ಪಡುಪಣಂಬೂರು: ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಹಳೆಯಂಗಡಿ, ಪಡುಪಣಂಬೂರು, ಹಾಗೂ ಕೆಮ್ರಾಲ್ ಪಂಚಾಯತ್ ವ್ಯಾಪ್ತಿ ಹಾಗೂ ಇನ್ನಿತರ ಕಡೆಗಳಿಂದ ಎ.8ರಂದು ಬೃಹತ್ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಜರಗಿತು. ಮೂಲ್ಕಿ ಸೀಮೆಯ ಧರ್ಮಚಾವಡಿಯಲ್ಲಿ ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಚಾಲನೆ ನೀಡಿದರು.
ಹೊರೆಕಾಣಿಕೆ ಸಂಗ್ರಹಣದ ಉಪ ಕೇಂದ್ರಗಳಾದ ಪಡುಪಣಂಬೂರು, ಹಳೆಯಂಗಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ, ಕಲ್ಲಾಪುವಿನ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ, ಪಾವಂಜೆಯ ಓಂ ಕ್ರಿಕೆಟರ್ಸ್, ಸಸಿಹಿತ್ಲು, ಕದಿಕೆ ಭಂಡಾರ ಮನೆಯಿಂದ, ಬೆಳ್ಳಾಯರು ಮತ್ತು ಕೆರೆಕಾಡಿನ ಶ್ರೀ ದುರ್ಗಾ ಪರಮೇಶ್ವರಿ ಭಜನ ಮಂದಿರದಿಂದ ಭಕ್ತರು, ವಿವಿಧ ಸಂಘ-ಸಂಸ್ಥೆ, ಸಂಘಟನೆಗಳು ಹೊರೆಕಾಣಿಕೆಯನ್ನು ಮೂಲ್ಕಿ ಅರಮನೆಗೆ ತಂದರು.
ಮೂಲ್ಕಿ ಅರಮನೆಯಿಂದ ಭವ್ಯ ಮೆರವಣಿಗೆಯಲ್ಲಿ ವಾಹನಗಳ ಮೂಲಕ ಹಳೆಯಂಗಡಿ ಒಳ ಪೇಟೆಯ ಮೂಲಕ ವಿವಿಧ ಚೆಂಡೆ, ತಾಸೆ ಡೋಲು, ವಾದ್ಯ ಹಾಗೂ ಪೂರ್ಣ ಕುಂಭ ಕಲಶದೊಂದಿಗೆ, ಸಾಗಿ ಪಾವಂಜೆ ಕ್ಷೇತ್ರಕ್ಕೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯಾಗದ ಉಪ ಸಮಿತಿಯ ಪ್ರಮುಖರು, ಸ್ವಯಂ ಸೇವಕರು, ಭಕ್ತರು ಭಾಗವಹಿಸಿದ್ದರು.
ಗುರುಪುರ ಗೋಳಿದಡಿ ಗುತ್ತಿನ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಯವರು ಗುರುಪುರದಿಂದ, ಮಹೇಶ್ ಶೆಟ್ಟಿ ತಿಮರೋಡಿ ಅವರು ಬೆಳ್ತಂಗಡಿಯಿಂದ ಹೊರೆಕಾಣಿಕೆಯನ್ನು ಸಮರ್ಪಿಸಿದರು.
ದೇಗುಲದಲ್ಲಿ ಯಾಗದ ಪ್ರಧಾನಿ ನಳಿನ್ ಕುಮಾರ್ ಕಟೀಲು, ಯಾಗದ ನಿರ್ದೇಶಕ ಕೆ.ಎಸ್.ನಿತ್ಯಾನಂದ, ಧರ್ಮದರ್ಶಿ ಡಾ| ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ.ಶಶೀಂದ್ರ ಕುಮಾರ್, ಯಾಗದ ಪ್ರಮುಖರು ಹೊರೆಕಾಣಿಕೆಯನ್ನು ಬರಮಾಡಿಕೊಂಡರು.