Home ಧಾರ್ಮಿಕ ಕ್ಷೇತ್ರಗಳು ಭಾಗ-3; ಪುಷ್ಕರ ತೀರ್ಥದಲ್ಲಿ ಹಲವು ಭಾಗ್ಯಗಳನ್ನು ನೀಡೋ ಘಾಟ್ ಗಳಿವೆ

ಭಾಗ-3; ಪುಷ್ಕರ ತೀರ್ಥದಲ್ಲಿ ಹಲವು ಭಾಗ್ಯಗಳನ್ನು ನೀಡೋ ಘಾಟ್ ಗಳಿವೆ

1467
0
SHARE

ಪ್ರತಿದಿನ ಸೂರ್ಯಾಸ್ತದ ಬಳಿಕ ಪುಷ್ಕರ ಕೆರೆಯಲ್ಲಿ ಆರತಿ ನಡೆಯುತ್ತದೆ. ಪುಷ್ಕರ ಆರತಿ ಒಂದು ಸ್ವರ್ಗಸದೃಶ ಅನುಭವ.

ಅರ್ಧಚಂದ್ರಾಕೃತಿಯ ಪುಷ್ಕರ ಕೊಳದ ಸುತ್ತ ಬೆಳೆದಿದೆ ದೇವಾಲಯಗಳ ಪಟ್ಟಣ. ಕೊಳದ ಸುತ್ತ ಅಲ್ಲಲ್ಲಿ ನಿರ್ಮಾಣವಾಗಲಿರುವ 52 ಘಾಟ್ (ಸ್ನಾನದ ಕಟ್ಟೆಗಳು) ಇಲ್ಲಿನ ನೂರಾರು ದೇವಾಲಯಗಳನ್ನು ಒಂದಕ್ಕೊಂದು ಜೋಡಿಸುತ್ತವೆ.(ಈ ಘಾಟ್ ಗಳಲ್ಲಿ ಕನಿಷ್ಠ 15 ನ್ನು ರಾಷ್ಟ್ರೀಯ ಮಹತ್ತ್ವದ ಸ್ಮಾರಕಗಳು ಎಂದು ಘೋಷಿಸಲಾಗಿದೆ.)
ಪುಷ್ಕರ ಪಟ್ಟಣದ ಕೇಂದ್ರವೇ ಈ ಘಾಟ್ ಗಳು. ಇಲ್ಲಿ ಜನರು ನೀರಿಗಿಳಿದು, ಪವಿತ್ರ ಸ್ನಾನ ಮಾಡಿ ಇಹಪರದ ದೋಷಗಳನ್ನು ಕಳೆದುಕೊಳ್ಳುತ್ತಾರೆ. ಪ್ರವಾಸಿಗಳು ಈ ಘಾಟ್ ಗಳಲ್ಲಿ ತೀರ್ಥಸ್ನಾನ ಮಾಡಿದ ಬಳಿಕವೇ ಬ್ರಹ್ಮನ ದರ್ಶನ ಮಾಡುತ್ತಾರೆ.

ಪ್ರತಿಯೊಂದು ಘಾಟ್ ನ ನೀರಿಗೆ ಆದರದ್ದೇ ಆದ ಮಹತ್ತ್ವ. ಕೆಲವು ಘಾಟ್ ಗಳ ನೀರು ಪುತ್ರಪ್ರಾಪ್ತಿ ದಯಪಾಲಿಸಿದರೆ ಇನ್ನೂ ಕೆಲವು ಘಾಟ್ ಗಳ ನೀರು ಕುಷ್ಠ, ಹೃದಯವಿಕಾರ ಇತ್ಯಾದಿ ರೋಗಗಳನ್ನು ನಿವಾರಿಸುತ್ತವೆ. ದೇಹಕಾಂತಿಯನ್ನು ಹೆಚ್ಚಿಸುವ ಸೌಂದರ್ಯದ, ಜ್ಞಾನ, ಐಶ್ವರ್ಯ ಮುಂತಾದ ಭಾಗ್ಯ ಕೊಡುವ ಘಾಟ್ ಗಳೂ ಇವೆ.
ವಾರಾಣಾಸಿ ಮತ್ತಿತರ ಘಾಟ್ ಗಳಂತೆ ಇಲ್ಲಿನ ಘಾಟ್ ಗಳು ಕಲುಷಿತವಾಗಿಲ್ಲ. ಪುಷ್ಕರದ ನೀರು ಸದಾ ಶುಭ್ರ ಮತ್ತು ಅಕಲಂಕಿತವಾಗಿರುತ್ತದೆ. ಇಲ್ಲಿನ ಗಾಳಿಯಲ್ಲಿ ಮಲ್ಲಿಗೆ ಮತ್ತು ಗುಲಾಬಿ ಹೂಗಳ ಸ್ವಾದ ತೇಲುತ್ತಿರುತ್ತದೆ.

ಪುಷ್ಕರವನ್ನು ಮೇಳಗಳ ಊರು ಎಂದೇ ಕರೆಯಬಹುದು. ಇಲ್ಲಿ ವರ್ಷದ ಉದ್ದಕ್ಕೂ ಜಾತ್ರೆಗಳು, ಮೇಳದಗಳು ನಡೆಯುತ್ತಲೇ ಇರುತ್ತವೆ. ನಾಗೋರ್ ಮೇಳ, ತೇಜಾಜಿ ಮೇಳ ಮತ್ತು ನೀಲಿ ತಾವರೆ ಮೇಳ ಮುಂತಾದ ಹನ್ನೆರಡಕ್ಕೂ ಹೆಚ್ಚು ಮೇಳಗಳು ಇಲ್ಲಿ ಪ್ರತಿವರ್ಷ ನಡೆಯುತ್ತವೆ. ಒಂದೊಂದು ಮೇಳ ಏಳರಿಂದ ಹದಿನೈದು ದಿನಗಳ ಕಾಲ ನಡೆಯಬಹುದು.
ಪುಷ್ಕರದ ಜಾತ್ರೆಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಜನಪ್ರಿಯವಾಗಿರುವುದು ಪುಷ್ಕರ ಮೇಳ. ಧಾರ್ಮಿಕ ಮಹತ್ತ್ವದ ಜೊತೆಗೇ ವ್ಯಾಪಾರೀ ಆಕರ್ಷಣೆಗಳು, ವಿದೇಶಿಯರ ಕುತೂಹಲ ಸೇರಿ ಅದ್ಭುತವಾಗಿ ಬೆಳೆದಿರುವ ಮೇಳ ಇದು.

ಪುಷ್ಕರ ಸ್ನಾನ
ಪುಷ್ಕರಕ್ಕೆ ಹಿಂದೂಧರ್ಮಿಯರು ಸಾವಿರಾರು ವರ್ಷಗಳಿಂದ ಯಾತ್ರೆ ಬರುತ್ತಿದ್ದಾರೆ. ವರ್ಷದ ಯಾವ ದಿನವೂ ಇಲ್ಲಿ ಯಾತ್ರಿಗಳು ಸಂದಣಿ ತಪ್ಪಿದಲ್ಲ. ಇಲ್ಲಿ ಪ್ರತಿದಿನ ಐದಾರು ಸಾವಿರ ಯಾತ್ರಿಗಳು ಬ್ರಹ್ಮದೇವನ ದರ್ಶನಕ್ಕೆ ಬರುತ್ತಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಚಾರ್ ಧಾಮ್ ಯಾತ್ರೆಯ ಬಳಿಕ ಈ ತೀರ್ಥದಲ್ಲಿ ಮುಳುಗು ಹಾಕದಿದ್ದರೆ ತೀರ್ಥಯಾತ್ರೆ ಅಸಂಪೂರ್ಣವಾಗಿ ಉಳಿಯುತ್ತದೆ ಎಂಬ ನಂಬಿಕೆಯೇ ಯಾತ್ರಿಗಳ ಈ ನಿರಂತರ ಪ್ರವಾಹಕ್ಕೆ ಕಾರಣ.

ಪುಷ್ಕರದಲ್ಲಿ ಕಾರ್ತಿಕ ಪೌರ್ಣಮಿಯ ಯಾತ್ರೆಗೆ ಎಲ್ಲಕ್ಕಿಂತ ಹೆಚ್ಚು ಮಹತ್ತ್ವ. ಈ ಹುಣ್ಣಿಮೆಯ ರಾತ್ರಿ ಪುಷ್ಕರ ತೀರ್ಥದಲ್ಲಿ ಮುಳುಗು ಹಾಕಿದರೆ ಜನ್ಮಾಂತರಗಳ ಪಾಪಗಳು ತೊಳೆದುಹೋಗುತ್ತವೆ, ನೂರು ವರ್ಷಗಳ ಕಾಲ ಯಜ್ಞ ನಡೆಸಿದ ಪುಣ್ಯ ಸಿಗುತ್ತದೆ, ಈ ಪವಿತ್ರ ಸ್ನಾನದಿಂದ ಎಂದು ಆಸ್ತಿಕರ ನಂಬಿಕೆ.

ಕಾರ್ತಿಕ ಪೌರ್ಣಮಿಯ ಮೊದಲ ಸ್ನಾನದ ಹಕ್ಕು ಸಾಧುಗಳಿಗೆ. ಎಲ್ಲೆಲ್ಲಿಂದಲೋ ಬಂದು ಪುಷ್ಕರದ ಸುತ್ತ ಬೆಟ್ಟಗಳ ಮೇಲಿನ ಗುಹೆಗಳಲ್ಲಿ ಬೀಡು ಬಿಟ್ಟಿರುವ ಸಾವಿರಾರು ಬಾಬಾಗಳು ಮೈ ತುಂಬ ಭಸ್ಮ ಬಳಿದು, ಆ ಪವಿತ್ರ ಸ್ನಾನಕ್ಕಾಗಿ ಪುಷ್ಕರದ ಸುತ್ತ ತಯಾರಾಗಿರುತ್ತಾರೆ. ಅವರು ‘ಹರಹರ ಮಹಾದೇವ’ ಎನ್ನುತ್ತ ಕೆರೆಗೆ ಇಳಿದು ಸ್ನಾನ ಮುಗಿಸಿ ಎದ್ದ ಬಳಿಕವೇ ಯಾತ್ರಿಗಳು ಕೆರೆಗೆ ಇಳಿಯುತ್ತಾರೆ. ಈ ಸ್ನಾನ ಸೂರ್ಯೋದಯದ ತನಕ ನಡೆಯುತ್ತದೆ.

ರಾಜಸ್ತಾನದ ಅಲೆಮಾರಿ ಪಂಗಡಗಳ ಬಟ್ಟೆ ಬರೆಗಳು ವರ್ಣರಂಜಿತವಾಗಿ, ಆಕರ್ಷಕವಾಗಿರುತ್ತವೆ. ಇವರ ಗುಂಪುಗಳು ಪುಷ್ಕರದಲ್ಲಿ ಪವಿತ್ರ ಸ್ನಾನಕ್ಕೆ ಇಳಿದಾಗ ಕೆರೆಯಲ್ಲಿ ಬಣ್ಣಗಳ ಹಬ್ಬ ಕಾಣಬಹದು.

ಈ ರಾತ್ರಿ ಇಲ್ಲಿ ಕಾಲಿರಿಸಲು ಸಾಧ್ಯವಿಲ್ಲದಷ್ಟು ಗೌಜಿ. ಜನಸಂದಣಿಯ ನಡುವೆಯೇ ಜನರು ಮೂರು ಕೆರೆ (ಜ್ಯೇಷ್ಠ, ಮಧ್ಯ ಮತ್ತು ಕನಿಷ್ಠ ಪುಷ್ಕರ) ಗಳಿಗೆ ಪ್ರದಕ್ಷಿಣೆ ಹಾಕಿ ಬ್ರಹ್ಮದೇವಾಲಯ ತಲುಪುತ್ತಾರೆ.

ಪುಷ್ಕರದ ಕೆರೆಗಳ ಪಕ್ಕದಲ್ಲಿ ನಾಲ್ಕು ಬೆಟ್ಟಗಳಿವೆ. ಬ್ರಹ್ಮದೇವ ತನ್ನ ಯಜ್ಞಕ್ಕೆ ದುಷ್ಟ ದಾನವರಿಂದ ಆತಂಕ ಬರಬಾರದೆಂದು ಕಾವಲುಗಾರನಾಗಿ ನೇಮಿಸಿದ ಬೆಟ್ಟಗಳಿವು ಎನ್ನುತ್ತದೆ ಸ್ಥಳ ಪುರಾಣ. ಕೆರೆಗಳ ಪ್ರದಕ್ಷಿಣೆ ಜ್ಯೇಷ್ಠ ಪುಷ್ಕರದಿಂದ ಆರಂಭವಾಗಿ, ಇನ್ನೆರಡು ಕೆರೆಗಳನ್ನು ಸುತ್ತಿ, ಬೆಟ್ಟಗಳ ತಡಿಯಿಂದಾಗಿ ಸಾಗಿ ಬ್ರಹ್ಮ ದೇವಾಲಯವನ್ನು ತಲುಪುತ್ತದೆ. 16 ಕಿಲೋಮೀಟರ್ ಉದ್ದದ ಸುದೀರ್ಘ ಇದು!

ಶತಮಾನಕ್ಕೂ ಹಿಂದೆ, 1900ರ ಕಾಲದಲ್ಲೇ ಪುಷ್ಕರ ಮೇಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ ಎಂದು ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾದಲ್ಲಿ ದಾಖಲಾಗಿತ್ತು! ಇಂದು ಮೇಳದ ದಿನಗಳಲ್ಲಿ ಪ್ರತಿದಿನ ಕನಿಷ್ಠ ಮೂರು ಲಕ್ಷ ಜನರು ಪುಷ್ಕರಕ್ಕೆ ಆಗಮಿಸುತ್ತಾರೆ ಎಂದು ಅಂದಾಜು.

ಜಾತ್ರೆಯಾದ ಯಾತ್ರೆ!
ಆಧುನಿಕ ಕಾಲದಲ್ಲಿ ಪುಷ್ಕರ ಮೇಳ ದೇಶ-ವಿದೇಶಗಳಲ್ಲಿ ಜನಪ್ರಿಯವಾಗಿದೆ.ಧಾರ್ಮಿಕ ಉತ್ಸವದ ಜೊತೆಗೇ ಪ್ರವಾಸೀ ಆಕರ್ಷಣೆಗಳು ಸೇರಿಕೊಂಡರು ಭಾರೀ ದೊಡ್ಡದಾಗಿ ಬೆಳೆದಿರುವ ಹಬ್ಬ ಇದು.

ಅಕ್ಟೋಬರ್-ನವೆಂಬರ್ ನಡುವೆ ನಡೆಯುವ ಈ ಮೇಳ ಹಿಂದೆ ಮಾಸದ ಶುಕ್ಲ ಪಕ್ಷದಲ್ಲಿ ಏಕಾದಶಿಯಿಂದ ಹುಣ್ಣಿಮೆಯ ತನಕ ಐದು ದಿನಗಳ ಕಾಲ ನಡೆಯುತ್ತಿತ್ತು. ಆದರೆ ಕ್ರಮೇಣ ಇದು ನವಮಿಯಿಂದ ಆರಂಭವಾಗುವ ಏಳು ದಿನಗಳ ಹಬ್ಬವಾಯಿತು. ಆದರೆ ಇದಕ್ಕೂ ಏಳು ದಿನಗಳ ಹಿಂದೆ, ಅಂದರೆ ಪುಷ್ಕರ ಸ್ನಾನಕ್ಕೆ ಹದಿನೈದು ದಿನಗಳ ಹಿಂದೆಯೇ ವಿದೇಶೀ ಯಾತ್ರೆಗಳು ಇಲ್ಲಿಗೆ ಬಂದು ಇಳಿಯುತ್ತಾರೆ.

ಇಂದು ಪುಷ್ಕರ ಮೇಳದಲ್ಲಿ ಮೂರು ಭಾಗಗಳಿವೆ. ಮೂಲ ಭಾಗ ಧಾರ್ಮಿಕ ಉತ್ಸವ. ಇದು ನಡೆಯುವುದು ಕೊನೆಯ ಐದು ದಿನಗಳ ಕಾಲ, ಪ್ರಬೋಧಿನಿ ಏಕಾದಶಿಯಿಂದ ಪೌರ್ಣಮಿಯ ತನಕ ನಡೆಯುವ ಆಚರಣೆ ಇದು.

ಪುಷ್ಕರ ಮೇಳದ ಎರಡನೆಯ ಭಾಗ ಪ್ರಾಣಿಗಳ ವ್ಯಾಪಾರ. ಪುಷ್ಕರ ಮೇಳ ಆರಂಭವಾಗುವುದು ಒಂಟೆಗಳ ಮತ್ತು ಜಾನುವಾರುಗಳ ವ್ಯಾಪಾರೀ ಕೇಂದ್ರವಾಗಿ. ಮರುಭೂಮಿಯ ನಡುವೆ ರಾತ್ರಿ ಹಗಲೆನ್ನದೆ ನಡೆಯುವ ತೆರೆದ ಬಯಲಿನ ಮಾರುಕಟ್ಟೆ ಇದು.

ಪುಷ್ಕರ ಮೇಳದ ಮೂರನೇಯ ಭಾಗ ಜಾನಪದ ನೃತ್ಯ ಸಂಗೀತ ಮತ್ತು ಮನೋರಂಜನೆಯ ಚಟುವಟಿಕೆಗಳು. ಇಂದಿನ ಕಾಲದಲ್ಲಿ ಪ್ರವಾಸಿಗಳನ್ನು, ಅದರಲ್ಲೂ ವಿದೇಶೀ ಪ್ರವಾಸಿಗಳನ್ನು ಆಕರ್ಷಿಸುವುದು ಇದೇ.

ವ್ಯಾಪಾರಿಗಳು, ತೀರ್ಥಯಾತ್ರಿಗಳು, ಹಳ್ಳಿಗಳು, ಅಲೆಮಾರಿಗಳು, ವಿಶ್ವದ ಎಲ್ಲೆಡೆಗಳಿಂದ ಬಂದ ಪ್ರವಾಸಿಗಳು, ಸಂಗೀತಗಾರರು, ನರ್ತಕರು, ಡೊಂಬರು, ಹಾವಾಡಿಗರು…ಪುಷ್ಕರ ಮೇಳದ ನಡುವೆ ಇಲ್ಲಿ ಕಾಣಸಿಗದ ಮಾನವತೆಯೇ ಇಲ್ಲ!

LEAVE A REPLY

Please enter your comment!
Please enter your name here