Home ನಂಬಿಕೆ ಸುತ್ತಮುತ್ತ ಕಡುಬು ಭೂತಾಯಿಗೆ ನಂಜು ಎಂಬ ನಂಬಿಕೆ; ಭೂಮಿ ಎಂಬ ಮಹಾತಾಯಿ

ಕಡುಬು ಭೂತಾಯಿಗೆ ನಂಜು ಎಂಬ ನಂಬಿಕೆ; ಭೂಮಿ ಎಂಬ ಮಹಾತಾಯಿ

2580
0
SHARE

ಜಗತ್ತಿನಲ್ಲಿ ವಂದನಾರ್ಹ ಶಕ್ತಿಗಳು, ವ್ಯಕ್ತಿಗಳು ಹಲವಾರು. ಆ ಎಲ್ಲವನ್ನೂ ವಂದಿಸುವುದಕ್ಕೆ ಸಕಾರಣಗಳಿವೆ. ವಂದಿಸುತ್ತೇವೆ, ಭಜಿಸುತ್ತೇವೆ ಮತ್ತು ಸ್ತುತಿಸುತ್ತೇವೆ. ಈ ಎಲ್ಲವುಗಳ ನಡುವೆ ಮೊತ್ತ ಮೊದಲಿಗೆ ನಮಸ್ಕರಿಸಲೇ ಬೇಕಾದದ್ದು ನಾವಿರುವ ಈ ಭೂಮಿಗೆ. ಯಾಕೆಂದರೆ ಈ ಭೂಮಿ ಇದ್ದರೆ ಮಾತ್ರ ನಾವಿದ್ದೇವೆ; ಭೂಮಿಯೇ ಇಲ್ಲವಾದರೆ ನಾವೂ ಇಲ್ಲ!

ಶರನ್ನವರಾತ್ರಿಯಲ್ಲಿ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಿ, ಹತ್ತನೆಯ ದಿನ ವಿಜಯದಶಮಿ ಆಚರಿಸಿದ ನಂತರ ಅದೇ ಆಶ್ವಯುಜ ಮಾಸದ ಪೌರ್ಣಿಮೆಯ ದಿನ ಭೂಮಿಗೆ ಪೂಜೆ ಸಲ್ಲಿಸುವ ಕ್ರಮ ಹಲವು ಕಡೆಗಳಲ್ಲಿದೆ. ಮಲೆನಾಡಿನಲ್ಲಿ ಭೂಮಿಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಭೂಮಿ ಹುಣ್ಣಿಮೆ ಎಂದೇ ಕರೆಯಲ್ಪಡುವ ಈ ದಿನ ವಿಶೇಷವಾದ ಬಗೆಬಗೆಯ ಅಡುಗೆಯನ್ನು ನೈವೇದ್ಯಕ್ಕಾಗಿ ಮಾಡಲಾಗುತ್ತದೆ. ವಿವಿಧ ಹೂವಿನ ಗಿಡದ ಎಲೆಗಳನ್ನು ತಂದು ಅದರ ಪಲ್ಯವನ್ನು ಮಾಡಲಾಗುತ್ತದೆ. ಸೌತೆಕಾಯಿಯ ಕಡುಬು ಮತ್ತು ಚೀನೀಗುಂಬಳಕಾಯಿಯ ಕಡುಬು ಬಹುಮುಖ್ಯ ಖಾದ್ಯ. ಹೀಗೆ ಈ ಹಬ್ಬಕ್ಕೆಂದೇ ಮಾಡಿದ ಖಾದ್ಯಗಳನ್ನೆಲ್ಲ ತಮ್ಮ ಗದ್ದೆಗೋ ತೋಟಕ್ಕೋ ತೆಗೆದುಕೊಂಡು ಹೋಗಿ ಅಲ್ಲಿ ಭೂಮಿಗೆ ಪೂಜೆ ಮಾಡಲಾಗುತ್ತದೆ. ಎಲ್ಲಾ ಪದಾರ್ಥ ಪಲ್ಯಗಳನ್ನು ಅನ್ನದೊಡನೆ ಮಿಶ್ರಣಮಾಡಿ ತೋಟ ಅಥವಾ ಗದ್ದೆಯ ತುಂಬ ಬೀರಲಾಗುತ್ತದೆ.

ಇಲ್ಲಿ ಇನ್ನೊಂದು ವಿಶೇಷತೆ ಇದೆ. ಸೌತೆಕಾಯಿ ಮತ್ತು ಚೀನೀಗುಂಬಳಕಾಯಿಯ ಕಡುಬುಗಳಲ್ಲಿ ಸೌತೆಕಾಯಿಯ ಕಡುಬುಗಳನ್ನು ನೈವೇದ್ಯರೂಪವಾಗಿ ಭೂಮಿಯೊಳಗೆ ಹೂಳಲಾಗುತ್ತದೆ. ಆದರೆ ಚೀನೀಗುಂಬಳಕಾಯಿಯ ಕಡುಬು ಭೂತಾಯಿಗೆ ನಂಜು ಎಂಬ ನಂಬಿಕೆಯಿಂದ ಅದನ್ನು ಹೂಳದೆ ಪ್ರಸಾದ ರೂಪದಲ್ಲಿ ಸ್ವೀಕರಸಲಾಗುತ್ತದೆ. ಈ ಹಬ್ಬದ ದಿನ ಭೂಮಿಯನ್ನು ಅಗೆಯುವ ಕೆಲಸವನ್ನು ಮಾಡುವುದಿಲ್ಲ. ಅಷ್ಟೇ ಅಲ್ಲದೆ ಮನೆಯವರು, ಬಂಧು ಬಳಗದವರೆಲ್ಲರೂ ಸೇರಿ ತೋಟದಲ್ಲಿಯೇ ಊಟ ಮಾಡುವ ಕ್ರಮವಿದೆ. ವಾಸ್ತವ್ಯದ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಈ ಧರೆಗೆ ವರುಷದ ಒಂದು ದಿನ ಪೂಜೆಮಾಡಿ ವಂದಿಸಿ, ಧನ್ಯವಾದಗಳನ್ನು ಸಮರ್ಪಿಸುವ ವಿಧಾನವೇ ಈ ಹಬ್ಬ; ಭೂಮಿಹುಣ್ಣಿಮೆ.

ಭೂಮಿಯೆಂದರೆ ತಾಯಿಯ ತಾಯಿ. ಜನ್ಮ ನೀಡಿದ ತಾಯಿಯೇ ಮಹಾನ್ ಎಂಬ ಮಾತಿದೆ. ಆದರೆ ಆ ತಾಯಿಗಿಂತಲೂ ಮಹಾನ್ ಈ ಭೂಮಿತಾಯಿ. ತನ್ನ ಒಡಲೊಳಗೆ ಅದ್ಭುತಗಳನ್ನು ಅಡಗಿಸಿಟ್ಟುಕೊಂಡಿರುವ ಮಮತಾಮಯಿ ಎಂದರೆ ತಪ್ಪಾಗಲಾರದು. ಇವತ್ತು ಪ್ರಪಂಚ ಇಷ್ಟೊಂದು ಅಭಿವೃದ್ಧಿಯನ್ನು ಕಂಡಿದ್ದರೆ, ಕಾಣುತ್ತಿದ್ದರೆ ಇದಕ್ಕೆ ಕಾರಣ ಈ ಭೂಮಿ. ಭೂಮಿಯನ್ನು ಆರಾಧಿಸಲು ಅನಂತ ಕಾರಣಗಳಿವೆ. ನಾವು ಉಣ್ಣುವ ಅನ್ನ ಸಿಗುವುದು ಈ ಭೂಮಿಯಿಂದ, ಕುಡಿಯುವ ನೀರು ಭೂಮಿಯಿಂದ, ಉಸಿರಾಡುವ ಗಾಳಿ ಭೂಮಿಯಿಂದ, ತೈಲಗಳು, ಖನಿಜಗಳು, ಲೋಹಗಳು ಎಲ್ಲವೂ ದೊರೆಯುವುದು ಈ ಭೂಮಿಯಿಂದಲೇ. ಸುಖನಿದ್ದೆಗೂ ನಾವು ಭೂಮಿಗೊರಗಬೇಕು. ಹುಟ್ಟಿಗೂ ಭೂಮಿ ಬೇಕು. ಸಾವು ಬಂದಪ್ಪಿದರೂ ದೇಹ ಮಣ್ಣಾಗಲೋ ದಹನವಾಗಲೋ ಇದೇ ಭೂಮಿ ಬೇಕು. ಅಂದರೆ ಸೃಷ್ಟಿ ಸ್ಥಿತಿ ಲಯ ಈ ಮೂರಕ್ಕೂ ಭೂಮಿ ಬೇಕೇಬೇಕು.

ಇಂತಹ ಭೂತಾಯಿಯನ್ನು ಪ್ರತಿನಿತ್ಯ ವಂದಿಸಿದರೂ ಕಡಮೆಯೇ. ಅದುದರಿಂದ ಹಿಂದಿನವರು ಹಬ್ಬದ ಹೆಸರಿನಲ್ಲಿ ಭೂಮಾತೆಯ ಮಹತ್ತ್ವವನ್ನು ಸ್ಮರಿಸಿಕೊಂಡು ಕರಜೋಡಿಸಿ ನಮಿಸುವ ಸಲುವಾಗಿಯೇ ಈ ಸಂಪ್ರದಾಯವನ್ನು ಆರಂಭಿಸಿದರು.

ನಾವು ಭೂಮಿಗೆ ಋಣಸಂದಾಯ ಮಾಡಲಾಗದ ಕಾರಣ ಭೂಮಿಗೆ ಮನಸಾರೆ ವಂದಿಸುವುದರ ಮೂಲಕವಾದರೂ ಋಣಭಾರ ಕಡಮೆ ಮಾಡಿಕೊಳ್ಳೋಣ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here