Home ನಂಬಿಕೆ ಸುತ್ತಮುತ್ತ ದೀಪವೆಂಬ ಶಕ್ತಿ; ಮುಕ್ತಿಯ ದಾರಿ

ದೀಪವೆಂಬ ಶಕ್ತಿ; ಮುಕ್ತಿಯ ದಾರಿ

2823
0
SHARE

ಯಾವುದೇ ಕೆಲಸವನ್ನು ಆರಂಭಿಸುವ ಮೊದಲಿಗೆ ದೀಪ ಉರಿಸುವುದು ನಮ್ಮ ಸಂಪ್ರದಾಯ. ಆರಂಭ ಎಂಬುದು ಬೆಳಕನ್ನು ನೀಡಬೇಕು, ಅಲ್ಲಿ ಹೊಸತನ್ನು ಕಾಣುವಂತಾಗಬೇಕು ಮತ್ತು ಶ್ರೇಯಸ್ಸಾಗಬೇಕು ಎಂಬುದು ಇದರ ಆಶಯವಾಗಿದೆ. ಅಗ್ನಿಯ ರೂಪಗಳಲ್ಲೊಂದು ಈ ದೀಪ. ಉರಿಯುವ ದೀಪ ಎಲ್ಲಿಂದ ಬಂತು? ಆರಿದ ಮೇಲೆ ಎಲ್ಲಿ ಹೋಯಿತು? ಎಂದರೆ ಲೌಕಿಕವಾಗಿ ಬೆಂಕಿಕಡ್ಡಿಯಿಂದ ಬಂತು, ಆಮೇಲೆ ಗಾಳಿಯಲ್ಲಿ ಲೀನವಾಯಿತು ಎಂದು ಉತ್ತರಿಸಬಹುದು. ಆದರೆ ಆ ಉರಿ ಘರ್ಷಣೆಗೆ ಹುಟ್ಟುವುದು ನಮ್ಮ ಶಕ್ತಿಯೋ? ಗಾಳಿಯಲ್ಲಿ ಲೀನವಾಗಿದ್ದರೂ ನಮ್ಮನ್ನು ಸುಡದಿರುವುದು ನಮ್ಮ ಶಕ್ತಿಯೋ? ಎಂದು ಕೇಳಿದರೆ ಅದು ನಮ್ಮ ಶಕ್ತಿ ಅಲ್ಲವೇ ಅಲ್ಲ. ಅದುವೇ ಪ್ರಕೃತಿಯ ಶಕ್ತಿ; ದೇವರ ಶಕ್ತಿ.

ದೀಪವನ್ನು ಅಗ್ನಿದೇವ ಎಂದು ನಂಬಿದವರು ನಾವು. ದೀಪ ಉರಿಯುತ್ತಿದೆ ಎಂದರೆ ಅಲ್ಲೊಂದು ಕಾಣದ ಶಕ್ತಿ ಕೆಲಸಮಾಡುತ್ತಿದೆ ಎಂತಲೇ ಅರ್ಥ. ಈ ದೀಪದ ರೂಪ ಹಲವಾರು. ದೇವರ ಮುಂದಿಡುವ ದೀಪದಿಂದ ಹಿಡಿದು ಅನ್ನ ಬೇಯಿಸುವ ದೀಪದ ರೂಪ ಬೆಂಕಿಯವರೆಗೂ ವಿವಿಧ ರೂಪಗಳಲ್ಲಿ ದೀಪವನ್ನು ನಾವು ಬಳಸುತ್ತೇವೆ. ಗರ್ಭಗುಡಿಯ ಕಗ್ಗತ್ತಲಿನಲ್ಲಿ ಮಂದವಾದ ದೀಪವೊಂದು ಉರಿಯುತ್ತ, ಅಲ್ಲಿರುವ ದೇವರಮೂರ್ತಿಯು ನಮ್ಮ ಕಣ್ಣಿಗೆ ಕಾಣುವಂತೆ ಮಾಡುತ್ತದೆ. ಅಂದರೆ ನಮ್ಮ ಮನಸ್ಸು ಲೌಕಿಕವಾದ ಜಗತ್ತನ್ನು ಬಿಟ್ಟು ಆ ಮೂರ್ತಿಯಲ್ಲಿಯೇ ಸ್ಥಾಪಿಸಲ್ಪಡಲು ಈ ದೀಪ ಬೇಕೇಬೇಕು. ದೀಪಕ್ಕೆ ಮುಖ್ಯವಾಗಿ ಎರಡು ಶಕ್ತಿಯಿದೆ. ಒಂದು ಕಗ್ಗತ್ತಲ್ಲನ್ನು ದೂರಮಾಡುವ ಶಕ್ತಿ, ಇನ್ನೊಂದು ಸುಡುವ ಶಕ್ತಿ. ಈ ದೀಪ ಯೋಗ್ಯವಾದದನ್ನು ತೋರಿಸುತ್ತದೆ ಮತ್ತು ಅಯೋಗ್ಯವಾದುದನ್ನು ಸುಡುತ್ತದೆ. ಇಂದ್ರಿಯಗಳ ನಿಗ್ರಹಕ್ಕೆ ದೀಪ ಅನುಕೂಲವಾಗಿದೆ. ನಮ್ಮ ಮನಸ್ಸು ನಿಗ್ರಹಕ್ಕೆ ಸುಲಭವಾಗಿ ಸಿಗುವಂತದ್ದಲ್ಲವೇ ಅಲ್ಲ. ದೀಪದ ಬೆಳಕು ನಮ್ಮನ್ನು ಆಕರ್ಷಿಸುವ ವಿಶೇಷಶಕ್ತಿಯನ್ನು ಹೊಂದಿದೆ. ಅದರ ಬೆಳಕಿನಲ್ಲಿ ಸತ್ಯವನ್ನು ಕಾಣುವ ಯೋಚನೆಯನ್ನು ನಾವು ಬೆಳೆಸಿಕೊಳ್ಳಬೇಕು. ದೇವರ ರೂಪ ದೀಪದ ಮೂಲಕ ಮನಸ್ಸನ್ನು ಸೇರುವಾಗ ಅದು ನಮ್ಮೊಳಗಿನ ಅಜ್ಞಾನವನ್ನು ಸುಡುವಂತಿರಬೇಕು. ಕತ್ತಲೆಯೆಂಬುದು ಲೌಕಿಕವಾಗಿಯೂ ಇದೆ; ಅಲುಕಿಕವಾಗಿಯೂ ಇದೆ.

ಸೂರ್ಯ ಮುಳುಗುತ್ತಲೇ ಜಗತ್ತನ್ನು ಬೆಳಗಲು ಮೊದಲಾದುದೇ ಈ ದೀಪ. ದೀಪವನ್ನೂ ದೇವರ ಸ್ವರೂಪವೆನ್ನಲಾಗಿದೆ. ಮನದೊಳಗಿನ ಕತ್ತಲೆಯನ್ನು ದೂರ ಮಾಡಿ, ಮುಕ್ತಿಯ ಮಾರ್ಗಕ್ಕೆ ಕೊಂಡೊಯ್ಯುವ ಶಕ್ತಿ ದೀಪಕ್ಕಿದೆ. ನಮಗೆ ಗೊತ್ತಿಲ್ಲದ ಒಂದು ಕಡೆ ನಾವು ಹೋದಾಗ ಅಲ್ಲಿ ಎಷ್ಟೇ ಬೆಳಕಿದ್ದರೂ ದೀಪವು ಉರಿಯುತ್ತಿರುವುದನ್ನು ಕಂಡರೆ ನಾವು ಅತ್ತ ಆಕರ್ಷಿತರಾಗುತ್ತೇವೆ ಮತ್ತು ಅಲ್ಲಿ ಏನೋ ಇದೆ ಎಂಬುದು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ದೀಪ ಎಂಬುದು ನಮ್ಮ ಇಡೀ ದೇಹದ ಪ್ರತೀಕವೂ ಹೌದು. ಆತ್ಮವನ್ನು ಆತ್ಮಜ್ಯೋತಿ ಎಂಬುದಾಗಿಯೂ ಕರೆಯುತ್ತೇವೆ. ನಮ್ಮೊಳಗೂ ಒಂದು ಜ್ಯೋತಿಯಿದೆ. ಅದು ಉರಿಯುವ ಜ್ವಾಲೆಯಾಗದೆ ಜಗಕೆ ಬೆಳಕಾಗಿರಲಿ ಎಂಬುದು ಲೌಕಿಕವಾಗಿ ದೀಪ ಹಚ್ಚುವುದರ ಸಂಕೇತ. ದೀಪವೆಂಬುದು ಸತ್ಯವನ್ನು ಬಿಡಿಬಿಡಿಯಾಗಿ ತೋರುವಂತಹದ್ದು. ದೀಪ ಎಲ್ಲೆಲ್ಲಿ ಉರಿಯುತ್ತದೋ ಅಲ್ಲಲ್ಲಿ ಇರುವ ವಸ್ತುಗಳನ್ನೇ ತೋರಿಸುತ್ತದೆ. ಅಂತೆಯೇ ನಮ್ಮ ಆತ್ಮಜ್ಯೋತಿಯೂ ಸತ್ಯದ ದಾರಿಯಲ್ಲೇ ಉರಿಯಬೇಕು ಮತ್ತು ಬೆಳಕಾಗಬೇಕು.

ಗರ್ಭಗುಡಿಯ ದೀಪ ದೇವರೆಂಬ ಶಕ್ತಿಯನ್ನು ತೋರುವಂತೆ, ಅಂಧಕಾರವನ್ನು ನೀಗುವಂತೆ, ಮಾರ್ಗವನ್ನು ತೋರುವಂತೆ, ಕುಂದುಗಳನ್ನು ಕಾಣಲು ಅನುಕೂಲವಾಗುವಂತೆ ಪರ್ಯಾಯವಾಗಿ ನಮ್ಮ ಮನದೊಳಗಿನ ದೀಪವೂ ಇದೇ ರೀತಿ ಸನ್ಮಾರ್ಗದಲ್ಲಿ ಬೆಳಕಾಗಿ ಇದ್ದಾಗ ಮುಕ್ತಿಯ ಪಥವು ಕಾಣುತ್ತದೆ. ಮತ್ತು ದೇವರನ್ನು ಸೇರುವಂತಹ ಶುದ್ಧ ಜೀವ ನಮ್ಮದಾಗುತ್ತದೆ.

ದೀಪ ಮೂಲೇ ಸ್ಥಿತೋ ಬ್ರಹ್ಮಾ ದೀಪ ಮಧ್ಯೇ ಜನಾರ್ಧನಃ|
ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋಸ್ತುತೇ ||

ಸರ್ವದೇವರೂ ದೀಪದಲ್ಲಿಯೇ ಇದ್ದಾರೆಂಬುದನ್ನು ಹಲವಾರು ಶ್ಲೋಕಗಳು ಹೇಳುತ್ತವೆ. ಅವುಗಳಲ್ಲಿ ಇದೂ ಕೂಡ ಒಂದಾಗಿದೆ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here