Home ಧಾರ್ಮಿಕ ಸುದ್ದಿ ಬೆಸುಗೆಯ ಜಾತ್ರೆಗೆ ಜನಸಾಗರ

ಬೆಸುಗೆಯ ಜಾತ್ರೆಗೆ ಜನಸಾಗರ

725
0
SHARE

ಕಾರ್ಕಳ : ಅತ್ತೂರು ಜಾತ್ರೆಯ ನಾಲ್ಕನೇ ದಿನವಾದ ಬುಧವಾರ ಬೆಳಗ್ಗೆ ಮಂಗಳೂರು ಧರ್ಮಾಧ್ಯಕ್ಷ ಡಾ| ಪೀಟರ್‌ ಪಾವ್ಲ್ ಸಲ್ದಾನ್ಹಾ ಬಲಿಪೂಜೆ ನೆರವೇರಿಸಿದರು. ಬಳಿಕ ಪ್ರವಚನ ನೀಡಿದ ಅವರು ಸಂತ ಲಾರೆನ್ಸ್‌ ಬಡವರ ಕಷ್ಟಗಳಿಗೆ ಪರಿಹಾರ ನೀಡುವಲ್ಲಿ ಶ್ರಮಿಸುತ್ತಿದ್ದರು. ಸಾಮಾಜಿಕ ನ್ಯಾಯಕ್ಕಾಗಿ, ಬಡವರ ಬಡತನ ನಿವಾರಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಬಣ್ಣಿಸಿದರು.

ನಾವು ಪರಮಾತ್ಮನನ್ನು ಅಚಲ ನಂಬಿಕೆ, ಭಕ್ತಿಯಿಂದ ಧ್ಯಾನಿಸಿ, ಸದ್ವಿಚಾರ, ಸದ್ಗುಣಗಳನ್ನು ಮೈಗೂಡಿಸಿಕೊಂಡು ಸತ್ಯ, ನೀತಿಮಾರ್ಗದಲ್ಲಿ ಸಾಗಬೇಕು. ಅನ್ಯಾಯ, ಅನೀತಿ ವಿರುದ್ಧ ಹೋರಾಡುವ ಮನೋಭಾವ ಹೊಂದಿರಬೇಕೆಂದು ಅವರು ಹೇಳಿದರು.

ಬೃಹತ್‌ ಜನಸ್ತೋಮ
ಬುಧವಾರವೂ ಅತ್ತೂರು ಜಾತ್ರೆಯಲ್ಲಿ ಕಿಕ್ಕಿರಿದ ಜನಸಂದಣಿಯಿತ್ತು. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹತ್ತೂರಿನಿಂದಲೂ ಅತ್ತೂರು ಜಾತ್ರೆಗೆ ಜನ ಹರಿದು ಬಂತು. ಕಾಬೆಟ್ಟು ಪರಿಸರದಿಂದ ದೂಪದಕಟ್ಟೆ ತನಕ ಎಲ್ಲೆಡೆ ಜನಸ್ತೋಮ ನೆರೆದಿತ್ತು. ಪಾರ್ಕಿಂಗ್‌ಗೆ ನಿಗದಿಗೊಳಿಸಿದ ವಿಶಾಲ ಮೈದಾನಗಳೆಲ್ಲವೂ ಭರ್ತಿಗೊಂಡಿದ್ದವು.

ಪೊಲೀಸರು, ಸ್ವಯಂ ಸೇವಕರು ಯಾವುದೇ ಅನಾಹುತ ನಡೆಯದಂತೆ ಕಣ್ಗಾವಲಿಟ್ಟು, ಅತ್ಯಂತ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬಂದ ಭಿಕ್ಷುಕರು ವಾಪಸಾದರು
ಜಾತ್ರೆಯಲ್ಲಿ ಭಿಕ್ಷಾಟನೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದ ಹಿನ್ನೆಲೆಯಲ್ಲಿ ಅತ್ತೂರು ವಠಾರದಲ್ಲಿ ಭಿಕ್ಷೆ ಬೇಡಲು ಬಂದ ಭಿಕ್ಷುಕರನ್ನು ಪೊಲೀಸರು ವಾಪಸ್‌ ಕಳುಹಿಸುತ್ತಿರುವ ದೃಶ್ಯ ಕಂಡು ಬಂತು.

ಭಿಕ್ಷಾಟನೆಗೆ ಇಲ್ಲಿ ಅವಕಾಶವಿಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು , ವಾಪಸ್‌ ತೆರಳಲು ನೂರಿನ್ನೂರು ಬಸ್‌ ದರ ನೀಡಿ ಕಳುಹಿಸಲಾಗುತ್ತಿದೆ. ಮಾಧ್ಯಮದಲ್ಲಿ ಭಿಕ್ಷಾಟನೆ ನಿಷೇಧ, ಅಲ್ಲಲ್ಲಿ ಬ್ಯಾನರ್‌ ಅಳವಡಿಸಿದಾಗ್ಯೂ ಸುಮಾರು 2,000 ಮಂದಿ ಭಿಕ್ಷುಕರು ಕ್ಷೇತ್ರದತ್ತ ಆಗಮಿಸಿದ್ದರು ಎಂದು ಕಾರ್ಕಳ ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್‌ ಹುಸೇನ್‌ ಹೇಳಿದರು.

ಅತ್ತೂರು ಸಂತ ಲಾರೆನ್ಸರ ಬಸಿಲಿಕಾ ಎಲ್ಲರಿಗೂ ಭಕ್ತಿ ಹಾಗೂ ಭರವಸೆಯ ತಾಣ. ಸಂತ ಲಾರೆನ್ಸ್‌ರ ಮೂಲಕ ಭಗವಂತನಲ್ಲಿ ನಮ್ಮ ಸಮಸ್ಯೆಗಳನ್ನು ತೋಡಿಕೊಂಡಲ್ಲಿ ಸಂಕಷ್ಟಗಳನ್ನು ಪರಿಹರಿಸಿ, ದೈಹಿಕ, ಮಾನಸಿಕ ನೆಮ್ಮದಿ ಕರುಣಿಸುವನು. ಸರ್ವಧರ್ಮೀಯರ ಪುಣ್ಯಕ್ಷೇತ್ರ ಅತ್ತೂರು ವಾರ್ಷಿಕ ಜಾತ್ರೆಗೆ ಆಗಮಿಸುವ ಭಕ್ತರ ಇಷ್ಟಾರ್ಥ ಈಡೇರಲಿ.
– ವ| ಫಾ| ಜಾರ್ಜ್‌ ಡಿ’ಸೋಜಾನಿರ್ದೇಶಕರು, ಪ್ರಧಾನ ಧರ್ಮಗುರು ಸಂತ ಲಾರೆನ್ಸ್‌ ಬಸಿಲಿಕಾ, ಅತ್ತೂರು

LEAVE A REPLY

Please enter your comment!
Please enter your name here