Home ನಂಬಿಕೆ ಸುತ್ತಮುತ್ತ ಗರ್ಭ ಧರಿಸಿದ ಹಸು… ದುಂಧುಕಾರಿ ಮತ್ತು ಗೋಕರ್ಣನ ಜನನ ರಹಸ್ಯ!

ಗರ್ಭ ಧರಿಸಿದ ಹಸು… ದುಂಧುಕಾರಿ ಮತ್ತು ಗೋಕರ್ಣನ ಜನನ ರಹಸ್ಯ!

3162
0
SHARE

ಬಹಳ ಪೂರ್ವಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಸುಂದರವಾದ ಒಂದು ನಗರವಿತ್ತು. ಅಲ್ಲಿ ಎಲ್ಲಾ ವರ್ಣದವರು ತಮ್ಮ ತಮ್ಮ ಧರ್ಮಗಳನ್ನು ಪಾಲಿಸುತ್ತಾ, ಸತ್ಯ ನಿಷ್ಠರಾಗಿಯೂ , ಸತ್ಕರ್ಮ ತತ್ಪರರಾಗಿಯೂ ವಾಸಿಸುತ್ತಿದ್ದರು. ಆ ನಗರದಲ್ಲಿ ಸಮಸ್ತವೇದಗಳನ್ನು ತಿಳಿದ ಶ್ರೌತ -ಸ್ಮಾರ್ತ ಕರ್ಮದಲ್ಲಿ ನಿಪುಣನೂ ಆದ ಆತ್ಮದೇವನೆಂಬ ಬ್ರಾಹ್ಮಣನು ವಾಸವಾಗಿದ್ದನು. ಅವನು ಪೌರೋಹಿತ್ಯ ವೃತ್ತಿಯಿಂದ ಜೀವಿಸುತ್ತಿದ್ದು ಶ್ರೀಮಂತನಾಗಿದ್ದನು, ಅವನಿಗೆ ಕುಲೀನಳೂ, ರೂಪವತಿಯೂ ಆದ ಹಠಮಾರಿ ಹೆಂಡತಿ ಇದ್ದಳು, ಅವಳ ಹೆಸರು ದುಂಧುಲಿ. ಅವಳು ಬೇರೆಯವರ ವಿಷಯದಲ್ಲಿ ಆಸಕ್ತಳೂ, ಕ್ರೂರಿಯೂ , ಮನೆಕೆಲಸದಲ್ಲಿ ನಿಪುಣಳು, ಲೋಭಿಯೂ, ಜಗಳಗಂಟಿಯೂ ಆಗಿದ್ದಳು.

               ಹೀಗೆ ಈ ಬ್ರಾಹ್ಮಣ ದಂಪತಿಗಳು ಪರಸ್ಪರ ಅನ್ಯೋನ್ಯತೆಯಿಂದ ಧನ-ಧಾನ್ಯಾದಿ ಭೋಗವಿಲಾಸದ ಜೀವನದಿಂದ ಸಂತೋಷದಿಂದಿದ್ದರೂ, ಸಂತಾನವಿಲ್ಲದ ದುಃಖದಿಂದ ದುಃಖಿಗಳಾಗಿದ್ದರು. ಪ್ರಾಯ ಸಂದು ಹೋದಂತೆ ಸಂತಾನಕ್ಕಾಗಿ ದೀನ ಬಡವರಿಗೆ ಗೋವು, ಸುವರ್ಣ , ಭೂಮಿ ,ವಸ್ತ್ರ ಮುಂತಾದವುಗಳನ್ನು ಯಥೇಚ್ಛವಾಗಿ ದಾನ ಮಾಡುವ ಮೂಲಕ ಪುಣ್ಯಕರ್ಮಗಳನ್ನು ಮಾಡಲು ಪ್ರಾರಂಭಿಸಿದರು.

                  ಈ ಪ್ರಕಾರದ ಧರ್ಮಕಾರ್ಯದಿಂದಾಗಿ ಅವರ ಸಂಪತ್ತಿನ ಬಹಳಷ್ಟು ಭಾಗ ಮುಗಿದು ಹೋದರು. ಸಂತಾನ ಪ್ರಾಪ್ತಿಯ ಯಾವ ಸೂಚನೆಯೂ ದೊರೆಯಲಿಲ್ಲ . ಇದರಿಂದ ಚಿಂತಾಕ್ರಾಂತನಾದ ಬ್ರಾಹ್ಮಣನು ದುಃಖಿತನಾಗಿ ಮನೆಬಿಟ್ಟು ಕಾಡಿಗೆ ಹೋದನು. ಮಟ ಮಟ ಮಧ್ಯಾಹ್ನದ ಸಮಯದಲ್ಲಿ ನೀರಡಿಕೆಯಾಗಿ ಒಂದು ಸರೋವರದ ಬಳಿಗೆ ಬಂದು ನೀರುಕುಡಿದು ತೃಷೆಯನ್ನು ತಣಿಸಿಕೊಂಡು ಅಲ್ಲೇ ಒಂದು ಮರದಡಿಯಲ್ಲಿ ವಿಶ್ರಾಂತಿ ಪಡೆಯತೊಡಗಿದನು. ಅದೇ ಸಮಯಕ್ಕೆ ಅಲ್ಲಿಗೆ ಓರ್ವ ಸನ್ಯಾಸಿಯು ಬರಲು, ಬ್ರಾಹ್ಮಣನು ಸನ್ಯಾಸಿಗೆ ವಂದಿಸಿ ಅಳತೊಡಗಿದನು. ಅಳುತ್ತಿರುವ ಬ್ರಾಹ್ಮಣನನ್ನು ಕಂಡ ಸನ್ಯಾಸಿಯು ” ಎಲೈ ಬ್ರಾಹ್ಮಣನೇ, ಏಕೆ ಅಳುತ್ತಿರುವೆ ? ನಿನಗಿರುವ ಚಿಂತೆಯಾದರೂ ಏನು “ಎಂದು ಕೇಳಿದನು.

               ಆಗ ಬ್ರಾಹ್ಮಣನು “ಸ್ವಾಮಿ ನನ್ನ ಪೂರ್ವ ಜನ್ಮದ ಪಾಪದಿಂದಾಗಿ ಸಂತಾನಹೀನನಾಗಿದ್ದೇನೆ. ಸಂತಾನರಹಿತವಾದ ಮನೆ, ಧನ, ಕುಲಗಳಿಗೆ ಧಿಕ್ಕಾರವಿರಲಿ. ಇಂತಹ ಪುತ್ರ ಹೀನನಾದ ನಿರ್ಭಾಗ್ಯನಾದ ನಾನು ಬದುಕಿ ಏನು ಪ್ರಯೋಜನ ?” ಎಂದು ದುಃಖದಿಂದ ವ್ಯಾಕುಲನಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದನು.

              ಇದನ್ನು ಕೇಳಿದ ಸನ್ಯಾಸಿಯು ತನ್ನ ಯೋಗ ಬಲದಿಂದ ಬ್ರಾಹ್ಮಣನ ಹಣೆಬರಹವನ್ನು ಅರಿತು, ನಿನ್ನ ಪ್ರಾರಬ್ಧದಿಂದಾಗಿ  ಏಳುಜನ್ಮಗಳವರೆಗೂ ನಿನಗೆ ಸಂತಾನವಾಗಲಾರದು. ಆದ್ದರಿಂದ ಸಂತಾನದ ಆಸೆಯನ್ನು ಬಿಟ್ಟು ಸನ್ಯಾಸವನ್ನು ಸ್ವೀಕರಿಸು ಎಂದು ಹೇಳಿದನು.

              ಇದನ್ನು ಕೇಳಿದ ಆತ್ಮದೇವನು ” ಹೆಂಡತಿ ಮಕ್ಕಳಿಲ್ಲದ ಸನ್ಯಾಸಾಶ್ರಮವು ಸರ್ವಥಾ ನೀರಸವಾಗಿದೆ ಮಕ್ಕಳು ಮೊಮ್ಮಕ್ಕಳು ತುಂಬಿದ ಗೃಹಸ್ಥಾಶ್ರಮವೇ ಸರಸವಾಗಿದ್ದು, ನಿಮ್ಮ ಯೋಗಬಲದಿಂದ ನನಗೆ ಪುತ್ರ ಸಂತಾನವನ್ನು ಕರುಣಿಸಿರಿ. ಇಲ್ಲವಾದಲ್ಲಿ ನಿಮ್ಮ ಮುಂದೆಯೇ ನಾನು ಪ್ರಾಣತ್ಯಾಗವನ್ನು ಮಾಡುವೆನು” ಎಂದು ಹೇಳಿದನು.

            ಆತ್ಮದೇವನ ಆಗ್ರಹದ ಮಾತನ್ನು ಕೇಳಿದ ತಪೋನಿಷ್ಠರಾದ ಯತಿಯು ” ಎಲೈ ಬ್ರಾಹ್ಮಣನೇ ವಿಧಾತನ ಬರಹವನ್ನು ತಿದ್ದುವ ಹಠವನ್ನು ಮಾಡಿದ ರಾಜ ಚಿತ್ರಕೇತನು ಬಹಳಷ್ಟು ಕಷ್ಟವನ್ನು ಅನುಭವಿಸಬೇಕಾಯಿತು ಅವನಂತೆ ಭಾರಿ ಹಠವನ್ನು ತೊಟ್ಟು ನನ್ನ ಮುಂದೆ ನಿಂತಿರುವ ನಿನಗೆ ನಾನೇನು ಹೇಳಲಿ ಎಂದು ವಿಧವಿಧವಾಗಿ ಅರ್ಥೈಸಿದರು.

           ಎಷ್ಟು ಹೇಳಿದರೂ ತನ್ನ ಆಗ್ರಹವನ್ನು ಬಿಡದಿರುವ ಆತ್ಮದೇವನಿಗೆ ಯತಿಯು ಒಂದು ಫಲವನ್ನಿತ್ತು ಇದನ್ನು ನಿನ್ನ ಪತ್ನಿಗೆ ತಿನ್ನಿಸು. ಆಕೆಯು ಒಂದು ವರ್ಷದ ತನಕ ಸತ್ಯ , ಶೌಚ , ದಯಾ, ದಾನ ಮತ್ತು ಒಪ್ಪತ್ತು ಊಟದ ನಿಯಮದಿಂದಿರಲು ನಿನಗೆ ಶುದ್ಧ ಸ್ವಭಾವದ ಪುತ್ರ ಸಂತಾನವಾಗುವುದು” ಎಂದು ಹೇಳಿ ಸನ್ಯಾಸಿಯು ಹೊರಟುಹೋದನು.

             ಬ್ರಾಹ್ಮಣನು ಸಂತೋಷದಿಂದ ಮನೆಗೆ ಹಿಂತಿರುಗಿ ನಡೆದ ಘಟನೆಯನ್ನು ಹೆಂಡತಿಗೆ ವಿವರಿಸಿ ಆ ಫಲವನ್ನು ಅವಳ ಕೈಯಲ್ಲಿಟ್ಟು ಹೊರಗೆ ಹೊರಟುಹೋದನು.

            ಕುಟಿಲ ಸ್ವಭಾವದ ಅವನ ಹೆಂಡತಿಯು ತನ್ನ ಗರ್ಭಿಣಿ ತಂಗಿಯನ್ನು ಕುರಿತು “ನನಗಾದರೋ ಭಾರಿ ಚಿಂತೆಯಾಗಿದೆ. ಈ ಫಲವನ್ನು ತಿಂದು ನಾನು ಗರ್ಭವತಿಯಾದರೆ ನನ್ನ ಹೊಟ್ಟೆಯು ಬೆಳೆಯುವುದು ನನಗಿಷ್ಟಬಂದ ಏನನ್ನೂ ತಿನ್ನುವುದು, ಕುಡಿಯುವುದು ಅಸಾಧ್ಯ. ಇದರಿಂದ ನನ್ನ ಶಕ್ತಿಯು ಕ್ಷಯವಾಗುವುದು ಆಸಮಯದಲ್ಲಿ ಊರಿನಲ್ಲಿ ದರೋಡೆಕೋರರ ಅಕ್ರಮಣವಾದರೆ ಗರ್ಭಿಣಿಯಾದ ನಾನು ಓಡಿಹೋಗಿ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರಸವಕಾಲದ ಭಯಂಕರ ವೇದನೆಯನ್ನು ಸುಕುಮಾರಿಯಾದ ನಾನು ಹೇಗೆ ಸಹಿಸಬಲ್ಲೆ ಮಗುವನ್ನು ಹಡೆದ ನಂತರವೂ ನನಗೆ ಮಗುವಿನ ಲಾಲನೆ ಪಾಲನೆಯು ತುಂಬಾ ಕಷ್ಟವಾಗುವುದು. ಎಲ್ಲಕ್ಕಿಂತಲೂ ಬಂಜೆಯಾಗಿರುವುದೇ ಪರಮ ಸುಖ” ಎಂದು ಹೇಳಿದಳು.

            ಆಗ ತಂಗಿಯು ನನ್ನ ಗಂಡನಿಗೆ ನೀನು ಹಣವನ್ನಿಟ್ಟು ಸಂತೋಷಪಡಿಸಿದರೆ ಗರ್ಭಿಣಿಯಾದ ನಾನು ನನ್ನ ಮಗುವನ್ನು ನಿನಗೆ ಕೊಡುವೆನು ನನಗೆ ಹೆರಿಗೆಯಾಗುವ ತನಕ ನೀನು ಮನೆಯಲ್ಲೇ ಗರ್ಭಿಣಿಯಂತೆ ನಟಿಸುತ್ತಾ ಇರು. ನನ್ನ ಮಗುವು ಸತ್ತುಹೋಯಿತು ಎಂದು ಎಲ್ಲರಿಗೂ ಹೇಳುವೆನು. ನಂತರ ನಾನು ನಿನ್ನ ಮನೆಯಲ್ಲೇ ಇದ್ದು ಮಗುವಿನ ಲಾಲನೆ, ಪೋಷಣೆಯನ್ನು ಮಾಡುವೆನು. ಈಗ ನೀನು ಋಷಿಯ ಮಾತನ್ನು ಪರೀಕ್ಷಿಸಲು ಈ ಫಲವನ್ನು ಹಸುವಿಗೆ ತಿನ್ನಿಸು ಎಂದಳು. ತಂಗಿಯ ಮಾತಿನಂತೆ ಸನ್ಯಾಸಿಕೊಟ್ಟ ಹಣ್ಣನ್ನು ಹಸುವಿಗೆ ತಿನಿಸಿದಳು.

           ಅದೇ ಸಮಯಕ್ಕೆ ಮನೆಗೆ ಹಿಂತಿರುಗಿದ ಗಂಡನು ಫಲವನ್ನು ತಿಂದೆಯಾ ಎಂದು ಕೇಳಲು ದುಂಧುಲಿಯು ಹೌದೆಂದು ಹೇಳಿದಳು. ಸ್ವಲ್ಪ ದಿನದ ನಂತರ ಹಸುವು ಗರ್ಭ ಧರಿಸಿತು.  ಇದಾದ ನಂತರ ಸಮಯಕ್ಕೆ ಸರಿಯಾಗಿ ತಂಗಿಗೆ ಹೆರಿಗೆ ಯಾಗಲು ಅವಳ ಗಂಡನು ಯಾರಿಗೂ ತಿಳಿಯದಂತೆ ಮಗುವನ್ನು ತಂದು ದುಂಧುಲಿಗೆ ಕೊಟ್ಟನು. ಮಗುವು ಸಿಕ್ಕಿದ ತಕ್ಷಣ ದುಂಧುಲಿಯು ತನಗೆ ಗಂಡು ಮಗು ಹುಟ್ಟಿತೆಂದು ತಿಳಿಸಿದಳು. ಸಂತೋಷಗೊಂಡ ಆತ್ಮದೇವನು ತನ್ನ ಮಗುವಿಗೆ ಜಾತಕರ್ಮಾದಿ ಸಂಸ್ಕಾರಗೈದು ದುಂಧುಕಾರಿ ಎಂದು ನಾಮಕರಣ ಮಾಡಿದನು.

              ಪೂರ್ವ ನಿರ್ಧಾರದಂತೆ ಮಗುವಿನ ಪಾಲನೆಗೋಸ್ಕರ ತಂಗಿಯನ್ನು ತನ್ನ ಮನೆಗೆ ಕರೆಸಿಕೊಂಡಳು. ಇದಾದ ಮೂರು ತಿಂಗಳಿಗೆ ಹಣ್ಣು ತಿಂದ ಹಸುವು ಮನುಷ್ಯಾಕಾರದ ಸುಂದರ ಮಗುವಿಗೆ ಜನ್ಮನೀಡಿತು. ಇದರಿಂದ ಸಂತೋಷಗೊಂಡ ಬ್ರಾಹ್ಮಣನು ಆ ಮಗುವಿಗೆ ಜಾತಕರ್ಮಾದಿ ಸಂಸ್ಕಾರಗಳನ್ನು ಮಾಡಿದನು. ಆ ಮಗುವಿನ ಕಿವಿಯು ಹಸುವಿನ ಕಿವಿಯಂತಿದ್ದ ಕಾರಣ, ಅವನಿಗೆ ಗೋಕರ್ಣ ನೆಂದು ನಾಮಕರಣ ಮಾಡಿದನು.

ಮುಂದುವರೆಯುವುದು……

ಪಲ್ಲವಿ 

LEAVE A REPLY

Please enter your comment!
Please enter your name here