ಮಲ್ಪೆ : ಶ್ರೀ ಬಗ್ಗು ಪಂಜುರ್ಲಿ ಮೂಲ ಕ್ಷೇತ್ರ ಕಲ್ಮಾಡಿ ಬಗ್ಗುಮುಂಡ ಶ್ರೀ ನಾಗ ಪರಿವಾರ ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀ ಬಗ್ಗುಪಂಜುರ್ಲಿ, ಪರಿವಾರ ದೈವಗಳ ಕಾಲಾವಧಿ ನೇಮ ಮಾ. 29ರಿಂದ ಮಾ.31ರವರೆಗೆ ನಡೆಯಲಿದೆ. ಆ ಪ್ರಯುಕ್ತ ಮಾ. 29ರಂದು ಬೆಳಗ್ಗೆ ನಾಗ ದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ಬಗ್ಗು ಪಂಜುರ್ಲಿ ದೈವದ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪನಿವಾರ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಮಾ.30 ರಂದು ಸಂಜೆ ದೈವಸ್ಥಾನದಿಂದ ಭಂಡಾರ ಹೊರಟು, ಕೋಲ ಚಪ್ಪರ ಪ್ರವೇಶ ರಾತ್ರಿ 10 ಗಂಟೆಗೆ ಶ್ರೀ ಬಗ್ಗು ಪಂಜುರ್ಲಿ ನೇಮ ಜರಗಲಿದೆ.
ಮಾ. 31ರಂದು ಸಂಜೆ 7 ಗಂಟೆಗೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಲ್ಪೆ ಮೀನು ಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಬಾಲಕಿಯರ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಯಾದವ ಕರ್ಕೇರ, ನಗರಸಭಾ ಸದಸ್ಯ ನಾರಾ ಯಣ ಕುಂದರ್, ಮತೊದ್ಯಮಿ ರಮೇಶ್ ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಆಳ ಸಮುದ್ರ ಮೀನುಗಾರರ ಮಾಲಕರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಟಿ.ವಿ. ವಾಹಿನಿ ನಿರೂಪಕಿ ಅರ್ಪಿತಾ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಈಜುಪಟು ಗಂಗಾಧರ್ ಜಿ. ಕಡೆಕಾರ್, ಭಜನ ತರಬೇತಿದಾರ ಧನಂಜಯ ಕಾಂಚನ್, ಅಂತಾರಾಷ್ಟ್ರೀಯ ಮಟ್ಟದ ವೈಟ್ಲಿಫ್ಟರ್ ವಿಥೇಶ್ ಕರ್ಕೇರ , ಬಾಲ ಪ್ರತಿಭೆ ತನುಶ್ರೀ ಪಿತ್ರೋಡಿ ಅವರನ್ನು ಸಮ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂದು ಸಂಜೆ 6 ಗಂಟೆಗೆ ಗೋಲ್ಡನ್ ಬುಕ್ ಆಫ್ ವರ್ಲ್ ರೆಕಾರ್ಡ್ ಸಾಧಕಿ ತನುಶ್ರೀ ಪಿತ್ರೋಡಿ ಅವರಿಂದ ನೃತ್ಯ ಸಿಂಚನ, ಸ್ಥಳೀಯ ನೃತ್ಯ ಪ್ರತಿಭೆಗಳಿಂದ ನೃತ್ಯ ವೈಭವ, ರಾತ್ರಿ 9 ಗಂಟೆಗೆ ನಮ್ಮ ಕಲಾವಿದೆರ್ ಬೆದ್ರ ತಂಡದ ಕಲಾವಿದರಿಂದ ತುಳು ನಾಟಕ “ಉಲಾಯಿ ಪಿದಾಯಿ’ ಪ್ರದರ್ಶನಗೊಳ್ಳಲಿದೆ.
ಸೇವಾ ಕಾರ್ಯ
ದೈವಸ್ಥಾನದ ವತಿಯಿಂದ ಸಮಾಜ ಮುಖೀ ಸಂಘಟನೆಗಳ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಗೆ ಧನ ಸಹಾಯ, ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಧಾರ್ಮಿಕ ಉತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ ಮಾಡ ಲಾಗುತ್ತಿದೆ. ಸ್ಥಳೀಯ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ, ಸ್ಥಳೀಯ ನೃತ್ಯ ಪ್ರತಿಭೆಗಳಿಗೆ ಪ್ರೋತ್ಸಾಹ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ ನಡೆಯಲಿದೆ ಎಂದು ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಕೊಡವೂರು, ಸಾನಿಕ ಚಂದ್ರಶೇಖರ್ ಸೇರಿಗಾರ್ ಬಗ್ಗುಮನೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.