಜೆ 6.30), ಎ. 12ರಂದು ಅವಭೃಥ ಸ್ನಾನ, ಧ್ವಜಾವರೋಹಣ, ಉಳ್ಳಾಕ್ಲು- ಮಗೃಂತಾಯಿ ದೈವಗಳ ನೇಮ, ಎ. 13ರಂದು ಕೊಡಮಣಿತ್ತಾಯ ನೇಮ, ಎ. 14ರಂದು ಸಂಪ್ರೋಕ್ಷಣೆ, ಅಪರಾಹ್ನ 3 ಗಂಟೆಗೆ ಮಂತ್ರಾಕ್ಷತೆ ನಡೆದು ಜಾತ್ರೆ ಸಮಾಪ್ತಿಗೊಳ್ಳಲಿದೆ.