ಕಟಪಾಡಿ : ಮೃಣ್ಮಯ ದುರ್ಗೆಯರ ಅಪೂರ್ವ ಪ್ರತಿಮೆಗಳು ನೈಸರ್ಗಿಕ ಬಣ್ಣದಿಂದ ಅಲಂಕೃತಗೊಂಡು ಪುನಃ ಪ್ರತಿಷ್ಠೆಗೆ ಸಿದ್ಧಗೊಳ್ಳುತ್ತಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದ್ಯಾವರ ಪಠೇಲರ ಮನೆ ಉಲ್ಲಾಸ್ ಶೆಟ್ಟಿ ಹೇಳಿದ್ದಾರೆ. ಅವರು ಉದ್ಯಾವರ ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಗಣಪತಿ ಮಹಾಕಾಳಿ ಪಂಜುರ್ಲಿ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗರ್ಭಗುಡಿಯ ಆವರಣದ ಗೋಡೆಗೆ ತಾಗಿಕೊಂಡೇ ರಚಿತವಾಗಿರುವ ಆಳೆತ್ತರದ ಮಣ್ಣಿನ ಮೂರ್ತಿ ಇದಾಗಿದೆ. ಇದರೊಂದಿಗೆ ದಕ್ಷಿಣಾಭಿಮುಖವಾಗಿ ರಕ್ತಚಂದನ ಮರದಿಂದ ಏಕದಾರುಶಿಲ್ಪ 12 ಬಾಹುಗಳಲ್ಲಿ ಅಯುಧ ಧರಿಸಿದ 6 ಅಡಿ ಎತ್ತರದ ವೀರಭದ್ರ, ಉತ್ತರಾಭಿಮುಖವಾಗಿ ಗಣಪತಿ ಶಿಲಾ ಶಿಲ್ಪ ಒಂದೇ ಗರ್ಭಗುಡಿಯೊಳಗೆ ಪುನಃಪ್ರತಿಷ್ಠೆ ಗೊಳ್ಳಲಿದೆ ಎಂದರು.
ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುವ ಸರಳ ಸುಂದರ ದಾರು-ಶಿಲಾ ಶಿಲ್ಪಗಳು ಇಲ್ಲಿ ಪಡಿಮೂಡಿದ್ದು, ಆಂದಾಜು 3 ಕೋ.ರೂ. ವೆಚ್ಚದಲ್ಲಿ ಕಲಾ ಸಾನ್ನಿಧ್ಯ ವೃದ್ಧಿಗಾಗಿ ಜೀರ್ಣೊದ್ಧಾರಗೊಳ್ಳುತ್ತಿದೆ. ಎ. 16ರಿಂದ ಎ. 24ರ ವರೆಗೆ ವಿವಿಧ ಧಾರ್ಮಿಕ ಹೋಮ, ಹವನ, ಅಭಿಷೇಕ, ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ, ಜಾತ್ರಾ ಮಹೋತ್ಸವ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ಪ್ರಧಾನ ಅರ್ಚಕ ಶ್ರೀನಿವಾಸ ಮೂರ್ತಿ, ರಾಮಮೂರ್ತಿ ಭಟ್, ಪ್ರಧಾನ ಕಾರ್ಯದರ್ಶಿ ಗಣಪತಿ ಕಾರಂತ, ಗೌರವ ಸಲಹೆಗಾರ ಈಶ್ವರ್ ಚಿಟ್ಪಾಡಿ, ಉಪಾಧ್ಯಕ್ಷ ಪ್ರತಾಪ್ ಕುಮಾರ್, ಗೋಪಾಲ ದೇವಾಡಿಗ, ಪಠೇಲರ ಮನೆ ಯತಿರಾಜ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಕೆ. ಪೂಜಾರಿ, ಜತೆ ಕಾರ್ಯದರ್ಶಿ ಯು.ಆರ್. ಚಂದ್ರಶೇಖರ್, ಪ್ರಚಾರ ಸಮಿತಿ ಸಂಚಾಲಕ ಎಚ್. ರತ್ನಾಕರ ಆಚಾರ್ಯ, ವಿನೋದ್ ಕುಮಾರ್, ಉಪಸ್ಥಿತರಿದ್ದರು.