Home ನಂಬಿಕೆ ಸುತ್ತಮುತ್ತ ಪ್ರಥಮ ಪೂಜಿತ ಜಗವಂದಿತ

ಪ್ರಥಮ ಪೂಜಿತ ಜಗವಂದಿತ

140
0
SHARE

ನಾವು ಕಲ್ಪಿಸಿಕೊಂಡಿರುವ ಗಣೇಶನ ಆಕೃತಿ ಹಲವಾರು ಅರ್ಥಗಳನ್ನು ಹೊಮ್ಮಿಸುತ್ತದೆ. ಒಂದು ಕಾಲನ್ನು ಮಡಚಿ, ಇನ್ನೊಂದು ಕಾಲನ್ನು ನೆಲದಲ್ಲಿ ಇರಿಸಿ ಕುಳಿತ ಗಣಪತಿಯ ರೂಪದ ಆಶಯ ಭೂಮಿಯ ಮೇಲೆ ಭದ್ರವಾಗಿ ಊರಿಕೊಂಡು ಮೇಲ್ಮುಖವಾಗಿ ಬೆಳೆಯಬೇಕು ಎಂದೇ ಇರಬೇಕು! ನಿಜವಾಗಿಯೂ ದೇವದೇವತೆಗಳು ಇದ್ದಾರೆಯೇ? ಅವರ ಇರವನ್ನು ಆಂತರ್ಯದಲ್ಲಿ ಕಂಡು, ಕೇಳಿ, ಅನುಭವಿಸಿದ ಅನೇಕ ಋಷಿಮುನಿಗಳು ಆಗಿಹೋಗಿದ್ದಾರೆ. ಸುಲಭವಾಗಿ ಒಲಿಯಬಲ್ಲ ದೇವರುಗಳಲ್ಲಿ ಒಬ್ಬ ವಿನಾಯಕ. ಒಂದರ್ಥದಲ್ಲಿ ಪಾರಲೌಕಿಕಕ್ಕೂ ಲೌಕಿಕಕ್ಕೂ ಆತ ಸಂಪರ್ಕ ಸೇತು ಇದ್ದ ಹಾಗೆ. ಇಂದು ಗಣೇಶ ಚತುರ್ಥಿ. ಅವನಿಂದ ಕಲಿಯಬಹುದಾದ ಬದುಕಿನ ಪಾಠಗಳ ವಿಶೇಷ ಪುಟ.

ನಮ್ಮವರ ಬಗ್ಗೆಯೂ ಯೋಚನೆ
ಬಾಲ ಗಣಪನಿಗೆ ಅಕ್ಕಿ ಮತ್ತು ಹಾಲಿನ ಖೀರು ಪಂಚಪ್ರಾಣ. ಅದಕ್ಕಾಗಿ ಒಮ್ಮೆ ಆತ ಬಾಲಕನಾಗಿ, ಅಕ್ಕಿ ಮತ್ತು ಹಾಲನ್ನು ಹಿಡಿದು ಒಂದು ಹಳ್ಳಿಯ ಹಳೆಯ ಗುಡಿಸಲಿಗೆ ಹೋದನು. ಅಲ್ಲಿ ವಾಸವಿದ್ದ ಮಹಿಳೆ ಖೀರು ಮಾಡಲು ಒಪ್ಪಿಕೊಂಡಳು. ಬಾಲಕ ಹೊರಗಡೆ ಆಟವಾಡಲು ಹೊರಟು ಹೋದ. ಆಕೆ ಮಲಗಿದಳು. ಎದ್ದಾಗ ಖೀರು ಸಿದ್ಧವಾಗಿತ್ತು. ಆಕೆಗೂ ಹಸಿವಾಗಿದ್ದರಿಂದ ಬಾಲಕನನ್ನು ಮರೆತು, ಗಣೇಶ ವಿಗ್ರಹಕ್ಕೆ ನೈವೇದ್ಯ ಅರ್ಪಿಸಿ, ತಾನು ತಿಂದುಬಿಟ್ಟಳು.
ಬಾಲಕ ಬಂದಾಗ ಖೀರನ್ನು ತಿನ್ನಲು ಕೊಟ್ಟಳು. ನಾನು ಈ ಮೊದಲೇ ಖೀರು ತಿಂದೆ ಎಂದು ಒಪ್ಪಿಕೊಂಡಳು. ಬಾಲಕ ತಾನೂ ಪ್ರಸಾದವನ್ನು ನಾನು ಆಗಲೇ ಸ್ವೀಕರಿಸಿದೆ ಎಂದಾಗ ಮಹಿಳೆಗೆ ಆಶ್ಚರ್ಯ. ಮನೆಗೆ ಬಾಲ ಗಣಪನೇ ಬಂದಿದ್ದಾನೆ ಎಂದು ಖುಷಿ ಪಟ್ಟಳು

ಇನ್ನೊಬ್ಬರ ಮೇಲೆ ಅಸಹನೆ ಸರಿಯಲ್ಲ
ಗಣಪತಿ ಸದಾ ತಿನ್ನುವುದರಲ್ಲಿ ಕಾಲ ಕಳೆಯುತ್ತಿದ್ದನು. ಆತನ ಹೊಟ್ಟೆ ಬಹಳ ದೊಡ್ಡದಾಗಿತ್ತು. ಎಷ್ಟು ತಿಂದರೂ ಕೂಡ ಕಡಿಮೆಯೇ. ಅಂತೆಯೇ ತಿಂಡಿ ಪ್ರಿಯ ಗಣಪನೂ ಒಂದೂ ಸಾರಿ, ಸರಿಯಾಗಿ ಹೊಟ್ಟೆ ಬಿರಿಯುವಂತೆ ತಿಂದು ಬಿಟ್ಟಿದ್ದನು. ಮುಂದೆ ನಡೆಯಲು ಕೂಡ ಕಷ್ಟವಾಗುವ ಸ್ಥಿತಿಯಾಗಿತ್ತು. ಈ ಮಧ್ಯೆ ಹಾಗೇಯೇ ದಾರಿ ಸಾಗಿಸುತ್ತಾ ಹೊರಟ್ಟಿದ್ದ ನಮ್ಮ ಗಣಪ ಕಲ್ಲು ಎಡವಿ ಬಿದ್ದೇ ಬಿಟ್ಟನು. ಆಗ ಅವನ ಡೊಳ್ಳು ಹೊಟ್ಟೆ ಒಡೆದು ಹೋಯಿತು. ಇದನ್ನೇ ನೋಡುತ್ತಿದ್ದ, ಚಂದ್ರ ಗಣಪನ ಸ್ಥಿತಿಯನ್ನು ಕಂಡು ಮುಸಿ ಮುಸಿ ನಗುತ್ತಿದ್ದನು. ಪಾರ್ವತಿ ಸುತ ಗಣಪನಿಗೆ ಎಲ್ಲೆಲ್ಲಿದ ಸಿಟ್ಟು ಬಂದಿತ್ತು. ತತ್‌ಕ್ಷಣ ಚಂದ್ರನಿಗೆ ಶಾಪ ನೀಡಿದನು. ನನ್ನ ಮೆರವಣಿಗೆ ಆಗುವಾಗ, ಭಕ್ತರು ನಿನ್ನನ್ನು ನೋಡದಂತಾಗಲಿ ಎಂದು ಶಾಪವಿತ್ತನು. ಅದಕ್ಕೆ ಗಣೇಶ ಚೌತಿಯಂದು ಹೆಚ್ಚಾಗಿ ಚಂದ್ರ ದರ್ಶನ ಮಾಡುವುದಿಲ್ಲ.

ವಿಷ್ಣುವಿನ ಶಂಖ ಕಳೆದುಹೋದ ಕಥೆ
ವಿಷ್ಣು ಎಂದರೆ ಸುದರ್ಶನ ಚಕ್ರ ಮತ್ತು ಶಂಖ ಎಲ್ಲರ ಕಣ್ಣ ಮುಂದೆ ಬರುತ್ತದೆ. ತನ್ನ ಜೊತೆ ಶಂಖ ಯಾವತ್ತು ಇರುತ್ತದೆ. ಆದರೆ ಒಂದು ದಿನ ವಿಷ್ಣುವಿನ ಶಂಖ ಕಾಣೆಯಾಗುತ್ತದೆ. ವಿಷ್ಣು ತನ್ನ ಎಲ್ಲ ಶಕ್ತಿಯನ್ನು ಬಳಸಿ ಶಂಖ ಹುಡುಕಲು ಆರಂಭಿಸಿದ. ಶಂಖವನ್ನು ಹುಡುಕುತ್ತಿದ್ದ ವಿಷ್ಣುವಿಗೆ ದೂರದಲ್ಲೆಲ್ಲೊ ಶಂಖನಾದ ಕೇಳಿಸುತ್ತದೆ. ಆ ಧ್ವನಿಯನ್ನು ಹುಡುಕಿಕೊಂಡು ಹೋದ ಆತನಿಗೆ ಕೈಲಾಸದಲ್ಲಿ ಶಂಖನಾದ ಕೇಳಿಸುತ್ತದೆ. ಕೈಲಾಸ ತಲುಪಿದ ವಿಷ್ಣು ಗಣೇಶ ಶಂಖವನ್ನು ಆಸಕ್ತಿಯಿಂದ ಊದುತ್ತಿರುವುದು ಕಾಣಸಿಗುತ್ತದೆ. ಅದನ್ನು ಕಂಡ ವಿಷ್ಣು, ಗಣೇಶ ಸುಲಭವಾಗಿ ಶಂಖ ವಾಪಸ್ಸು ಮಾಡಲ್ಲ ಎಂದು ತಿಳಿದು ಶಿವನ ಬಳಿ ಹೋಗಿ ಶಂಖ ವಾಪಸ್ಸು ಮಾಡುವಂತೆ ಹೇಳುತ್ತಾನೆ. ಆದರೆ ಶಿವ ತನಗೂ ಗಣೇಶನನ್ನು ಪ್ರಶ್ನಿಸುವ ಶಕ್ತಿ ಇಲ್ಲ .ಗಣೇಶನನ್ನು ಪ್ರಾರ್ಥಿಸಿದರೆ, ಆತನನ್ನು ಪೂಜಿಸಿದರೆ ಮಾತ್ರ ಆತ ಶಂಖ ವಾಪಸ್ಸು ನೀಡುವನು ಎನ್ನುತ್ತಾನೆ. ಕೊನೆಗೆ ವಿಷ್ಣು ಪೂಜೆಗೆ ಎಲ್ಲ ಸಿದ್ಧತೆ ಮಾಡಿ ಭಕ್ತಿಯಿಂದ ಪೂಜಿಸುತ್ತಾನೆ. ಇದರಿಂದ ಖುಷಿಗೊಂಡ ಗಣೇಶ ವಿಷ್ಣುವಿನ ಶಂಖವನ್ನು ವಾಪಸ್ಸಾಗಿಸುತ್ತಾನೆ

ನಿಯಮ ಪಾಲನೆ ಅಗತ್ಯ
ಗಣೇಶ ಹುಟ್ಟಿದ ಸಂದರ್ಭದಲ್ಲಿ ಶಿವ ದೇವರು ಒಂದು ಹೊಸ ನಿಯಮವನ್ನು ಮಾಡುತ್ತಾರೆ. ಯಾವುದೇ ಕೆಲಸ ಕಾರ್ಯಗಳಿಗೆ ಹೋಗುವಾಗಲು ಮೊದಲು ಗಣೇಶನನ್ನು ಪೂಜಿಸಿ ಹೊರಡಬೇಕೆಂಬ ನಿಯಮ. ಸ್ವಲ್ಪ ಸಮಯ ಕಳೆದಾಗ ಸ್ವತಃ ಶಿವನೇ ಈ ನಿಯಮವನ್ನು ಮರೆತು ತ್ರಿಪುರ ದಹನ ಯುದ್ಧಕ್ಕೆ ತೆರಳುತ್ತಾರೆ. ಯುದ್ಧದಲ್ಲಿ ಶಿವನ ರಥದ ಚಕ್ರ ನೆಲದಲ್ಲಿ ಹೂತು ಸೋಲಾಗುತ್ತದೆ. ಆಗ ಶಿವನಿಗೆ ತಾನು ಮಾಡಿದ ನಿಯಮ ನೆನಪಾಗುತ್ತದೆ. ಆ ಕ್ಷಣವೇ ಗಣೇಶನ ಆರಾಧನೆಯನ್ನು ಮಾಡಿ ಯುದ್ಧದಲ್ಲಿ ಜಯ ಗಳಿಸುತ್ತಾರೆ.

ಹಣ ಸಂಪತ್ತು ಶಾಶ್ವತವಲ್ಲ
ಒಮ್ಮೆ ಕುಬೇರ ಎಲ್ಲಾ ದೇವಾನು ದೇವತೆಗಳನ್ನು ಔತಣ ಕೂಟಕ್ಕೆ ಆಹ್ವಾನಿಸಿದನು. ಅದರಂತೆ ಶಿವ ಪಾರ್ವತಿಯರು ತಮ್ಮ ಅನುಪಸ್ಥಿತಿಯಲ್ಲಿ ಗಣೇ ಶ ನನ್ನು ಕೂಟಕ್ಕೆ ಕಳು ಹಿಸಿ ಕೊಟ್ಟರು. ಕುಬೇರನಿಗೆ ತಾನು ತುಂಬಾ ಸಂಪತ್ತು ಉಳ್ಳವನು, ತನಗಿಂತ ಮಿಗಿಲಾದವರು ಯಾರೂ ಇಲ್ಲ ಎಂದು ಬೀಗುವಾಗ ಗಣೇಶನಿಗೆ ಇವನ ಸೊಕ್ಕನ್ನು ಹೇಗಾದರೂ ಕೊನೆಗೊಳಿಸ ಬೇಕೆಂದು ಕೊಂಡು ಊಟಕ್ಕೆ ಕುಳಿತಾಗ ಎಲ್ಲವನ್ನೂ ಖಾಲಿ ಮಾಡುತ್ತಾನೆ ಕುಬೇರ ಅವನಿಗೆ ಬಡಿಸಿ ಬಡಿಸಿ ಸೋತು
ಹೋಗುತ್ತಾನೆ. ಅವನ ಬಂಗಾರ, ಬೆಳ್ಳಿ, ವಜ್ರ ಎಲ್ಲವನ್ನೂ ನೀಡಿ ದರೂ ಪುಟ್ಟ ಗಣೇಶನಿಗೆ ಅದು ಸಾಲುವುದಿಲ್ಲ. ಆಗ ಕುಬೇರನಿಗೆ ತನ್ನ ತಪ್ಪಿನ ಅರಿವಾಗುತ್ತದೆ ನಾನು ಇದ್ದಾಗ ಜಂಬ ಪಡಬಾರದಿತ್ತು ಎಂದು ಅವನಿಗೆ ಅರಿವಾಗುತ್ತದೆ.

ಗಣೇಶ ಗಜಮುಖನಾದ ಕಥೆ
ಒಂದು ಬಾರಿ ಶಿವನು ಕೈಲಾಸದಿಂದ ಹೊರಗೆ ಹೋಗಿದ್ದಾಗ ಮನೆಯಲ್ಲಿ ಏಕಾಂಗಿ ಯಾಗಿ ಕುಳಿತಿದ್ದ ಪಾರ್ವತಿ ದೇವಿಗೆ ಸ್ನಾನಕ್ಕೆ ತೆರಳಲು ಮನಸ್ಸಾಗುತ್ತದೆ. ಆದರೆ ಮನೆಯನ್ನು ಕಾಯಲು ಯಾರೂ ಇಲ್ಲದೇ ಇರುವ ಸಂದರ್ಭದಲ್ಲಿ ಸ್ನಾನಕ್ಕೆ ತೆರಳುವು ದಾದರೂ ಹೇಗೆ ಎಂಬ ಯೋಚನೆಯಲ್ಲಿ ಮುಳುಗಿದ್ದ
ಆಕೆಗೆ ತತ್‌ಕ್ಷಣವೇ ಒಂದು ಉಪಾಯ ಹೊಳೆಯುತ್ತದೆ. ಆಕೆ ತನ್ನ ದೇಹದಲ್ಲಿನ ಮಣ್ಣಿನಿಂದಲೇ ಒಂದು ಮೂರ್ತಿಯನ್ನು ತಯಾರಿಸಿ, ಅದಕ್ಕೆ ಜೀವ ನೀಡುತ್ತಾಳೆ ಮತ್ತು ಆ ಬಾಲಕನಿಗೆ ತಾನು ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯೊಳಕ್ಕೆ ಯಾರನ್ನೂ ಪ್ರವೇಶಿಸದಂತೆ ನೋಡಿಕೊಳ್ಳಲು ತಿಳಿಸಿ ಪಾರ್ವತಿ ಸ್ನಾನಕ್ಕೆ ತೆರಳುತ್ತಾಳೆ. ಅದೇ ಸಂದರ್ಭದಲ್ಲಿ ಹೊರ ಹೋಗಿದ್ದ ಶಿವ ಮನೆಗೆ ಬರುತ್ತಾನೆ. ಆದರೆ, ಶಿವನ ಪರಿಚಯವೇ ಇಲ್ಲದ ಬಾಲಕ ಆತನ್ನು ಒಳ ಪ್ರವೇಶಿಸದಂತೆ
ತಿಳಿಸುತ್ತಾನೆ. ಪರಿ ಪರಿಯಾಗಿ ಕೇಳಿಕೊಂಡ ಈಶ್ವರನ ಯಾವ ಮಾತಿಗೂ ಮರುಳಾಗದ ಬಾಲಕನ ಮೇಲೆ ಕುಪಿತನಾದ ಶಿವ ಆತನ ತಲೆಯನೆ
ಕತ್ತರಿಸಿ ಬಿಡುತ್ತಾನೆ. ಆ ಸಮಯಕ್ಕೆ ಸರಿಯಾಗಿ ಸ್ನಾನ ಮುಗಿಸಿ ಪಾರ್ವತಿ ದೇವಿ ಹೊರ ಬಂದಾಗ ತನ್ನ ಮಗನ ದುಸ್ಥಿತಿಯನ್ನು ಕಂಡು ಮರುಗುತ್ತಾಳೆ, ಅಳುತ್ತಾಳೆ. ಹೇಗಾದರೂ ಮಾಡಿ ತನ್ನ ಪುತ್ರನನ್ನು ಮತ್ತೆ ಬದುಕಿಸಿ ಕೊಡುವಂತೆ ಬೇಡಿಕೊಳ್ಳುತ್ತಾಳೆ. ಮಡದಿಯ ದುಃಖದಿಂದ ಕಂಗೆಟ್ಟ ಶಿವ, ತನ್ನ ಗಣಗಳಿಗೆ ಉತ್ತರ ದಿಕ್ಕಿಗೆ ಮಲಗಿರುವ ಜೀವಿಯ ತಲೆಯನ್ನು ತರುವಂತೆ ಆಜ್ಞಾಪಿಸುತ್ತಾನೆ. ಅದರಂತೆ ಉತ್ತರ ದಿಕ್ಕಿಗೆ ಮಲಗಿದ್ದ ಆನೆಯ ತಲೆಯನ್ನು ತಂದು ಶಿವನಿಗೆ ಒಪ್ಪಿಸುತ್ತಾರೆ. ಆ ತಲೆಯನ್ನು ರುಂಡ ಕಳೆದುಕೊಂಡು ಬಿದ್ದಿದ್ದ ಮುಂಡಕ್ಕೆ ಜೋಡಿಸಿ ಮತ್ತೆ ಆ ಬಾಲಕನಿಗೆ ಜೀವದಾನ ಮಾಡುತ್ತಾನೆ. ಅಂದಿನಿಂದ ಗಣಪತಿಗೆ ಗಜಮುಖ ಎಂಬ ಹೆಸರು ಬರುತ್ತದೆ.

ಗಣೇಶ ಮತ್ತು ಕಾವೇರಿ ನದಿ
ಸೂಕ್ತ ಸ್ಥಳದಲ್ಲಿ ನದಿ ಸೃಷ್ಟಿ ಸ ಬೇ ಕೆಂಬ ಉದ್ದೇ ಶ ದಿಂದ ತನ್ನ ಪವಿತ್ರ ಜಲ ತುಂಬಿದ ಕಮಂಡಲದೊಂದಿಗೆ ತಪ್ಪಸ್ಸಿಗೆ ಕುಳಿತು ಕೊಳ್ಳುತ್ತಾರೆ. ಮುನಿಗಳ ತಪ್ಪ ಸ್ಸಿಗೆ ಮೆಚ್ಚಿದ ಬ್ರಹ್ಮ ಮತ್ತು ಶಿವ ಮುನಿಗಳ ಬೇಡಿಕೆಗೆ ಅಸ್ತು ಎನ್ನುತ್ತಾರೆ. ಹೀಗೆ ಪವಿತ್ರ ಜಲ ತುಂಬಿದ ಕಮಂಡಲವನ್ನು ಹಿಡಿದು ಕೊಂಡು ಪರ್ವತದ ಕಡೆ ಬರುತ್ತಿದ್ದಾಗ ಅಲ್ಲಿದ್ದ ಬಾಲಕನನ್ನು ನೋಡುತ್ತಾರೆ. ಆ ಬಾಲಕನಲ್ಲಿ “ಈ ಕಮಂಡಲವನ್ನು ಜೋಪಾನವಾಗಿ ಹಿಡಿದುಕೋ ನಾನೀಗ ಬರುವೆ’ ಎಂದು ತಿಳಿಸುತ್ತಾರೆ. ನದಿಯ ಉದ್ಭವಕ್ಕೆ ಇದೇ ಸೂಕ್ತ ಸ್ಥಳ ಎಂದು ಅರಿತ ಬಾಲಕ ಕಮಂಡಲವನ್ನು ನೆಲದಲ್ಲಿಡುತ್ತಾನೆ. ಹೀಗೆ ಕಮಂಡಲವನ್ನು ನೆಲದಲ್ಲಿಟ್ಟ ಬಾಲಕ ಬೇರಾರು ಅಲ್ಲ ಗಣೇಶ. ಆ ಸಂದರ್ಭದಲ್ಲಿ ಕಾಗೆಯೊಂದು ಕಮಂಡಲದಲ್ಲಿದ್ದ ನೀರನ್ನು ಕುಡಿಯಲು ಆಗಮಿಸುತ್ತದೆ. ಅಲ್ಲಿಗೆ ಬಂದ ಮುನಿಗಳು ಆ ಕಾಗೆಯನ್ನು
ಓಡಿಸುವ ಸಂದರ್ಭದಲ್ಲಿ ಕಮಂಡಲದಲ್ಲಿದ್ದ ನೀರಿನ ಹನಿಗಳು ಭೂಮಿಗೆ ಬೀಳುತ್ತವೆ. ಈ ಮೂಲಕ ಕಾವೇರಿ ನದಿಯ ಸೃಷ್ಟಿಯಾಗುತ್ತದೆ. ಹಾಗಾಗಿ ಕಾವೇರಿ ನದಿಯನ್ನು ಪವಿತ್ರ ನದಿ ಎಂದು ಪರಿಗಣಿಸಲಾಗಿದೆ.

ಗಣೇಶ- ರಾವಣರ ಕಥೆ
ಒಂದು ಬಾರಿ ರಾವಣ ಸುದೀರ್ಘ‌ ತಪಸ್ಸಿನ ಮೂಲಕ ಪರಮೇಶ್ವರನನ್ನು ಮೆಚ್ಚಿಸಿ ಆತ್ಮಲಿಂಗವನ್ನು ನೀಡುವಂತೆ ಕೇಳಿಕೊಳ್ಳುತ್ತಾನೆ. ಆತನ ಬೇಡಿಕೆಯನ್ನು ಮನ್ನಿಸಿದ ಶಿವ, ಆತ್ಮಲಿಂಗವನ್ನು ದಾರಿ ಮಧ್ಯದಲ್ಲಿ ಎಲ್ಲಿಯೂ ಭೂಸ್ಪರ್ಷ ಮಾಡದಂತೆ ತಿಳಿಸಿ ಆತನಿಗೆ ನೀಡುತ್ತಾನೆ. ರಾವಣನಿಗೆ ಶಿವ ಆತ್ಮಲಿಂಗವನ್ನು ನೀಡಿದ ವಿಚಾರವನ್ನು ತಿಳಿದ ದೇವತೆಗಳು, ತನ ಬಲ ಹೆಚ್ಚಿ ಇನ್ನೇನು ಕೆಡುಕಾಗುವುದೋ ಎಂದು ಭಯಭೀತ ರಾಗುತ್ತಾರೆ. ಈ ಸಮಸ್ಯೆಗೆ ಮುಕ್ತಿ ಹಾಡುವಂತೆ ಶಿವ ಪುತ್ರ ಗಣೇಶನ ಮೊರೆ ಹೋಗುತ್ತಾರೆ. ದೇವತೆಗಳ ಕೂಗನ್ನಾಲಿಸಿದ ಗಣೇಶ, ಬಾಲ ಗಣಪತಿಯಾಗಿ ಅವರ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡುತ್ತಾನೆ. ಇತ್ತ ಆತ್ಮಲಿಂಗವನ್ನು ಹೊತ್ತು ನಡೆದ ಮಹಾ ಬ್ರಾಹ್ಮಣ ರಾವಣನಿಗೆ ಸಂಧ್ಯಾವಂದನೆಗೆ ಸಮಯವಾಗುತ್ತದೆ. ಅದೇ ಸಮಯಕ್ಕೆ ಬಾಲ ಗಣಪತಿ ಅದೇ
ಹಾದಿಯಲ್ಲಿ ಬರುತ್ತಾನೆ. ರಾವಣನೂ ಆತ್ಮಲಿಂಗವನ್ನು ಹಿಡಿದು ನಿಲ್ಲುವುದಕ್ಕಾಗಿ ಜನರನ್ನು ಹುಡುಕು ತ್ತಿರುತ್ತಾನೆ. ಗಣಪತಿಯನ್ನು ಕಂಡ ರಾವಣ ಆತನಲ್ಲಿ ಆತ್ಮಲಿಂಗವನ್ನು ನೀಡಿ ತಾನು ಆದಷ್ಟು ಬೇಗ ಸಂಧ್ಯಾವಂದನೆ ಮುಗಿಸಿ ಬರುವುದಾಗಿ ತಿಳಿಸುತ್ತಾನೆ. ಅದಕ್ಕೊಪ್ಪಿದ ಬಾಲಕ ತಾನು ಹತ್ತು ಎಣಿಸುವುದರೊಳಗಾಗಿ ಇಲ್ಲಿರಬೇಕು. ಇಲ್ಲವಾದಲ್ಲಿ ಆತ್ಮಲಿಂಗವನ್ನು ಇಲ್ಲಿಯೇ ಇಟ್ಟು ಹೋಗುವುದಾಗಿ ತಿಳಿಸುತ್ತಾನೆ. ಅದಕ್ಕೊಪ್ಪಿದ ರಾವಣ ಸಂಧ್ಯಾವಂದನೆಗೆಂದು ನೀರಿಗಿಳಿಯುತ್ತಾನೆ. ಇತ್ತ ಗಣಪತಿ ರಾವಣನಿಗೆ ಕೇಳಿಸುವಂತೆ ಸಂಖ್ಯೆಗಳನ್ನು ಎಣಿಸುತ್ತಾನೆ. ಉಪಾಯವಾಗಿ ಕೊನೆಯಲ್ಲಿ ಸಂಖ್ಯೆಯನ್ನು ವೇಗವಾಗಿ ಎಣಿಸಿ ಹತ್ತು ಎನ್ನುತ್ತಾನೆ. ಲಿಂಗವನ್ನು ನೆಲದಲ್ಲಿಟ್ಟು ಅಲ್ಲಿಂದ ತೆರಳುತ್ತಾನೆ. ರಾವಣ ನೀರಿನಿಂದ ಮೇಲೆ ಬಂದು ನೋಡುತ್ತಾನೆ. ಆತ್ಮಲಿಂಗ ಅಲ್ಲಿಯೇ ಪ್ರತಿಷ್ಠಾಪನೆಯಾಗಿದೆ. ರಾವಣ ಬರಿಗೈಯಲ್ಲಿ ಲಂಕೆಗೆ ಹಿಂದಿರುಗುತ್ತಾನೆ.

ಬಾಲ ಗಣೇಶ ಮತ್ತು ಪಾರ್ವತಿ
ಒಂದು ದಿನ ಬಾಲ ಗಣೇಶ ಬೆಕ್ಕಿನೊಂದಿಗೆ ಆಟವಾಡುತ್ತಿರುತ್ತಾನೆ. ಆಟವಾಡುವುದರ ಜತೆಗೆ ಬೆಕ್ಕಿನ ಬಾಲ ಹಿಡಿದು ಎತ್ತುವುದು, ನೆಲಕ್ಕೆ ಹೊಡೆ ಯುವುದು ಮುಂತಾದ ರೀತಿಯಲ್ಲಿ ಉಪಟಳ ನೀಡುತ್ತಿರುತ್ತಾನೆ. ಇದಾದ ಬಳಿಕ ತಾಯಿ ಪಾರ್ವತಿ ಬಳಿ ಬಂದ ಗಣೇಶ ತಾಯಿ ದೇಹದಲ್ಲಿ ಆಗಿರುವ ಗಾಯಗಳನ್ನು
ಗಮನಿಸಿ  ಪ್ರಶ್ನಿಸುತ್ತಾನೆ. ಇದಕ್ಕೆ ಪಾರ್ವತಿ ನೀನು ಮಾಡಿದ ಕಾರ್ಯದಿಂದ ನನಗೆ ದೇಹದಲ್ಲಿ ಗಾಯಗಳಾಗಿವೆ. ಬೆಕ್ಕಿನಂತೆ ನಿನ್ನ ಜತೆ ಆಟವಾಡುತ್ತಿದ್ದೆ ಎಂದು ಹೇಳುತ್ತಾಳೆ. ಅಲ್ಲದೆ ಪ್ರಾಣಿಗಳೊಂದಿಗೆ ಕೆಟ್ಟ ರೀತಿಯಲ್ಲಿ ನಡೆದು ಕೊಳ್ಳಬಾರದು. ಎಲ್ಲ ಜೀವ ಸಂಕುಲಗಳನ್ನು ನಾವು ಪ್ರೀತಿಸಬೇಕು ಎಂದು ಬುದ್ಧಿವಾದ ತಿಳಿಸುತ್ತಾಳೆ.

LEAVE A REPLY

Please enter your comment!
Please enter your name here