Home ನಂಬಿಕೆ ಸುತ್ತಮುತ್ತ ಪಂಚಭೂತಗಳಾವುವು? ಯಾಕೆ?

ಪಂಚಭೂತಗಳಾವುವು? ಯಾಕೆ?

4615
0
SHARE

ನಮ್ಮಲ್ಲಿ ಪಂಚ ಎಂಬುದಕ್ಕೆ ಮಹತ್ತ್ವವಿದೆ. ಈ ಭೂಮಿ ಎಂಬುದು ಪಂಚಭೂತಗಳಿಂದ ಕೂಡಿರುವುದೇ ಇದಕ್ಕೆ ಮೂಲಕಾರಣ. ಪೂಜೆ ಪುನಸ್ಕಾರಗಳಲ್ಲಿ ಪಂಚಾಯತನ ಪೂಜೆ, ಪಂಚಾಮೃತ, ಪಂಚಗವ್ಯ, ಪಂಚಕಜ್ಜಾಯ, ಪಂಚಾಂಗ ಮೊದಲಾದ ಪದಗಳನ್ನೂ ಅವುಗಳ ವಿಶೇಷತೆಗಳನ್ನೂ ನಾವು ತಿಳಿದಿರುತ್ತೇವೆ. ಈ ಪಂಚಭೂತಗಳೆಂದರೆ ಆಕಾಶ, ಭೂಮಿ, ಅಗ್ನಿ, ಜಲ ಮತ್ತು ವಾಯು. ಈ ಐದು ಮೂಲಭೂತಗಳಿಂದಾಗಿಯೇ ಜಗತ್ತಿನ ಸೃಷ್ಟಿಯಾಗಿದೆ. ಪ್ರಕೃತಿಯೆಂದು ಕರೆಯಲ್ಪಡುವ ಪರಿಸರದ ಮೂಲವೂ ಇವುಗಳೇ ಆಗಿವೆ. ಈ ಸೃಷ್ಟಿ ಆಗುಹೋಗುಗಳಿಗೆಲ್ಲ ಕಾರಣವೇ ಈ ಪಂಚಭೂತಗಳು. ಪಂಚಭೂತಗಳಿಲ್ಲದೆ ಯಾವುದೇ ಜೀವಿಯೂ ಹುಟ್ಟದು; ನಿರ್ಜೀವಿಯೂ ಹುಟ್ಟದು.

ಈ ವಿಶ್ವಕ್ಕೆ ಪ್ರಪಂಚ ಎಂಬ ಹೆಸರಿಗೂ ಈ ಪಂಚಭೂತಗಳಿಗೂ ಸಂಬಂಧವಿದೆ. ಇಲ್ಲಿ ಪ್ರ ಎಂಬ ಪದ ಪ್ರಸವ ಸೂಚಕ. ಪ್ರಸವ ಎಂದರೆ ಜನನ ಅಥವಾ ಹುಟ್ಟು ಎಂದರ್ಥ. ಪಂಚ ಎಂಬುದು ಪಂಚಭೂತಗಳನ್ನು ಸೂಚಿಸುತ್ತದೆ. ಹಾಗಾಗಿಯೇ ನಾವು ವಾಸಿಸುವ ಪ್ರದೇಶ ಪ್ರಪಂಚ ಎಂದೂ ಕರೆಯಲ್ಪಡುತ್ತದೆ. ಈ ಪಂಚಭೂತಗಳಲ್ಲದೆ ಜೀವಿಯು ಜೀವಿಸಲು ಸಾಧ್ಯವೇ ಇಲ್ಲ.

೧.ಆಕಾಶ: ಆಕಾಶ ಎಂಬುದು ಅವಕಾಶ. ಈ ಅವಕಾಶದಲ್ಲಿಯೆ ಪ್ರತಿ ಜೀವಿಗಳಿಗೆ, ನಿರ್ಜಿವಿಗಳಿಗೆ ಉಳಿದುಕೊಳ್ಳಲು ಅವಕಾಶವಿದೆ. ಅವಕಾಶ ಎಂಬುದು ಇಲ್ಲಿ ಕೇವಲ ಸ್ಥಳ ಎಂದರ್ಥವಲ್ಲ. ಹುಟ್ಟು, ಬದುಕು ಮತ್ತು ಸಾವಿಗೆ ಯೋಗ್ಯವಾದ ವಾತಾವರಣ ಅಥವಾ ಸ್ಥಿತಿಗತಿ ಎಂದರ್ಥ. ನಾವು ತಿಳಿದಿರುವಂತೆ ಆಕಾಶದಲ್ಲಿನ ವೈಚಿತ್ರ್ಯಗಳಿಂದಾಗಿಯೇ ನಾವು ಬದುಕುತ್ತಿದ್ದೇವೆ. ಜಗಬೆಳಗುವ ಸೂರ್ಯ ನಿಂತ ಸ್ಥಳ ಆಕಾಶ, ಮೋಡ ಮಳೆಯಾಗುವ ಸ್ಥಳ ಆಕಾಶ, ಅಷ್ಟೇ ಅಲ್ಲದೆ ಆಧುನಿಕ ಜೀವನದ ವಿದ್ಯಮಾನಗಳೆಲ್ಲವೂ ಬಹುವಾಗಿ ಈ ಅವಕಾಶ ಅಥವಾ ಆಕಾಶವನ್ನೇ ಅವಲಂಬಿಸಿದೆ.

೨. ಭೂಮಿ ಅಥವಾ ಪೃಥ್ವಿ: ನಾವು ಕಲ್ಲು ಮಣ್ಣುಗಳಿಂದ ಕೂಡಿದ ಸ್ಥಳವನ್ನು ಭೂಮಿ ಎಂದು ಕರೆಯುತ್ತೇವೆ. ಪ್ರತಿ ಜೀವಿಗೂ ಇದು ಆಧಾರ ಭೂತವಾಗಿದ್ದು, ಈ ಅಂಶವು ಎಲ್ಲಾ ಪ್ರಾಣಿಗಳಲ್ಲೂ ಅಡಕವಾಗಿದೆ. ಇದನ್ನು ಪೃಥ್ವಿ ಎಂದೂ ಕರೆಯುತ್ತೇವೆ. ಇದರ ಹಿಂದೊಂದು ದಂತ ಕಥೆಯಿದೆ. ಪೀನ ಎಂಬ ಮಹಾನಾಸ್ತಿಕ ರಾಜನ ಕಾರಣದಿಂದಾಗಿ ಬುವಿಯಲ್ಲಿ ಬಿತ್ತಿದ ಬೀಜವನ್ನೆಲ್ಲ ಬುವಿಯು ನುಂಗಿ ಬಿಡುತ್ತಿತ್ತು ಮತ್ತು ಭೂಮಿಯಿಂದ ಯಾವ ಸಂಪತ್ತೂ ದೊರೆಯುತ್ತಿರಲಿಲ್ಲ. ಇದರಿಂದ ನೊಂದ ಜನತೆ ಆ ರಾಜನ ಶರೀರವನ್ನು ಮಥನ ಮಾಡಿ ಪೃಥು ಎಂಬವನನ್ನು ಸೃಷ್ಟಿಸಿದರು. ಆ ಪೃಥುವು ಪ್ರಜೆಗಳ ಕಷ್ಟಕ್ಕೆ ಮರುಗಿ ಭೂಮಿಯಿಂದ ಸಂಪತ್ತನ್ನು ಕೊಡಿಸಿದ. ಅಂದಿನಿಂದ ಭೂಮಿಯನ್ನು ಪೃಥುವಿನ ಮಗಳು ಎಂಬಂರ್ಥದಲ್ಲಿ ಪೃಥ್ವಿ ಎಂದು ಕರೆಯಲಾಯಿತು. ರೂಪ, ರಸ, ಶಬ್ದ, ಗಂಧ ಮತ್ತು ಸ್ಪರ್ಶ ಎಲ್ಲವನ್ನೂ ಒಳಗೊಂಡಿರುವ ಭೂಮಿಯು ಚರಾಚರ ಜೀವಿಗಳ ಸೃಷ್ಟಿಯ ಒಂದಂಶ.

೩. ಅಗ್ನಿ : ಅಗ್ನಿ ಎಂದರೆ ತೇಜಸ್ಸು. ತೇಜೋವಾ ಅಗ್ನಿಃ ಎನ್ನಲಾಗಿದೆ. ಆಗ್ನೆಯ ದಿಕ್ಕಿಗೆ ಒಡೆಯ ಅಗ್ನಿದೇವ. ಪ್ರತಿ ಜೀವಿಯ ದೇಹದಲ್ಲಿ ಅಗ್ನಿಯ ಅಂಶವಿದೆ. ಮಾನವರಲ್ಲಿ ಚಕ್ಷುರ್ ಇಂದ್ರಿಯ ಮತ್ತು ಜಠರದಲ್ಲಿ ಅಗ್ನಿಯ ಅಂಶವನ್ನ ಗುರುತಿಸಲಾಗಿದೆ. ಅಗ್ನಿಯ ಮೂರ್ತಸ್ವರೂಪವಾಗಿ ಸೂರ್ಯನನ್ನು ಹೇಳಲಾಗುತ್ತದೆ. ಸೂರ್ಯನ ಬೆಳಕಿಲ್ಲದೆ ಪ್ರಕೃತಿ ಉಳಿಯುವುದಿಲ್ಲ. ಅಗ್ನಿ ಎಂಬುದು ಶುದ್ಧವಾಗಲು ಇರುವ ಮಾರ್ಗವೂ ಹೌದು. ಅಗ್ನಿಯ ಮೂಲಕವೇ ದೇವರಿಗೆ ಹವಿಸ್ಸನ್ನು ಸಮರ್ಪಿಸುತ್ತೇವೆ. ದೇವರ ಮತ್ತು ಮನುಷ್ಯರ ನಡುವೆ ತಂತುವಾಗಿರುವುದೇ ಅಗ್ನಿಭೂತ. ಇನ್ನು ಮನುಷ್ಯನ ಜೀವನಕ್ಕೆ ಅಗ್ನಿಯ ಅಗತ್ಯ ಎಷ್ಟರ ಮಟ್ಟಿಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

೪. ಜಲ : ಅಪ್ ಎಂದೂ ಕರೆಯಲ್ಪಡುವ ಪಂಚಭೂತಗಳಲ್ಲಿ ಒಂದಾದ ಜಲ ಸಕಲ ಜೀವಿಗಳಿಗೆ ಅತ್ಯಗತ್ಯ. ದೇಹದಲ್ಲಿ ಹರಿಯುವ ರಕ್ತ ಈ ಜಲಾಂಶ. ಪ್ರಾಣಿಗಳ ರಸನೇಂದ್ರಿಯ ವೇದ್ಯ. ಪಶ್ಚಿಮಾಧಿಪತಿಯಾದ ವರುಣ ಇದಕ್ಕೆ ಒಡೆಯ. ಸಕಾಲದಲ್ಲಿ ಮಳೆಗೆ ಕಾರಣವಾಗುವ ಅಂಶಗಳೂ, ಮುಕ್ಕಾಲು ಭಾಗ ಭೂಮಿಯನ್ನು ಆವರಿಸಿರುವ ಜಲ ಭೂ ಸಂಪತ್ತಿನ ರಕ್ಷಕವಾಗಿದೆ ಮತ್ತು ಪ್ರಕೃತಿಯಲ್ಲಿ ಎಲ್ಲಾ ಜೀವಿಗಳೂ ಆಶ್ರಯಿಸಿರುವ ಮೂಲಾಗತ್ಯತೆಗಳಲ್ಲಿ ಒಂದು ಮುಖ್ಯ ಅಂಶ ಈ ಜಲಭೂತ. ನೀರಲ್ಲದೆ ಯಾವ ಜೀವಿಯೂ ಬದುಕಲಾಗದು.

೫. ವಾಯು:
ಕಣ್ಣಿಗೆ ಕಾಣದ ಆದರೆ ಸ್ಪರ್ಶವೇದ್ಯವಾಗಿರುವ ವಾಯುವು ಪ್ರಕೃತಿಯ ಪರಿಪೂರ್ಣತೆಗೆ ಬೇಕೇಬೇಕು. ಇದರಲ್ಲಿ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎಂಬ ಐದು ಬಗೆಗಳಿವೆ. ಜೀವಿಸಂಕುಲದ ಉಸಿರಾಟಕ್ಕೆ ಬೇಕಾಗುವ ವಾಯು ನಮ್ಮ ಇಡೀ ದೇಹವನ್ನು ಆವರಿಸಿರುವ ಅಂಶವಾಗಿದೆ. ವಾಯುವಿನ ಶಕ್ತಿ ಏನೆಂಬುದು ಪೌರಾಣಿಕವಾಗಿಯೂ ವೈಜ್ಞಾನಿಕವಾಗಿಯೂ ನಾವು ತಿಳಿದೇ ಇದ್ದೇವೆ. ವಾಯುವಿಲ್ಲದ ಕ್ಷಣದಿಂದ ಉಸಿರಾಡುವ ಪ್ರತಿಜೀವಿಯೂ ಇನ್ನಿಲ್ಲವಾಗುತ್ತದೆ. ಪಂಚಭೂತಗಳು ಹುಟ್ಟು ಆ ಬಳಿಕ ಬದುಕಿಗೆ ಅತೀ ಅಗತ್ಯವಾದುವು. ನಮ್ಮ ದೇಹವೇ ಇವುಗಳಿಂದಾಗಿದೆ. ಹಾಗಾಗಿ ಇವನ್ನು ಪೂಜಿಸುವುದಷ್ಟೇ ಅಲ್ಲದೆ ಶುದ್ಧವಾಗಿಡಬೇಕಾದ ಅಗತ್ಯವಿದೆ.

ದೇವರು ಎಂಬ ಪದ ಸೂಕ್ಷ್ಮವಾದದ್ದು. ಎಲ್ಲಿ ದೇವರನ್ನು ಕಾಣುತ್ತೇವೆಯೋ ಅಲ್ಲಿ ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆ ಇರಬೇಕು. ಪಂಚಭೂತಗಳನ್ನು ಪೂಜಿಸುವುದೆಂದರೆ ಅವನ್ನು ಹಾಳುಮಾಡದೇ ಇರುವಂತಹದ್ದಾಗಿದೆ. ಅಶಾಶ್ವತವಾದ ಬದುಕಿನಲ್ಲಿ ಬದುಕನ್ನು ಕೊಡುತ್ತಿರುವ ಪಂಚಭೂತಗಳನ್ನು ಪೂಜಿಸುವುದನ್ನು ಬಿಟ್ಟು ಹಾಳು ಮಾಡುವ ಹಕ್ಕನ್ನು ನಮಗೆ ಯಾರೂ ಕೊಟ್ಟಿಲ್ಲ! ಸಾವು ಬಂದಾಗಲೂ ಶರೀರ ಕೊಳೆಯುವ ಮುನ್ನ ದಹನಕ್ಕೋ ದಪನಕ್ಕೋ ಪಂಚಭೂತಗಳನ್ನೇ ಅವಲಂಬಿಸಬೇಕು. ಹುಟ್ಟು ಮತ್ತು ಅಂತ್ಯದ ನಡುವೆ ನಮಗೆ ಮೂಲಭೂತವಾಗಿರುವುದೇ ಈ ಪಂಚಭೂತಗಳು. ಸತ್ತು ಮಣ್ಣಾದಾಗ ಲೀನವಾಗುವುದು ಪಂಚಭೂತಗಳಲ್ಲೇ.

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here