ಬ್ರಹ್ಮದೇವನಿಗೆ ನಾಲ್ಕು ತಲೆಗಳು. ಈ ನಾಲ್ಕು ತಲೆಗಳು ಸದಾ ವೇದಗಳನ್ನು ಪಠಿಸುತ್ತವೆ. ಪುರಾಣಗಳ ಪ್ರಕಾರ ಹಿಂದೆ ಬ್ರಹ್ಮದೇವನಿಗೆ ಐದು ತಲೆಗಳಿದ್ದವು. ಐದನೆಯ ತಲೆಯನ್ನು ಶಿವ ಕತ್ತರಿಸಿ ಹಾಕಿದ್ದ.
ಶಿವ ಯಾಕೆ ಬ್ರಹ್ಮನ ತಲೆ ಕತ್ತರಿಸಿದ ಎಂಬ ಬಗ್ಗೆ ಹಲವಾರು ಕಥೆಗಳಿವೆ. ಉದ್ಭವ ಶಿವಲಿಂಗದ ಮೂಲ ಹುಡುಕಲು ವಿಫಲರಾದ ವಿಷ್ಣು ಮತ್ತು ಬ್ರಹ್ಮರ ನಡುವಿನ ಪಂಥದಲ್ಲಿ ಬ್ರಹ್ಮ ಸುಳ್ಳು ಹೇಳಿದ್ದ ಎನ್ನುವುದು ಒಂದು ಕಥೆ. ಈ ತಪ್ಪಿಗಾಗಿ ಶಿವ ಬ್ರಹ್ಮದೇವನ ಒಂದು ತಲೆಯನ್ನು ಕತ್ತರಿಸಿ ಹಾಕಿದ್ದು ಮಾತ್ರವಲ್ಲದೇ, ಬ್ರಹ್ಮದೇವನಿಗೆ ಭೂಲೋಕದಲ್ಲಿ ಯಾರೂ ಪೂಜೆ ಸಲ್ಲಿಸಬಾರದು, ಬ್ರಹ್ಮನ ಪರವಾಗಿ ಸಾಕ್ಷಿ ಹೇಳಿದ್ದ ಕೇದಗೆಯನ್ನು ಯಾವುದೇ ಪೂಜೆಗೆ ಬಳಸಬಾರದು ಎಂದು ಶಾಪ ನೀಡಿದ್ದ ಎನ್ನುತ್ತದೆ ಈ ಕಥೆ.
ಬ್ರಹ್ಮದೇವನ ತನ್ನ ಪುತ್ರಿ ಸರಸ್ವತಿಯನ್ನೇ ಮೋಹಿಸಿದ ಕಾರಣವೂ ಅವನಿಗೆ ಪೂಜೆ ಇಲ್ಲ ಎನ್ನುತ್ತದೆ ಇನ್ನೊಂದು ಕಥೆ. ಬ್ರಹ್ಮ ಶತರೂಪಾ ಎಂಬ ಸುರಸುಂದರಿಯನ್ನು ಸೃಷ್ಟಿಸಿದ್ದ, ಅವಳನ್ನು ನಿರಂತರ ನೋಡುವ ಸಲುವಾಗಿ ಐದು ತಲೆಗಳನ್ನು ಬೆಳೆಸಿಕೊಂಡಿದ್ದ, ಶಿವ ಕೋಪದಲ್ಲಿ ಅವನ ಒಂದು ತಲೆಯನ್ನು ಕತ್ತರಿಸಿ, ಅವನಿಗೆ ಪೂಜೆ ಸಲ್ಲಬಾರದು ಎಂದು ಶಾಪ ನೀಡಿದ್ದ ಎನ್ನುತ್ತದೆ ಮತ್ತೊಂದು ಕಥೆ.
ಬ್ರಹ್ಮದೇವ ತನ್ನ ಮಹಾಯಾಗದಲ್ಲಿ ಆಹುತಿ ನೀಡುವ ಸಲುವಾಗಿ ಎರಡನೆಯ ಮದುವೆಯಾಗಿದ್ದ. ಇದರಿಂದ ಸಿಟ್ಟಿಗೆದ್ದ ಪ್ರಥಮ ಪತ್ನಿ ಸಾವಿತ್ರಿ ದೇವಿ ಬ್ರಹ್ಮದೇವನಿಗೆ ಪುಷ್ಕರ ಒಂದನ್ನು ಬಿಟ್ಟರೆ ಬೇರೆಲ್ಲೂ ಪೂಜೆ ಸಲ್ಲಬಾರದು ಎಂದು ಶಾಪ ನೀಡಿದ್ದಳು ಎನ್ನುತ್ತದೆ ಪುಷ್ಕರದ ಸ್ಥಳಪುರಾಣ. ಕಥೆಗಳು ಏನೇ ಇರಲಿ, ಬ್ರಹ್ಮದೇವನ ದೇವಾಲಯಗಳು ತೀರಾ ವಿರವಾಗಿವೆ ಎನ್ನುವುದಂತೂ ನಿಜ.
ಪುಷ್ಕರದ ಜಗತ್ ಪಿತ ಬ್ರಹ್ಮದೇವಾಲಯ ಬ್ರಹ್ಮದೇವನ ಬಹುಮುಖ್ಯ ದೇವಾಲಯ. ಅಲ್ಲಿನವರೇ ಪ್ರಕಾರ ಇದು ಜಗತ್ತಿನ ಏಕೈಕ ಬ್ರಹ್ಮ ದೇವಾಲಯ. ಆದರೆ ಈ ಮಾತು ನಿಜವಲ್ಲ. ಭಾರತದ ಕೆಲವು ಭಾಗಗಳಲ್ಲಿ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಹಲವಾರು ಬ್ರಹ್ಮ ದೇವಾಲಯಗಳಿವೆ.
ರಾಜಸ್ಥಾನದಲ್ಲೇ ಬ್ರಹ್ಮದೇವನ ಇನ್ನೊಂದು ದೇವಾಲಯ ಇದೆ. ಬಾಮೇರ್ ಜಿಲ್ಲೆಯ ಬಲೋತ್ರಾ ತಾಲೂಕಿನ ಅಸೋತ್ರಾ ಎಂಬ ಹಳ್ಳಿಯಲ್ಲಿರುವ ಈ ಸುಪ್ರಸಿದ್ಧ ಬ್ರಹ್ಮ ದೇವಾಲಯಕ್ಕೆ ಖೇತೇಶ್ವರ ಬ್ರಹ್ಮಾಂಡಮ್ ತೀರ್ಥ ಎಂದು ಹೆಸರಿದೆ. ಇಲ್ಲಿ ಬ್ರಹ್ಮದೇವನ ಜೊತೆಗೆ ಗಾಯತ್ರೀ ದೇವಿಗೆ ಪೂಜೆ ಸಲ್ಲುತ್ತದೆ.
ವೈಷ್ಣವರಿಗೆ ಪವಿತ್ರವಾದ ದಿವ್ಯ ದೇಶಂಗಳ ಸಾಲಿಗೆ ಬರುವ ಉತ್ತಮರ್ ಕೋವಿಲ್ ನಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹಾದೇವರಿಗೆ ಜೊತೆಯಾಗಿ ಪುಜೆ ಸಲ್ಲುತ್ತದೆ. ಈ ದೇವಾಲಯ ಇರುವುದು ತಮಿಳುನಾಡಿನ ತಿರುಚಿರಪಳ್ಳಿಯ ಹೊರವಲಯದಲ್ಲಿ.
ಪೊನ್ ಮೇರಿ ಶಿವ ದೇವಾಲಯ, ಮಿತ್ರಾನಂತಪುರಮ್ ತ್ರಿಮೂರ್ತಿ ದೇವಾಲಯ, ತ್ರಿಪಾಯ ತ್ರಿಮೂರ್ತಿ ದೇವಾಲಯ ಮುಂತಾದ ತ್ರಿಮೂರ್ತಿ ದೇವಾಲಯಗಳಲ್ಲೂ ವಿಷ್ಣು, ಮಹೇಶ್ವರರ ಜೊತೆಗೆ ಬ್ರಹ್ಮನಿಗೆ ಪೂಜೆ ಸಲ್ಲುತ್ತದೆ. ತಿರುಚಿರಪಳ್ಳಿಯ ಬ್ರಹ್ಮಪುರೀಶ್ವರರ್ ದೇವಾಲಯ ಮತ್ತು ಕುಂಭಕೋಣಂನ ಬ್ರಹ್ಮದೇವಾಲಯಗಳು ತಮಿಳುನಾಡಿನಲ್ಲಿ ಬ್ರಹ್ಮದೇವನಿಗೆ ಮೀಸಲಾದ ಇನ್ನಿತರ ದೇವಾಲಯಗಳು.
ಆಂಧ್ರಪ್ರದೇಶದಲ್ಲಿ ಶ್ರೀ ಕಾಳಹಸ್ತಿಯಲ್ಲಿ ಒಂದು ಬ್ರಹ್ಮದೇವಾಲಯ ಇದೆ. ಚೆಬ್ರೋಲು ಎಂಬಲ್ಲಿ ಚತುರ್ಮುಖಿ ಬ್ರಹ್ಮದೇವಾಲಯ ಇದೆ. ಬೆಂಗಳೂರಿನಲ್ಲಿ ಚತುರ್ಮಖಿ ಬ್ರಹ್ಮನ ದೇವಾಲಯ ಇದೆ. ಗೋವಾದ ಸತ್ತರಿ ತಾಲೂಕಿನ ಕರಂಬೋಲಿಮ್ ಎಂಬ ಹಳ್ಳಿಯಲ್ಲಿ ಐದನೆಯ ಶತಮಾನದಲ್ಲಿ ನಿರ್ಮಾಣವಾಗಿದ್ದ ಒಂದು ಪ್ರಾಚೀನ ದೇವಾಲಯ ಪತ್ತೆಯಾಗಿದೆ.
ಮಹಾರಾಷ್ಟದಲ್ಲಿ ಮಂಗಲ್ ವೇಡೆ ಎಂಬ ಹಳ್ಳಿಯಲ್ಲಿ ಬ್ರಹ್ಮನ ವಿಗ್ರಹ ಇದೆ. ಗುಜರಾತ್ ನ ಖೇಡಬ್ರಹ್ಮ ಎಂಬಲ್ಲಿ 12ನೆಯ ಶತಮಾನದ ಬ್ರಹ್ಮ ದೇವಾಲಯ ಇದೆ. ಕಾನ್ಪರದಲ್ಲಿ ಬ್ರಹ್ಮಕುಟಿ ಎಂಬ ದೇವಾಲಯ ಇದೆ. ಉತ್ತರ ಪ್ರದೇಶದ ಬಿಥೂರ್ ಎಂಬಲ್ಲೂ ಬ್ರಹ್ಮ ದೇವಾಲಯ ಇದೆ.
ಬ್ರಹ್ಮದೇವನ ದೇವಾಲಯಗಳು ವಿದೇಶಗಳಲ್ಲೂ ಸಾಕಷ್ಟು ಇವೆ. ಕಂಬೋಡಿಯಾದ ಪ್ರಾಚೀನ ಅಂಗಾರವತಿ (ಅಂಕೋರ್ ವಾಟ್) ಯಲ್ಲಿ ಸುಪ್ರಸಿದ್ಧ ಬ್ರಹ್ಮ ಪ್ರತಿಮೆ ಇದೆ. ಇಂಡೋನೇಶಿಯಾದ ಜಾವಾ ದ್ವೀಪಗಳಲ್ಲಿ ಯೋಗ್ಯಕರ್ತ ಎಂಬಲ್ಲಿರುವ ಪ್ರಸಿದ್ಧ ಪ್ರಬಾನನ್ ದೇವಾಲಯ ಸಂಕುಲಗಳ ಮುಖ್ಯ ಮೂರು ದೇವಾಲಯಗಳಲ್ಲಿ ಒಂದು ಬ್ರಹ್ಮನಿಗೆ ಮೀಸಲಾಗಿದೆ. ಬಾಲಿಯ ಬೇಸಾಖಿ ಮಾತೃ ದೇವಾಲಯದಲ್ಲಿ ಬ್ರಹ್ಮನ ಗುಡಿ ಇದೆ.
ಬ್ಯಾಂಕಾಕ್ ನಲ್ಲಿ ಇರಾವನ್ ಗುಡಿಯಲ್ಲಿರುವ ಬ್ರಹ್ಮನಿಗರ ಇಂದಿಗೂ ಪೂಜೆ ಸಲ್ಲುತ್ತದೆ. ಥಾಯ್ಲೆಂಡ್ ನಲ್ಲಿ ಬ್ರಹ್ಮನಿಗೆ ಫ್ರಾ ಫ್ರೋಮ್ ಎಂದು ಹೆಸರು. ಥಾಯ್ಲೆಂಡ್ ವಿಧಾನಸಭೆಯ ಸ್ವರ್ಣಗುಂಬಜದ ಒಳಗೆ ಫ್ರಾ ಫ್ರೋಮ್ ನ ಪ್ರತಿಮೆ ಪ್ರಧಾನವಾಗಿದೆ.
ಬರ್ಮಾ ದೇಶಕ್ಕೆ ಬ್ರಹ್ಮದೇವನಿಗೆ ಹೆಸರು ಬಂದಿತ್ತು. ಮಧ್ಯಕಾಲೀನ ಬರಹಗಳಲ್ಲಿ ಈ ಪ್ರದೇಶವನ್ನು ಬ್ರಹ್ಮದೇಶ ಎಂದೇ ಉಲ್ಲೇಖಿಸಲಾಗುತ್ತಿತ್ತು.
ನೀಲ್ ಕಮಲ್ ಉತ್ಸವ್
ಫೆಬ್ರವರಿ ತಿಂಗಳಲ್ಲಿ ಪುಷ್ಕರದಲ್ಲಿ ನಡೆಯುವ ನೀಲಿ ಕಮಲ ಉತ್ಸವ ಇಲ್ಲಿನ ಇನ್ನೊಂದು ಸಂಭ್ರಮದ ಹಬ್ಬ. ಜಾನಪದ ನೃತ್ಯ ಸಂಗೀತಗಳಿಗೆ ಮೀಸಲಾದ ಈ ಉತ್ಸವ ಅತ್ಯಧಿಕ ಸಂಖ್ಯೆಯಲ್ಲಿ ವಿದೇಶಿಯರನ್ನು ಆಕರ್ಷಿಸುತ್ತದೆ.
ಕಿಶನ್ ಗಡ್ ನ ಬಾನಿ ಥಾನಿ
ರಾಜಸ್ತಾನದ ಅಜ್ಮೇರ್ ನಿಂದ 27 ಕಿಲೋ ಮೀಟರ್ ದೂರ ಇರುವ ಊರು ಕಿಶನ್ ಗಡ್. 1748-1751 ರಲ್ಲಿ ಕಿಶನ್ ಗಡ್ ನ ರಾಜನಾಗಿದ್ದ ರಾಜಾ ಸಾವಂತ್ ಸಿಂಗ್ ಸ್ವತಃ ಕಲಾಕಾರ ಮತ್ತು ಕವಿಯಾಗಿದ್ದ. ಆವನ ಆಸ್ಥಾನದಲ್ಲಿದ್ದ ನಿಹಾಲ್ ಚಂದ್ ಎಂಬ ಮಹಾನ್ ಕಲಾಕಾರ ಸೃಷ್ಟಿಸಿದ್ದ ಕಲಾಶೈಲಿಗೆ ಕಿಶನ್ ಗರ್ ಕಲೆ ಎಂದು ಹೆಸರು ಬಂತು.
ಚಿಕ್ಕಗಾತ್ರದ ಸಾಂಪ್ರಾದಾಯಿಕ ಚಿತ್ರಗಳ ಕಲಾಶೈಲಿಗೆ ಮಿನಿಯೇಚರ್ ಎಂದು ಹೆಸರು. ಇವುಗಳಲ್ಲಿ ಕಿಶನ್ ಗಡ್ ಮಿನಿಯೇಚರ್ ಕಲೆಗೆ ಒಂದು ವಿಶಿಷ್ಟ ಸ್ಥಾನ ಇದೆ.
ಕಿಶನ್ ಗಡ್ ಕಲೆಯಲ್ಲಿ ರಾಧಾಕೃಷ್ಣರ ಕಥೆಗಳು ಜೀವಂತವಾಗುತ್ತವೆ. ಕಿಶನಗ ಗಡ್ ಶೈಲಿಯಲ್ಲಿ ವರ್ಣರಂಜಿತ ಬಟ್ಟೆ, ಒಡವೆಗಳನ್ನು ಧರಿಸಿದ ರಾಧೇಯ ಚಿತ್ರಣ ಬಾನಿ-ಥಾನಿ ಎಂಬ ಹೆಸರಿನಲ್ಲಿ ವಿಶ್ವಪ್ರಸಿದ್ಧವಾಗಿದೆ. ತಾವರೆಯ ಕಣ್ಣುಗಳು, ನೀಳ ಮೂಗು, ಚೂಪು ಗದ್ದಗಳ ಬಾನಿ ಥಾನಿ ರಾಧೆಗೆ ಭಾರತದ ಮೋನಾಲೀಸಾ ಎಂದೇ ಬಿರುದು ಬಂದಿದೆ!
ಪುಷ್ಕರ ಪ್ರಯಾಣ
ಜೈಪುರದ ಸಾಂಗಾನೇರ್ ವಿಮಾನ ನಿಲ್ದಾಣದಿಂದ ಪುಷ್ಕರ 146 ಕಿಲೋಮೀಟರ್ ದೂರದಲ್ಲಿದೆ.
ರಾಜಸ್ತಾನದ ಸುಪ್ರಸಿದ್ಧ ಪಟ್ಟಣ ಅಜ್ಮೇರ್ ನಿಂದ ಪುಷ್ಕರಕ್ಕೆ 11ಕಿಲೋಮೀಟರ್ ದೂರ. ಇವೆರಡು ಪಟ್ಟಣಗಳ ನಡುವಿನ ದಾರಿ ಅರಾವಳಿ ಬೆಟ್ಟಗಳ ನಡುವೆ ಸಾಗುತ್ತದೆ. ಈ ಬೆಟ್ಟದ ದಾರಿಗೆ ಪುಷ್ಕರ ಘಾಟಿ ಎಂದು ಹೆಸರು. ರಾಜಸ್ಥಾನ ಸರಕಾರ ಇಲ್ಲಿ ರಾಜಸ್ಥಾನ್ ರೋಡ್ ವೇಸ್ ನ ಬಸ್ಸುಗಳನ್ನು ಓಡಿಸುತ್ತದೆ. ಇಲ್ಲಿ ಸಾಕಷ್ಟು ಖಾಸಗಿ ವಾಹನಗಳೂ ಓಡುತ್ತವೆ.
ದೇಶದ ವಿವಿಧ ಭಾಗಗಳಿಂದ ಅಜ್ಮೇರ್ ಗೆ ರೈಲು ಸಂಪರ್ಕ ಇದೆ. ಜನವರಿ 2012ರಲ್ಲಿ ಪುಷ್ಕರ ರೈಲು ಟರ್ಮಿನಸ್ ಕಾರ್ಯಾರಂಭ ಮಾಡಿತ್ತು. ಅಜ್ಮೇರ್ ನಿಂದ ಇಲ್ಲಿಗೆ ಮುಂಜಾನೆ 10 ಗಂಟೆಗೆ ಅಜ್ಮೇರ್ ಪುಷ್ಕರ ಪ್ಯಾಸೆಂಜರ್ (59607) ರೈಲು ಹೊರಡುತ್ತದೆ. 30 ಕಿಲೋಮೀಟರ್ ದೂರದ ಈ ದಾರಿ ರಸರ್ವೇಶನ್ ಇರುವುದಿಲ್ಲ. 30 ಕಿಲೋಮೀಟರ್ ದೂರದ ಈ ದಾರಿ ಕ್ರಮಿಸಲು ಪ್ಯಾಸೆಂಜರ್ ರೈಲಿಗೆ 1 ಗಂಟೆ 25 ನಿಮಿಷ ಹಿಡಿಯುತ್ತದೆ.
ನವೆಂಬರ್ ತಿಂಗಳಲ್ಲಿ ಪುಷ್ಕರದ ವಾತಾವರಣ ತಂಪಾಗಿರುತ್ತದೆ. ಹಗಲಲ್ಲಿ ಹೆಚ್ಚೆಂದರೆ, 25 ಡಿಗ್ರಿ ಸೆಲ್ಸಿಯಸ್ ಇದ್ದರೆ, ರಾತ್ರಿಯ ವೇಳೆ ತಾಪಮಾನ 15 ಡಿಗ್ರಿಗೆ ಇಳಿಯುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ನಡುವಿನ ಕಾಲ ಪುಷ್ಕರ ಭೇಟಿಗೆ ಸೂಕ್ತವಾಗಿರುತ್ತದೆ.
ಸೆಕೆಗಾಲ ಮತ್ತು ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸ ಕಷ್ಟ. ಇಲ್ಲಿ ಸೆಕೆಗಾಲ (ಮಾರ್ಚ್ ನಿಂದ ಜೂನ್) ವಿಪರೀತ ಸೆಕೆ. ಪಟ್ಟಣ ಮತ್ತು ಹೊರವಲಯದಲ್ಲಿ ಹಗಲಲ್ಲಿ 45 ಡಿಗ್ರಿ ತಾಪಮಾನ ಇರುತ್ತದೆ. ರಾತ್ರಿಯ ವೇಳೆ ಇದು 25 ಡಿಗ್ರಿಗೆ ಇಳಿಯುತ್ತದೆ. ಜುಲೈ ತಿಂಗಳಲ್ಲಿ ಆರಂಭವಾಗುವ ಮಾನ್ಸೂನ್ ಮಳೆ ಸಪ್ಟೆಂಬರ್ ಕೊನೆಯ ತನಕ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ಸೆಕೆ ಮತ್ತು ತೇವಭರಿತ ಹವಾಮಾನ ಇರುತ್ತದೆ.
• ಪುಷ್ಕರದಲ್ಲಿ ಪುಷ್ಕರ ಮೇಳ ಮಾತ್ರವಲ್ಲದೆ, ನಾಗೋರ್ ಮೇಳ, ತೇಜಾಜಿ ಮೇಳ ಮತ್ತು ನೀಲಿ ತಾವರೆ ಮೇಳ ಎಂಬ ಉತ್ಸವಗಳೂ ನಡೆಯುತ್ತದೆ. ಎಲ್ಲಕ್ಕಿಂತ ಜನಪ್ರಿಯವಾಗಿರುವುದು ಪುಷ್ಕರ ಮೇಳ.
• ಪುಷ್ಕರಕ್ಕೆ ರಾಜಸ್ತಾನದಲ್ಲಿ ಗುಲಾಬಿಗಳ ಹೂದೋಟ ಎಂದು ಹೆಸರಿದೆ. ಇಲ್ಲಿನ ಗುಲಾಬಿ ಎಸೆನ್ಸ್ ವಿದೇಶಗಳಿಗೆ ರಫ್ತಾಗುತ್ತದೆ.
ಪುಷ್ಕರ ಮೇಳದ ಶಾಪಿಂಗ್
ಪುಷ್ಕರ ಮೇಳದಲ್ಲಿ ರಾಜಸ್ತಾನದ ಕರಕುಶಲ ವಸ್ತುಗಳ ಭಂಡಾರವೇ ತೆರೆದುಕೊಳ್ಳುತ್ತದೆ. ರಂಗು ರಂಗಿನ ಮಣಿಸರಗಳು, ಹಿತ್ತಾಳೆಯ ವಿಗ್ರಹಗಳು, ಆಕರ್ಷಕ ಬಳೆಗಳು, ಚರ್ಮದ ತಯಾರಿಕೆಗಳು, ಬಾಂಧನೀ ಬಟ್ಟೆಗಳು, ಅಚ್ಚುಕಟ್ಟಾಗಿ ಕತ್ತರಿಸಿ ಲಕಲಕಿಸುವ ಅಮೂಲ್ಯ ಹರಳುಗಳು, ಮರ ಮತ್ತು ದಂತದ ಕೆತ್ತನೆಗಳು, ಬ್ಲಾಕ್ ಪ್ರಿಂಟ್ ನ ಬಟ್ಟೆಗಳು, ಎನಾಮಲ್ ಆಭರಣಗಳು, ಅವೆಮಣ್ಣಿನ ಮತ್ತು ಟೆರಕೋಟಾ ಪ್ರತಿಮೆಗಳು, ಬೆಳ್ಳಿಯ ಆಭರಣಗಳು, ಗುಲಾಬಿ ಎಸೆನ್ಸ್ ಇಲ್ಲಿನ ವಿಶೇಷ.
ಪುಷ್ಕರ ಪಟ್ಟಣದಲ್ಲೂ ಶಾಪಿಂಗ್ ಕೇಂದ್ರಗಳಿವೆ. ಚರ್ಮದ ತಯಾರಿಕೆಗಳು ಮತ್ತು ಆಕರ್ಷಕ ವಿನ್ಯಾಸದ ಬಾಂದನೀ ಬಟ್ಟೆ ಬರೆಗಳನ್ನು ಕೊಳ್ಳಲು ಉತ್ತಮ ಜಾಗ ಇದು. ಉತ್ತಮ ದರ್ಜೆಯ ಕಸೂತಿ ಸೀರೆಗಳು, ಲೆಹಂಗಾ, ದುಪ್ಪಟ್ಟಾಗಳು ಕಡಿಮೆ ಬೆಲೆಗೆ ಸಿಗುತ್ತವೆ.
ಕಿಶನ್ ಗರ್ ನ ಸುಪ್ರಸಿದ್ಧ ಬಾನಿಥಾನಿ ಮಿನಿಯೇಚರ್ ಕಲಾಕೃತಿಗಳು, ರಾಜಸ್ತಾನಿ ಕಟ್ ಪುತ್ಲೀ (ಕಟ್ಟಿಗೆ ಗೊಂಬೆಗಳು) ಮತ್ತು ಅನಂತ ವೈವಿಧ್ಯದ ಕರಕುಶಲ ವಸ್ತುಗಳು ಇಲ್ಲಿ ಮಾರಾಟಕ್ಕಿವೆ.
ಪಟ್ಟಣದ ನಡುವಿನ ಮುಖ್ಯ ಬಜಾರ್ ಎಂದರೆ ಸದರ್ ಬಜಾರ್. ಇಲ್ಲಿ ಬೆಳ್ಳಿ ಮತ್ತು ಅಮೃತ ಶಿಲೆಯ ಮೂರ್ತಿಗಳು, ಮನೆಯ ಅಲಂಕಾರಿಕ ವಸ್ತುಗಳು ಸಿಗುತ್ತವೆ. ಕೇದಾಲ್ ಗಂಜ್ ಬಜಾರ್ ನಲ್ಲಿ ಬಾನಿ ಥಾನಿ ಕಲಾಕೃತಿಗಳ ಸಹಿತ ಸುಂದರ, ಅಪೂರ್ವ ಕರಕುಶಲ ವಸ್ತುಗಳು ಸಿಗುತ್ತವೆ. ಸರಾಫಾ ಬಜಾರ್ ನಲ್ಲಿ ಬಟ್ಟೆ ಬರೆಗಳು, ಬೆಳ್ಳಿಯ ಆಭರಣಗಳು ಸಿಗುತ್ತವೆ.