Home ಧಾರ್ಮಿಕ ಕಾರ್ಯಕ್ರಮ ಪರಕ್ಕಿಲ ಅಷ್ಟಬಂಧ ಬ್ರಹ್ಮಕಲಶ

ಪರಕ್ಕಿಲ ಅಷ್ಟಬಂಧ ಬ್ರಹ್ಮಕಲಶ

ನಾಡಿಗೆ ಸಡಗರ -ಸಂಭ್ರಮ

455
0
SHARE

ಮಧೂರು: ಪರಮ ಕಾರಣಿಕ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ ಫೆ.19 ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಫೆ.14ರಿಂದ ವಿಧಿವಿಧಾನಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಾರಂಭವಾಗಿದ್ದು ಆಸ್ತಿಕ ಶ್ರದ್ಧಾಳುಗಳಲ್ಲಿ ಭಕ್ತಿಭಾವ ಉದ್ದೀಪನಗೊಳಿಸುತ್ತಿದ್ದು ನಾಡಿಗೆ ಸಡಗರ ಮತ್ತು ಸಂಭ್ರಮವನ್ನು ತಂದಿದೆ.

ಹಸಿರು ಸಿರಿಯ ಮಧ್ಯೆ ನಯನ ಮನೋಹರವಾದ ದೃಶ್ಯಸಾನಿಧ್ಯದಲ್ಲಿ ಪ್ರಕೃತಿ ಮಾನವನ ಅನುಸಂಧಾನದ ನೆಲೆಯಾಗಿ ಕಂಗೊಳಿಸುತ್ತಿರುವ ಮಹಾದೇವ, ಶಾಸ್ತಾವು, ವಿನಾಯಕನ ಆಲಯವು ಭಕ್ತರ ಅಭಯ ಕೇಂದ್ರವಾಗಿದೆ. ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳ ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ಪ್ರತಿದಿನವೂ ಹೊರೆಕಾಣಿಕೆ ಮೆರವಣಿಗೆಯಲ್ಲಿ ತಲುಪುತ್ತಿದ್ದು ದೇವಸ್ಥಾನದ ತೆಂಕು ಬದಿಯಲ್ಲಿ ವ್ಯವಸ್ಥೆಗೊಳಿಸಿದ ಉಗ್ರಾಣವು ಜೀನಸು, ತರಕಾರಿ, ಹಣ್ಣು ಹಂಪಲುಗಳಿಂದ ತುಂಬಿ ತುಳುಕುತ್ತಿದೆ. ದಿನಂಪ್ರತಿ ಸಾವಿರಾರು ಮಂದಿ ಸನ್ನಿಧಾನದಲ್ಲಿ ಸಂಕಲ್ಪ ಸೇವೆ ಮಾಡಿ ಅನ್ನಪ್ರಸಾದವನ್ನು ಸ್ವೀಕರಿಸಿ ಧನ್ಯತಾಭಾವದಿಂದ ಮರಳುತ್ತಿದ್ದಾರೆ.

ದೇವಸ್ಥಾನದ ಆಡಳಿತ ಮೊಕ್ತೇಸರ ಬ್ರಹ್ಮಕಲಶೋತ್ಸವ ಸಮಿತಿಯ ರಕ್ಷಾಧಿಕಾರಿ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಸಮರ್ಥ ಮಾರ್ಗದರ್ಶನದಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ನಡೆದಿದ್ದು ಸ್ಥಳೀಯ ಯುವಕರು ಮತ್ತು ಆಸ್ತಿಕ ಶ್ರದ್ಧಾಳುಗಳು ಶ್ರಮದಾನದ ಮೂಲಕ ನಡೆಸಿದ ಕಾಮಗಾರಿ ಬೆಡಗಿನೊಳಗೆ ಬೆರಗು ಮೂಡಿಸುತ್ತಿದೆ. ಮುಂಭಾಗದ ವಿಶಾಲವಾದ ಕೆರೆ ಅತ್ಯಾಕರ್ಷಕವಾಗಿದೆ. ಪ್ರಧಾನ ಸಮಿತಿಯ ಜೊತೆ ಉಪಸಮಿತಿ ಮಹಿಳಾ ಸಮಿತಿಗಳು ಉತ್ಸವದ ಯಶಸ್ವಿಗೆ ಪೂರ್ಣ ಸಹಕಾರ ನೀಡುತ್ತಿದೆ.

ಫೆ.19 ರಂದು ಬೆಳಗ್ಗೆ 8.37ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ದಿವ್ಯಹಸ್ತದಿಂದ ಶ್ರೀ ಮಹಾದೇವರಿಗೆ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಹಾಗೂ ಉಪದೇವರಿಗೆ ಕಲಶಾಭಿಷೇಕ ನಡೆಯಲಿದೆ. ಒಂದು ಕಾಲದಲ್ಲಿ ಪೂರ್ಣ ಶಿಥಿಲವಾಗಿದ್ದ ಶ್ರೀ ಕ್ಷೇತ್ರವು ಹಂತಹಂತವಾಗಿ ನವೀಕರಣಗೊಂಡು 2000 ಇಸವಿಯಲ್ಲಿ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ಅದೇ ರೀತಿಯ ಉತ್ಸವದಲ್ಲಿ ಪುನ: ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವ ಸೌಭಾಗ್ಯ ಭಕ್ತಮಹಾಜನರಿಗೆ ಪ್ರಾಪ್ತವಾಗಿದೆ.

ಫೆ.17 ರಂದು ಬೆಳಗ್ಗೆ ಗಣಪತಿ ಹವನ, ತತ್ವ ಹೋಮ, ತತ್ವ ಕಲಶ, ಮಂಟಪ ಸಂಸ್ಕಾರ, ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಧೂರು ಅವರಿಂದ ಭಜನೆ, ಚೇನಕ್ಕೋಡು ಶ್ರೀ ರಕ್ತೇಶ್ವರಿ ಭಜನಾ ಸಂಘದಿಂದ ಭಜನೆ, ಶ್ರಾವಣಕೆರೆ ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಭಜನಾ ಸಂಘದಿಂದ ಭಜನೆ, ಮಧ್ಯಾಹ್ನ ಅಂಕುರ ಪೂಜೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ರಾಗಸುಧಾ ಮಧೂರು ಅವರಿಂದ ಭಜನಾಮೃತಂ, ಮಧೂರು ಬೊಡ್ಡಜ್ಜ ಯಕ್ಷಭಾರತಿ ತಂಡದಿಂದ ಯಕ್ಷಗಾನ ಕೂಟ, ಸಂಜೆ ಶಿರಿಬಾಗಿಲು ಪುಳ್ಕೂರು ಶ್ರೀ ಮಹಾದೇವ ಭಜನಾ ಸಂಘ ದಿಂದ ಭಜನೆ, ಮಲಯಾಳ ನಾಟಕ, ರಾತ್ರಿ ಉಳಿಯತ್ತ್ಡ ಆದರ್ಶ ಯುವಕ ಸಂಘದಿಂದ ‌ ನೃತ್ಯ ವೈಭವ, ರಾತ್ರಿ ಅಂಕುರ ಪೂಜೆ, ರಾತ್ರಿ ಪೂಜೆ ಜರಗಿತು.

LEAVE A REPLY

Please enter your comment!
Please enter your name here