ಏಕಶಿಲಾ ವಿಗ್ರಹ ಬಾಹುಬಲಿಯ ಮಹಾಮಸ್ತಕಾಭಿಷೇಕದ ವರ್ಣವೈಭವ ಅಪೂರ್ವ. ಕಣ್ಣಾರೆ ಕಂಡೇ ಈ ಅನನ್ಯ ದೃಶ್ಯಾವಳಿಯ ಸೌಂದರ್ಯವನ್ನು ಸವಿಯಬೇಕು. ಪವಿತ್ರ ನದಿಗಳ ಜಲಾಭಿಷೇಕದ ಪ್ರವಾಹವು ಜನತೆಗೆ ಶಾಂತಿ, ಸಂಪತ್ತು, ಸಂತಸ, ದೀರ್ಘಾಯುಷ್ಯ ನೀಡುವುದೆಂಬ ನಂಬಿಕೆ.
ಭಕ್ತರ ದೋಷ ನಿವಾರಣೆಗಾಗಿ ತಂಪಾದ ಮತ್ತು ಪರಿಶುದ್ಧವಾದ ಎಳನೀರು ಅಭಿಷೇಕ, ಕಬ್ಬಿನ ರಸದ ಅಭಿಷೇಕವಾಗುತ್ತಿದ್ದಂತೆ ಬಾಹುಬಲಿಯು ತುಷಾರ
ಸಿಂಚನಗೊಂಡ ಹಾಗಿನ ಮೂರ್ತಿ. ಕ್ಷೀರಾಭಿಷೇಕವಾಗುತ್ತಿದ್ದಂತೆ ಬಾಹುಬಲಿಯ ಧವಳದ ಮೂರ್ತಿ. ಅಕ್ಕಿಹಿಟ್ಟಿನ ಅಭಿಷೇಕವೆಂದರೆ ಭಕ್ತನು ತನ್ನ ಆತ್ಮಕ್ಕೆ ಅಂಟಿಕೊಂಡ ಕೊಳೆ ಎಂಬ ಜಿಗುಟನ್ನು ನಿವಾರಿಸಿಕೊಂಡು ಪರಿಶುದ್ಧನಾಗುವ ಸಂಕೇತ.
ಅರಸಿನದ ಅಭಿಷೇಕದಿಂದ ಬಾಹುಬಲಿಯು ಚಿನ್ನದಮೂರ್ತಿ. ಕಷಾಯಾಭಿಷೇಕದಿಂದ ಕಡು ಹವಳದ ಮೂರ್ತಿ. ಗಂಧ ಚಂದನಾಭಿಷೇಕದಿಂದ ಬಾಹುಬಲಿಯು ಮಾಣಿಕ್ಯದ ಮೂರ್ತಿ. ಗಂಧ ಚಂದನದ ಜತೆ ಏಲಕ್ಕಿ, ಲವಂಗ, ಪಚ್ಚೆ ಕರ್ಪೂರ, ಕುಂಕುಮ, ಕೇಸರಿ, ಅರಸಿರ, ಜಾಯಿಕಾಯಿ ಮುಂತಾದ ಸುಗಂಧ ದ್ರವ್ಯ ಬೆರೆತ್ತಿರುತ್ತದೆ.
ಮುಂದೆ ಕನಕಾಭಿಷೇಕ, ಪುಷ್ಪವೃಷ್ಟಿ, ಬಾಹುಬಲಿಯಷ್ಟೇ ಎತ್ತರದ ಹೂಮಾಲೆ ಅಲಂಕಾರ. ಬಾಹುಬಲಿಗೆ ಮಂಗಳಾರತಿಯಾಗುತ್ತಿದ್ದಂತೆಯೇ ಮುಗಿಲುಮುಟ್ಟುವ ಹಾಗೆ ಶ್ರೀ ಭಗವಾನ್ ಬಾಹುಬಲೀ ಕೀ ಜೈ ಎಂಬ ಉದ್ಘೋಷ. ಅಭಿಷೇಕದ ಸಂಭ್ರಮವನ್ನು ಸಾಂಕೇತಿಸುವ ಹಾಗೆ ಭಕ್ತಾಭಿಮಾನಿಗಳಿಂದ ಆನಂಧ ನರ್ತನ.