Home ನಂಬಿಕೆ ಸುತ್ತಮುತ್ತ ಶಾಂತಿಮಂತ್ರ ಹೇಳುವ ಸಂಸ್ಕಾರ ಪಾಠ

ಶಾಂತಿಮಂತ್ರ ಹೇಳುವ ಸಂಸ್ಕಾರ ಪಾಠ

1289
0
SHARE

ಹೀಗೊಂದು ಸತ್ ಸಂಪ್ರದಾಯವಿದೆ. ಒಂದು ಶುಭಕಾರ್ಯ, ಒಂದು ಶುಭ ಸಮಾರಂಭ, ಒಂದು ದೇವತಾಕಾರ್ಯ ಮೊದಲಾದವುಗಳನ್ನು ಆರಂಭಿಸುವಾಗ ಶಾಂತಿಮಂತ್ರದಿಂದ ಆರಂಭಿಸಿ, ಅಂತ್ಯದಲ್ಲೂ ಶಾಂತಿಮಂತ್ರವನ್ನು ಹೇಳುವುದೇ ಈ ಸತ್ಸಂಪ್ರದಾಯ. ಇದು ಹಲವರಿಗೆ ತಿಳಿದಿರುವ ಸಂಗತಿ. ನಾಳೆ ಏನಾಗಬೇಕು? ಎಂದು ಕೇಳಿದರೆ ಉತ್ತರ ಒಳ್ಳೆಯದಾಗಬೇಕಷ್ಟೆ ಎಂಬುದು. ಈ ಒಳ್ಳೆಯದಾಗುವುದು ಎಂದರೆ ಏನು? ಕನಸಿನಲ್ಲಿ ಕಂಡ ಸಂಪತ್ತು ಮನೆಯಿದಿರು ಬಂದು ಬೀಳುವುದೇ? ಅಥವಾ ಬಯಸಿದ ಅಧಿಕಾರವೊಂದು ನಾಳೆ ಇದ್ದಕ್ಕಿದ್ದಂತೆ ದೊರೆಯುವುದೇ? ಏನೂ ಕಷ್ಟವೇ ಇಲ್ಲದೆ ಬದುಕುವುದೇ? ಇವ್ಯಾವುದೂ ಅಲ್ಲ. ಒಂದು ನೆಮ್ಮದಿಯ ಬದುಕು. ಒಳ್ಳೆಯ ಬದುಕಿಗೆ ಮನಸ್ಸೂ ಒಳ್ಳೆಯದಾಗಿರಬೇಕು, ದೇಹವೂ ಒಳ್ಳೆಯದಾಗಿರಬೇಕು. ಅಷ್ಟೇ ಅಲ್ಲದೆ ಸುತ್ತಲಿನ ಸಮಾಜ-ಸಂಸ್ಕೃತಿ, ಪ್ರಕೃತಿ, ನುಡಿ-ನಡೆ ಎಲ್ಲವೂ ಒಳ್ಳೆಯದಾಗಿದ್ದರೆ ಮಾತ್ರ ನಾಳೆಗಳು ಒಳ್ಳೆಯ ದಿನಗಳಾಗುತ್ತವೆ. ಈ ಒಳ್ಳೆಯದು ಎಂಬುದೂ ವ್ಯಕ್ತಿಗತವೇ ಬಿಡಿ. ಹಾಗಾಗಿ ಎಲ್ಲರಿಗೂ ಒಳ್ಳೆಯದಾಗಬೇಕು ಅಷ್ಟುಸಾಕು.

ಒಳ್ಳೆಯ ಸಂಸ್ಕಾರದಿಂದ ಒಳ್ಳೆಯ ಸಂಸ್ಕೃತಿ. ಒಳ್ಳೆಯ ಸಂಸ್ಕೃತಿಯಿಂದ ಎಲ್ಲ ನಡೆ-ನುಡಿಗಳೂ ಉತ್ತಮವೇ ಆಗಿ ಒಳ್ಳೆಯದೇ ಆಗುತ್ತದೆ. ಹಾಗಾಗಿಯೇ ಶಾಂತಿಮಂತ್ರ ಯಾವಾಗಲೂ ಅಂತಹ ಒಳ್ಳೆಯ ಆಶಯವನ್ನು ಹೊಂದಿರುತ್ತವೆ. ಶಾಂತಿ ಎಂದರೆ ನೆಮ್ಮದಿ. ಶಾಂತಿಯುತವಾದ ಮನಸ್ಸು ಎಲ್ಲರದ್ದೂ ಆಗಿದ್ದಾಗ ಎಲ್ಲರಿಗೂ ನೆಮ್ಮದಿ. ಹೀಗೊಂದು ಶಾಂತಿ ಮಂತ್ರವಿದೆ.

ಓಂ ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ||
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ ||

ಹೇ ದೇವತೆಗಳೇ, ಮಂಗಳವಾದುದನ್ನು ಕಿವಿಗಳಿಂದ ಕೇಳೋಣ; ಹೇ ಪೂಜಾರ್ಹರೇ, ಪವಿತ್ರವಾದುದನ್ನು ಕಣ್ಣುಗಳಿಂದ ನೋಡೋಣ; ದೃಢವಾದ ಅವಯವಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ, ನಿಮ್ಮನ್ನು ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಆಯಸ್ಸನ್ನು ಹೊಂದೋಣ. ಇದು ಈ ಶ್ಲೋಕದ ಅರ್ಥ.

ಮಗುವೊಂದು ಪ್ರತಿಯೊಂದನ್ನು ಮೊತ್ತಮೊದಲು ಕಲಿಯುವುದು ಕೇಳುವಿಕೆ ಮತ್ತು ನೋಡುವಿಕೆಯಿಂದಲೇ. ಇದು ಮಗುವಿಗೊಂದೇ ಪ್ರತಿಯೊಬ್ಬ ಮನುಷ್ಯನಿಗೂ, ಬದುಕಿನ ಪ್ರತಿಹಂತದಲ್ಲೂ ಹೀಗೇಯೇ. ಒಂದು ಕಲ್ಪನೆಗೂ ಕೂಡ ವಾಸ್ತವದ ಯಾವುದೋ ಒಂದು ಎಳೆ ಬೇಕೇಬೇಕು. ಹಾಗೆಯೇ ಯೋಚನೆಯೊಂದು ನಮ್ಮನ್ನು ಆವರಿಸಲು ಅಥವಾ ಮನಸ್ಸಿನಲ್ಲಿ ಯೋಚನೆ ಹುಟ್ಟಲು ಕಾರಣವಾಗುವುದೇ ಈ ಕೇಳಿದ್ದು ಮತ್ತು ನೋಡಿದ್ದು. ಹುಲಿಯೊಂದನ್ನು ನೋಡಿದವನಿಗೆ ಆತ ಸಿಂಹವನ್ನು ನೋಡದೇ ಹೋದರೂ ಅದು ಹೇಗಿರುವುದೆಂಬುದನ್ನು ಅರಿವು ಮೂಡಿಸುವುದು ಸುಲಭ. ಯಾವಾಗ ಮನಸ್ಸು ಒಂದು ಶುಭಕರವಾದ ವಿಷಯವನ್ನು ಕೇಳಿಸಿಕೊಳ್ಳುವುದೋ ಅದರ ವಿಚಾರ, ವಿಷಯಗಳಲ್ಲಿಯೇ ಆಸಕ್ತವಾಗುವುದು. ಅಮಂಗಳಕರವಾದ ಅಥವಾ ಕೆಟ್ಟ ವಿಚಾರವನ್ನು ಕೇಳಿದಾಗ ಮನಸ್ಸು ಕೂಡ ಅತ್ತ ಹೊರಳುವುದೇ ಹೆಚ್ಚು. ಹಾಗಾಗಿ ಈ ಮಂತ್ರದಲ್ಲಿ ಮಂಗಳಕರವಾದದ್ದೇ ಕಿವಿಗೆ ಬೀಳಲಿ ಎಂಬ ಆಶಯವಿದೆ. ನೋಡುವುದೂ ಕೂಡ ಪವಿತ್ರವಾದದ್ದೇ ಇರಲಿ ಎಂಬ ಮತ್ತೊಂದು ಸದಾಶಯ. ಸಂಸ್ಕಾರಯುತವಾದ ಕಾರ್ಯಗಳು ಕಣ್ಣಿಗೆ ಬಿದ್ದಾಗ ಮನಸ್ಸು ಕೂಡ ಅದರ ಕಡೆಯೇ ಆಕರ್ಷಿತವಾಗಿ ದೇಹವನ್ನು ಅದರಲ್ಲಿ ತೊಡಗಿಸಲು ಅಣಿಯಾಗುತ್ತದೆ. ಅಂತೆಯೇ ಕ್ರೌರ್ಯದಂತಹ ಸಂಸ್ಕಾರರಹಿತವಾದ ಸಂಗತಿಗಳನ್ನು ಕಣ್ಣು ನೋಡುತ್ತಾ ಇದ್ದಾಗ ಮನಸ್ಸು ಅದಕ್ಕೇ ಒಗ್ಗಿಕೊಂಡು ಅದು ಕೆಟ್ಟದು ಎಂಬುದು ಅರಿವಾಗದೇ ಅಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂದಾಗುವುದು ಸಹಜ. ಹಾಗಾಗಿಯೇ ಉತ್ತಮವಾದದ್ದು ಮಾತ್ರ ನಮ್ಮ ಕಿವಿಯನ್ನು ಸೇರಬೇಕು, ಕಣ್ಣುಗಳು ನೋಡಬೇಕು. ಒಂದು ಸುಸಂಸ್ಕೃತಿಯ ಮೂಲ ಹುಟ್ಟಿಗೆ ಕಾರಣವಾಗುವ ಅಂಶಗಳು ಈ ಶಾಂತಿಮಂತ್ರಗಳಲ್ಲಿ ಅಡಕವಾಗಿವೆ.

ಇಂತಹ ಶಾಂತಿಮಂತ್ರಗಳು ನಮ್ಮನ್ನು ಆಗಾಗ ಎಚ್ಚರಿಸುತ್ತ, ಸನ್ಮಾರ್ಗದಲ್ಲಿಯೇ ಬದುಕನ್ನು ನಿರ್ವಹಿಸಲು ಪ್ರೇರಕವಾಗಿವೆ. ಆಗಾಗ ಇವನ್ನು ಕೇಳುತ್ತಿರಬೇಕು ಮತ್ತು ಅದಕ್ಕೂ ಹೆಚ್ಚಾಗಿ ಅವನ್ನು ಅಳವಡಿಸಿಕೊಳ್ಳಬೇಕು.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here