Home ಧಾರ್ಮಿಕ ಸುದ್ದಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ: ನೇಮದೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ: ನೇಮದೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನ

1497
0
SHARE

ಇಂದಿನಿಂದ ಪೊಳಲಿ ಜಾತ್ರೆ
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳುತ್ತಿದ್ದಂತೆ ಐತಿಹಾಸಿಕ ಪೊಳಲಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ.

ಮಾ.13ರಂದು ಬ್ರಹ್ಮಕಲಶಾಭಿಷೇಕ ಸಂಪನ್ನ ಗೊಳ್ಳುತ್ತಿದ್ದಂತೆ ಸಂಜೆ ಹಲವು ವಿಧಿವಿಧಾನಗಳನ್ನು ಪೂರೈಸಲಾಯಿತು. ಸಂಜೆ ಮಹಾಪೂಜೆ ನಡೆಸಿ ದೊಡ್ಡ ರಂಗಪೂಜೆ ನಡೆದ ಬಳಿಕ ಅದ್ದೂರಿ ಉತ್ಸವ ಬಲಿ ಸೇವೆ ನಡೆಯಿತು. ಬಳಿಕ ಚಂದ್ರಮಂಡಲ ರಥ, ಬೆಳ್ಳಿರಥ, ಸಣ್ಣ ರಥೋತ್ಸವ, ವಸಂತ ಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆ, ಪಲ್ಲಕಿ ಉತ್ಸವ ನಡೆಸಿ ಮಹಾಪೂಜೆ ನಡೆಸಲಾಯಿತು. ಇದಾದ ಬಳಿಕ ಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು- ಮಗೃಂತಾಯಿ ದೈವಗಳ ನೇಮೋತ್ಸವ ನಡೆಸಿ ಸಂಪ್ರೋಕ್ಷಣೆ ನಡೆಸಿದ ಬಳಿಕ ಐತಿಹಾಸಿಕ ಬ್ರಹ್ಮಕಲಶೋತ್ಸವಕ್ಕೆ ತೆರೆ ಬಿದ್ದಿದೆ.

ಇಂದಿನಿಂದ ಜಾತ್ರೆ
ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ರಾಜ ರಾಜೇಶ್ವರಿ ಅಮ್ಮನವರಿಗೆ ಬ್ರಹ್ಮಕಲಶಾಭಿಷೇಕ ದೊಂದಿಗೆ ಸಂಪನ್ನವಾಗುತ್ತಿದ್ದಂತೆ ಗುರುವಾರ ರಾತ್ರಿ ಧ್ವಜಾರೋಹಣದೊಂದಿಗೆ ಪೊಳಲಿಯ ಒಂದು ತಿಂಗಳ ಜಾತ್ರೆಯ ವೈಭವ ಆರಂಭವಾಗಿದೆ. ಕಳೆದ ಬಾರಿ ಶ್ರೀಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕಾಗಿ ದೇವಸ್ಥಾನವನ್ನು ತೆರವುಗೊಳಿಸಿದ್ದರಿಂದ ಸಂಪೂರ್ಣ ಅವಧಿಯ ಜಾತ್ರಾ ಮಹೋತ್ಸವ ನಡೆದಿರಲಿಲ್ಲ. ಬದಲಿಗೆ ಕೇವಲ 7 ದಿನಗಳ ಕಾಲ ಸಾಂಕೇತಿಕವಾಗಿ ಜಾತ್ರಾಮಹೋತ್ಸವ ನಡೆಸಲಾಗಿತ್ತು. ಈ ಬಾರಿ ಬ್ರಹ್ಮಕಲಶೋತ್ಸವವು ನಡೆದಿರುವುದರಿಂದ ಜಾತ್ರಾ ಮಹೋತ್ಸವವು ವೈಭವದಿಂದ ಜರಗಲಿದೆ.

ಗುರುವಾರ ರಾತ್ರಿ ಧ್ವಜಾರೋಹಣಗೊಂಡು ಬಲಿ ನಡೆದ ಬಳಿಕ ಕಂಚುಬೆಳಕು ಸೇವೆ ನಡೆ ಯಲಿದೆ. ಪುತ್ತಿಗೆಯ ಸೋಮನಾಥೇಶ್ವರ ದೇವ ಸ್ಥಾನದಲ್ಲಿ ಜೋಯಿಸರು ದಿನ ನಿಗದಿ ಮಾಡಿ ಶುಕ್ರವಾರ ಬೆಳಗ್ಗೆ ಅದನ್ನು ಸೇರಿಗಾರರಲ್ಲಿ ತಿಳಿಸಿದ ಬಳಿಕ ಸೋಮಕಾಸುರ ಹಾಗೂ ರೆಂಜಕಾಸುರನ ಮೂಲಕ ಜಾತ್ರೆಯ ಒಟ್ಟು ದಿನಗಳು ನಿರ್ಧಾರವಾಗಲಿದೆ. ಐದು ದಿನಗಳಿಗೊಮ್ಮೆ ದಂಡೆಮಾಲೆ, ಕೋಳಿಗುಂಟ, ಐದು ದಿನಗಳ ಕಾಲ ಚೆಂಡು, ಒಂದು ದಿನದ ಮಹಾರಥೋತ್ಸವ ನಡೆದ ಬಳಿಕ ಆರಾಡ ನಡೆದು ಒಂದು ತಿಂಗಳ ಜಾತ್ರೆ ಸಮಾಪನಗೊಳ್ಳಲಿದೆ.

LEAVE A REPLY

Please enter your comment!
Please enter your name here