Home ನಂಬಿಕೆ ಸುತ್ತಮುತ್ತ ಮನದ ಶಾಂತಿಗೆ ಭಗವದ್ಗೀತೆ ಹೇಳಿದ ತಂತ್ರ ಯಾವುದು?

ಮನದ ಶಾಂತಿಗೆ ಭಗವದ್ಗೀತೆ ಹೇಳಿದ ತಂತ್ರ ಯಾವುದು?

2187
0
SHARE

ಬದುಕು ಎಂದರೇನು? ಕೇಳಿಕೊಂಡರೆ ಇದಮಿತ್ಥಂ ಎಂಬ ಉತ್ತರ ಸಿಗದು. ನಾವು ಯಾವುದನ್ನು ಬದುಕು ಎಂದುಕೊಂಡಿರುತ್ತೇವೆಯೋ ಆ ಬದುಕು ನಮ್ಮದಾಗಿರುವುದಿಲ್ಲ. ನಾವು ಬದುಕುತ್ತಿರುವ ಬಗೆಗೂ ನಾವು ಬದುಕಲೇ ಬೇಕಾಗಿದ್ದ ರೀತಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಆಗಾಗ ಅರಿವಾಗುತ್ತದೆ. ಏನೇ ಇರಲಿ, ಹೇಗೇ ಇರಲಿ ಬದುಕಿನಲ್ಲಿ ಮನಸ್ಸಿನ ಶಾಂತಿ ಸದಾ ಇರಲಿ ಎಂಬುದು ಎಲ್ಲರ ಆಶಯ. ಈ ಆಶಯ ಸರಳ ಮತ್ತು ಮಧುರ. ಆದರೆ ಇದು ಕೈಗೂಡುವುದು ಮಾತ್ರ ಅಸಾಧ್ಯ. ಯಾಕೆಂದರೆ ಮನಸ್ಸಿನ ಮೂಲ ಗುಣವೇ ಚಂಚಲತೆ. ಊಹೂಂ.. ಅದಕ್ಕೆ ಯಾವುದರಲ್ಲೂ ತೃಪ್ತಿಯಿಲ್ಲ. ಆ ತೃಪ್ತಿ ದೊರೆಯದೇ ಮನಸ್ಸು ಸುಮ್ಮನ್ನಿರುವುದಿಲ್ಲ. ಈ ಮನಸ್ಸು ಸುಮ್ಮನಾಗದೇ ಮನಸ್ಸಿಗೆ ಶಾಂತಿ ದೊರೆಯುವುದಿಲ್ಲ. ಬದುಕಿನ ಗಮ್ಯ ಇರುವುದೇ ಹಾಗೆ; ಕನ್ನಡಿಯೊಳಗಿನ ಪಯಣ. ಎಲ್ಲವೂ ಕಾಣುತ್ತದೆ. ಯಾವುದೂ ದಕ್ಕುವುದಿಲ್ಲ. ಅದೇ ಸಮಯದಲ್ಲಿ ನಮ್ಮ ದೃಷ್ಟಿ ಕೇವಲ ನಮ್ಮ ಮೇಲೆ ಮಾತ್ರ ಇರುತ್ತದೆ. ನಮ್ಮೊಳಗಿನ ಆಸೆಗಳು ದಾರಿ ತಪ್ಪಿಸುತ್ತವೆ. ನೋಡಬೇಕಾದದ್ದು ಕಾಣದೇ ಹೋಗುತ್ತವೆ. ಬದುಕು ಸುಖದ, ಸಂಪತ್ತಿನ, ನೆಮ್ಮದಿಯ, ನಾಳೆಯ ಹುಡುಕಾಟವಾಗಿ ಮಾರ್ಪಡುತ್ತದೆ. ಇಂಥ ಹುಡುಕಾಟದಲ್ಲಿ ಸಾವಿಲ್ಲದ ಬಯಕೆಗಳು ಸಾವಿರಾರು. ಒಂದು ಈಡೇರುತ್ತಿದ್ದಂತೆ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಹಾಗಾಗಿ ನಾವು ಶಾಂತಿಯ ಸ್ಥಿತಿಯನ್ನು ತಲುಪುವುದೇ ಇಲ್ಲ. ಆದರೂ ಎಲ್ಲ ಬೇಕು-ಬೇಡಗಳ ನಡುವೆ ಮನಸ್ಸು ಬಯಸುವುದು ಮಾತ್ರ ಶಾಂತಿಯನ್ನೇ!

ಭಗವದ್ಗೀತೆಯಲ್ಲಿ ಮನಸ್ಸಿನ ಶಾಂತಿಗೆ ಏನು ಮಾಡಬೇಕೆಂದು ಹೇಳಲಾಗಿದೆ. ಎರಡನೆಯ ಅಧ್ಯಾಯ ಸಾಂಖ್ಯಯೋಗದಲ್ಲಿ ಎಪ್ಪತ್ತನೆಯ ಶ್ಲೋಕ ಶಾಂತಿಯನ್ನು ಹೊಂದುವ ತಂತ್ರವನ್ನು ಹೇಳುತ್ತದೆ.

ಆಪೂರ್ಯಮಾಣಮಚಲಪ್ರತಿಷ್ಠಮ್
ಸಮುದ್ರಮಾಪಃ ಪ್ರವಿಶನ್ತಿ ಯದ್ವತ್|
ತದ್ವತ್ ಕಾಮಾ ಯಂ ಪ್ರವಿಶನ್ತಿ ಸರ್ವೇ
ಸ ಶಾನ್ತಿಮಾಪ್ನೋತಿ ನ ಕಾಮಕಾಮೀ||೭೦||

ಸಾಗರವು ಯಾವಾಗಲೂ ಶಾಂತವಾಗಿರುತ್ತದೆ. ಅದಕ್ಕೆ ಸಾವಿರಾರು ನದಿಗಳು ಬಂದು ಸೇರಿದಾಗಲೂ ಶಾಂತವಾಗಿರುವಂತೆ, ನಿರಂತರವಾಗಿ ಹರಿದು ಬರುವ ಕಾಮಗಳಿಂದ ಕಲಕದಂತಿರುವ ಮನುಷ್ಯನು ಮಾತ್ರ ಶಾಂತಿಯನ್ನು ಸಾಧಿಸಬಲ್ಲ. ಇಂತಹ ಕಾಮಗಳಿಗೆ ಬೆಲೆಕೊಟ್ಟು ಅವನ್ನು ಈಡೇರಿಸಲು ಹೊರಡುವವನಿಗೆ ಶಾಂತಿ ಎಂದಿಗೂ ದೊರೆಯದು.

ಇದು ಸುಲಭವಾದ ತಂತ್ರದಂತೆ ಕಂಡರೂ ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ. ಮನಸ್ಸು ಸಾಗರದಂತೆ ವಿಶಾಲವಾದದ್ದು. ಅದರೊಳಗೆ ಬೇಕು-ಬೇಡಗಳು ಬಂದು ಸೇರಿಕೊಳ್ಳಲು ಸಾಕಷ್ಟು ಅವಕಾಶವಿದೆ. ಹಾಗಾಗಿ ಸಮುದ್ರದಂತೆ ಶಾಂತವಾದ ಸ್ಥಿತಿಯನ್ನು ತಲುಪುವುದು ಒಂದು ಬಗೆಯ ಸಾಧನೆ. ಮೊದಲು ಆಸೆಗಳನ್ನು ನಿಯಂತ್ರಿಸಬೇಕು ಎಂಬುದು ಈ ಶ್ಲೋಕದ ಒಳಾರ್ಥ. ಮನಸ್ಸಿನ ದಡಕ್ಕೆ ಬಂದು ಸೇರುವ ಸಾವಿರಾರು ಆಸೆಗಳು ಅರಿಷಡ್ವರ್ಗಗಳಿಗೆ ಅಂಟಿಕೊಂಡೇ ಇರುತ್ತವೆ. ಆಸೆಗಳನ್ನು ತೀರಿಸಿಕೊಳ್ಳಲು ಹೋದಾಗ ಯಾವುದೋ ಮೋಸಕ್ಕೆ
ಬಲಿಯಾಗುವ ಅಥವಾ ನಾವೇ ಮೊಸ ಮಾಡುವ ಸಂದರ್ಭಗಳೂ ಇದಿರಾಗುತ್ತವೆ. ಆಗ ಮನಸ್ಸಿನ ನೆಮ್ಮದಿ ಕೆಡುತ್ತದೆ. ಮನಸ್ಸಿನ ಶಾಂತಿ ಕದಡಿ ಹೋದಾಗ ಚಂಚಲತೆ ಮತ್ತು ದುರ್ಬಲತೆ ಇನ್ನೂ ಹೆಚ್ಚುತ್ತದೆ. ಆಗ ಮನಶ್ಯಾಂತಿ ಎಂಬುದು ಮರೀಚಿಕೆಯಾಗಿ ಬಿಡುತ್ತದೆ. ಆಸೆಗಳನ್ನು ಸಂಪೂರ್ಣವಾಗಿ ಬಿಟ್ಟು ಮನುಷ್ಯ ಬದುಕಲಾರ. ಅದರೆ ಅವುಗಳಿಗೊಂದು ನಿಲುಗಡೆ ಬೇಕು; ಬಿಡುಗಡೆ ಬೇಕು. ಇಷ್ಟು ಸಾಕು ಅನ್ನಿಸಬೇಕು. ಆಸೆಗಳಿಂದ ಬಿಡಿಸಿಕೊಳ್ಳುವ ಶಕ್ತಿಯನ್ನು ಹೊಂದಬೇಕು. ಆಸೆಗಳನ್ನು ಕೊಲ್ಲುವ ಸ್ಥೈರ್ಯ ಹುಟ್ಟಬೇಕು. ಯಾವ ಆಸೆಗಳೂ ಮನದ ನೆಮ್ಮದಿಯನ್ನು ಕದಡದೇ ಈಡೇರುವದೂ ಇಲ್ಲ; ಸಾಯುವುದೂ ಇಲ್ಲ. ಹಾಗಾಗಿ ಆಗಾಗ ಸಮುದ್ರವನ್ನು ನೋಡುತ್ತಿರಬೇಕು. ಸಮುದ್ರಂತೆ ವಿಶಾಲವಾದ ಮತ್ತು ಶಾಂತವಾದ ಮನಸ್ಸನ್ನು ಸಿದ್ಧಿಸಿಕೊಳ್ಳಬೇಕು. ಆಸೆಗಳನ್ನು ಹುಟ್ಟಿಸಿಕೊಳ್ಳಲು, ದಾಳಿ ಇಟ್ಟರೆ ಗೆಲ್ಲಲು ಮತ್ತು ಕೊಲ್ಲಲು ಗೊತ್ತಿರಬೇಕು; ಅವು ಮನವ ಕದಡದಂತೆ.

ವಿಷ್ಣು ಭಟ್ ಹೊಸ್ಮನೆ.

LEAVE A REPLY

Please enter your comment!
Please enter your name here