Home ಧಾರ್ಮಿಕ ಸುದ್ದಿ ಕೃಷ್ಣಮಠದಲ್ಲಿ ಪಶ್ಚಿಮಜಾಗರ ಪೂಜಾ ಸಡಗರ

ಕೃಷ್ಣಮಠದಲ್ಲಿ ಪಶ್ಚಿಮಜಾಗರ ಪೂಜಾ ಸಡಗರ

1542
0
SHARE

ಉಡುಪಿ: ಶ್ರೀಕೃಷ್ಣಮಠದಲ್ಲಿ ಆಶ್ವಿ‌ಜ ಶುದ್ಧ ಏಕಾದಶಿಯಿಂದ (ಶನಿವಾರ) ಕಾರ್ತಿಕ ಶುದ್ದ ಉತ್ಥಾನದ್ವಾದಶಿಯವರೆಗೆ ದಿನವೂ ಬೆಳಗ್ಗೆ ಅಪರೂಪದ ವಾದ್ಯಘೋಷಗಳು ಬಳಿಕ ಪರ್ಯಾಯ ಶ್ರೀಪಾದರಿಂದ ಪಶ್ಚಿಮ ಜಾಗರ ಪೂಜೆ ನಡೆಯುತ್ತಿದೆ.

ಆಷಾಢಶುದ್ಧ ಏಕಾದಶಿಯಿಂದ ಭಗವಂತ ಯೋಗನಿದ್ರೆಯಲ್ಲಿದ್ದಾನೆಂಬ ನಂಬಿಕೆ. ಈ ಒಂದು ತಿಂಗಳು ಬೆಳಗ್ಗೆ ಅಪೂರ್ವ ವಾದ್ಯಘೋಷ, ಬಳಿಕ ಪಶ್ಚಿಮಜಾಗರ ಪೂಜೆ ನಡೆಯುತ್ತದೆ. ಯೋಗನಿದ್ರೆಯಿಂದ ಭಗವಂತನನ್ನು ಎಚ್ಚರಿಸಲು ಭಕ್ತರು ಮಾಡುವ ಸೇವೆ ಇದು. ಜಾಗರ= ನಿದ್ರೆ, ಪಶ್ಚಿಮಜಾಗರ ರಾತ್ರಿಯ ಕೊನೆಯ ಭಾಗ. ಈ ಆಚರಣೆಯನ್ನು ಮಧ್ವಾಚಾರ್ಯರು ವರಾಹಪುರಾಣದಿಂದ ಉಲ್ಲೇಖೀಸಿ ಚಾಲ್ತಿಗೆ ತಂದಿದ್ದಾರೆ ಎನ್ನುತ್ತಾರೆ ವಿದ್ವಾಂಸರು.

ಬೆಳಗ್ಗೆ ಸುಮಾರು 4 ರಿಂದ ವಾದ್ಯಘೋಷ ಅನುಕ್ರಮವಾಗಿ ಶಂಖ, ನಗಾರಿ, ಡಮರು, ಡೋಲು ಕೊಂಬು, ಉಡಿಕೆ ವಾದ್ಯ (ಚರ್ಮ ವಾದ್ಯ), ತಾಸೆ, ಸೂರ್ಯವಾದ್ಯ ನಾಗಸ್ವರದೊಂದಿಗೆ, ನಾಗಸ್ವರ ಡೋಲಕ್‌ನೊಂದಿಗೆ, ಚಂಡೆ, ಸ್ಯಾಕೊಫೋನ್‌ ವಾದನ ನಡೆಯುತ್ತದೆ. ಈ ವೇಳೆ ಭಾಗವತರು ಪುರಂದರ, ಕನಕ ಮೊದಲಾದ ದಾಸವರೇಣ್ಯರ
ಹಾಡುಗಳನ್ನು ಉದಯರಾಗದೊಂದಿಗೆ ಹಾಡುತ್ತಾರೆ. ಪರ್ಯಾಯ ಶ್ರೀಪಾದರು ಸೂರ್ಯೋದಯಕ್ಕೆ ಮುಂಚೆ ಪ್ರಾರ್ಥನೆ ಮಾಡಿ ಕೂರ್ಮಾರತಿಯನ್ನು ಹೊರಗಿನ ಒಂದು ಸುತ್ತು ತಂದು ದೇವರಿಗೆ ಬೆಳಗುತ್ತಾರೆ, ಬಳಿಕ ತುಳಸಿ (ಲಕ್ಷ್ಮೀಸನ್ನಿಧಾನ), ಮುಖ್ಯಪ್ರಾಣ, ಮಧ್ವಾಚಾರ್ಯರು, ಗರುಡದೇವರಿಗೆ ಬೆಳಗುತ್ತಾರೆ. ಅನಂತರ ಕಲಾವಿದರು ವಾದ್ಯ ವಾದನವನ್ನು ಜಂಪೆ, ರೂಪಕ, ತ್ರಿಪುಟ, ಆದಿ, ಸಂಕೀರ್ಣ ತಾಳದೊಂದಿಗೆ ನುಡಿಸುತ್ತ ಐದು ಸುತ್ತು ಬರುತ್ತಾರೆ. ಇದೇ ವೇಳೆ ಭಾಗವತರೂ ಹಾಡುಗಳನ್ನು ಹಾಡುತ್ತಿರುತ್ತಾರೆ. ವಿದ್ಯುತ್‌ ಬೆಳಕಿನ ಬದಲು ಸುತ್ತಲೂ ಹಣತೆಗಳು ಬೆಳಕನ್ನು ಹೊರಸೂಸುತ್ತಿರುತ್ತವೆ. ವಿವಿಧ ಬಗೆಯ ವಾದ್ಯಪ್ರಕಾರಗಳು, ಹಾಡುಗಳು, ಹಣತೆಗಳ ಬೆಳಕಿನ ಸಂಯೋಜನೆ ಈ ಒಂದು ತಿಂಗಳ ಅವಧಿಯಲ್ಲಿ ನೋಡಲು ಸಿಗುತ್ತದೆ.

ಪಶ್ಚಿಮ ಜಾಗರ ಪೂಜೆ ಆರಂಭ ವಾಗುವಾಗ ಪರ್ಯಾಯ ಮತ್ತು ಇತರ ಮಠಾಧೀಶರು ಆಗಮಿಸಿ ನೈರ್ಮಾಲ್ಯ ವಿಸರ್ಜನೆ, ಬಾಲರೂಪ, ಉಷಃ ಕಾಲ, ಗೋಪೂಜೆ, ಅಕ್ಷಯಪಾತ್ರೆ, ಪಂಚಾಮೃತ ಅಭಿಷೇಕ ಪೂಜೆಗಳನ್ನು ನಡೆಸುತ್ತಾರೆ. ಪಶ್ಚಿಮ ಜಾಗರ ಪೂಜೆ ಅನಂತರ ಉಧ್ವರ್ತನ, ಕಲಶ ಪೂಜೆ, ತೀರ್ಥಪೂಜೆ, ಅಲಂಕಾರ ಪೂಜೆಗಳು ನಡೆಯುತ್ತವೆ. ಪಶ್ಚಿಮ ಜಾಗರ ಪೂಜೆ ಇಷ್ಟು ವಿಸ್ತೃತವಾಗಿಯಲ್ಲದಿದ್ದರೂ ಕೆಲವು ದೇವಾಲಯಗಳಲ್ಲಿ ವಿಶೇಷವಾಗಿ ಮಠ ಪರಂಪರೆಯ ದೇವಸ್ಥಾನಗಳಲ್ಲಿ, ಸ್ವಾಮೀಜಿಯವರು ಮೊಕ್ಕಾಂ ಇರುವ ಕಡೆ ನಡೆಯುತ್ತದೆ.

LEAVE A REPLY

Please enter your comment!
Please enter your name here