Home ಧಾರ್ಮಿಕ ಸುದ್ದಿ ಮೂಳೂರು ಶ್ರೀ ಮುಂಡಿತ್ತಾಯನಿಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

ಮೂಳೂರು ಶ್ರೀ ಮುಂಡಿತ್ತಾಯನಿಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

1210
0
SHARE

ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ಧೂಮಾವತಿ ಬಂಟ ಪರಿವಾರ ದೈವಗಳ ನವೀಕೃತ ಶಿಲಾಮಯ ದೈವಸ್ಥಾನದಲ್ಲಿ ಫೆ. 7ರಂದು ಬೆಳಗ್ಗೆ ಗಂಟೆ 9.23ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ವೇ|ಮೂ| ಕುಡುಪು ನರಸಿಂಹ ತಂತ್ರಿ, ಗುರುಪುರ ಶ್ರೀ ಅಣ್ಣು ಭಟ್ ಅವರ ನೇತೃತ್ವದಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಿತು.

ಪ್ರತಿಷ್ಠಾಭಿಷೇಕ

ದೈವಗಳಿಗೆ ಬ್ರಹ್ಮಕಲಶಾಭಿಷೇಕ, ಧ್ವಜಸ್ತಂಭ ಪ್ರತಿಷ್ಠಾಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ ಸೇರಿ ಹಲವು ಧಾರ್ಮಿಕ ಪೂಜಾಕೈಂಕರ್ಯಗಳು ಜರಗಿದವು.
ಬಳಿಕ ದೈವದರ್ಶನ ನಡೆದು ಬೆಳ್ಗೊಡೆ ಏರಿಸಲಾಯಿತು. ಅನಂತರ ಪಲ್ಲಪೂಜೆ ನಡೆದು ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೋಣಿಂಜೆಗುತ್ತು ಡಾ| ರವಿ ಶೆಟ್ಟಿ ಕತಾರ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ. ಸುಕುಮಾರ ಶೆಟ್ಟಿ, 16 ಗುತ್ತುಮನೆಯವರು, ಇತರ ಸಮಿತಿ ಅಧ್ಯಕ್ಷರು, ಗೌರವಾಧ್ಯಕ್ಷರು, ಸದಸ್ಯರು, ಮೊದಲಾದ ಭಕ್ತರು ಉಪಸ್ಥಿತರಿದ್ದರು.

ಎಲ್ಲೆಡೆ ಸಡಗರ
ಬ್ರಹ್ಮಕಲಶೋತ್ಸವ ಆರಂಭವಾಗುತ್ತಿದ್ದಂತೆ ಚೆಂಡೆ- ವಾದ್ಯ- ಸಂಗೀತದ ನಿನಾದ ಕೇಳಿಬಂತು. ಸುಡ್ಡುಮದ್ದು ಪ್ರದರ್ಶನ, ಪೂಜೆ, ದೈವದರ್ಶನವನ್ನು ಭಕ್ತರು ಕಣ್ತುಂಬಿಕೊಂಡರು.
ದೈವಸ್ಥಾನವನ್ನು ಹೂವು, ಅಡಿಕೆ, ತೋರಣಗಳಿಂದ ಅಲಂಕೃತಗೊಳಿಸಿ, ಮಲ್ಲಿಗೆ ಪರಿಮಳ ಎಲ್ಲೆಡೆ ಪಸರಿಸಿತ್ತು. ಸ್ವಯಂಸೇವಕರು ಉತ್ಸಾಹದಿಂದ ಕೆಲಸದಲ್ಲಿ ನಿರತರಾಗಿದ್ದರು.
ಸಂಜೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ‘ತುಳುವ ನಡಕೆ’ ನೃತ್ಯ ರೂಪಕ ನಡೆಯಿತು. ಫೆ. 6ರಂದು ಸಂಜೆ ರಾಜ್ಯ ಪ್ರಶಸ್ತಿ ವಿಜೇತೆ ಕಸ್ತೂರಿ(ಅಂಧ ಕಲಾವಿದೆ) ಅವರಿಂದ ಸಂಗೀತ ಗಾಯನ, ‘ಸುಂದ-ಉಪಸುಂದರ ಕಾಳಗ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here