ಉಡುಪಿ: ಭಾವಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪುರಪ್ರವೇಶವು ಕಿನ್ನಿಮೂಲ್ಕಿಯ ಜೋಡುಕಟ್ಟೆಯಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರಿತು. ಶ್ರೀಗಳು ಜೋಡುಕಟ್ಟೆಯಲ್ಲಿ ದೇವರಿಗೆ ಪೂಜೆಯನ್ನು ನೆರವೇರಿಸಿ ಗಣ್ಯರ ಸಮ್ಮುಖ ಮೆರವಣಿಗೆಯನ್ನು ವೀಕ್ಷಿಸಿದರು. ಆನಂತರ ದೇವರ ಚಿನ್ನದ ಪಲ್ಲಕಿಯು ಮುಂದೆ ಸಾಗಿದ್ದು, ಅದರ ಹಿಂದೆ ವಿಶೇಷ ಸಿಂಗಾರದ ರಥದಲ್ಲಿ ಶ್ರೀಗಳನ್ನು ಕುಳ್ಳಿರಿಸಿ ಶ್ರೀಕೃಷ್ಣ ಮಠದತ್ತ ಕರೆದೊಯ್ಯಲಾಯಿತು.
ವಿವಿಧೆಡೆಗಳ ಆಕರ್ಷಕ ಕಲಾ ತಂಡಗಳು ಜೋಡುಕಟ್ಟೆಯಿಂದ ಮೆರವಣಿಗೆ ಪ್ರಾರಂಭವಾಗಿ ಡಯಾನ ಸರ್ಕಲ್, ಕೆ.ಎಂ. ಮಾರ್ಗ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ಸಾಗಿತು. ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಸುಮಾರು 3,000ಕ್ಕೂ ಅಧಿಕ ಮಂದಿ ಕಲಾವಿದರ ಕಲಾ ಪ್ರೌಢಿಮೆ ಮೆರವಣಿಗೆಯಲ್ಲಿ ಪ್ರಸ್ತುತಗೊಂಡಿತು. ಸರಿಸುಮಾರು 75 ಕಲಾ ತಂಡಗಳ ಕಲಾಪ್ರಕಾರಗಳು ಪ್ರದರ್ಶನಗೊಂಡಿತು. ತುಳುನಾಡಿನ ಅನೇಕ ಕಲಾವಿದರು ಸೇರಿದಂತೆ ದೇಶದ ಮೂಲೆಮೂಲೆಯ ಕಲಾತಂಡಗಳು ಹಾಗೂ ಮಣಿಪುರ, ಶ್ರೀಲಂಕಾದ ಕಲಾವಿದರೂ ಭಾಗವಹಿಸಿದ್ದರು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಯ ಡಾ| ಎಂ. ಮೋಹನ್ ಆಳ್ವ ಅವರು ಸ್ವತಃ ಉಪಸ್ಥಿತರಿದ್ದು, ಮೆರವಣಿಗೆಯ ಉಸ್ತುವಾರಿಯ ನೇತೃತ್ವ ವಹಿಸಿದ್ದರು.
ಪ್ರದರ್ಶನಗೊಂಡ ಕಲಾಪ್ರಕಾರ
ಕಿಂಗ್ಕೋಂಗ್, ಪೂತನಿ ,ಶ್ರೀಲಂಕಾದ ಮುಖವಾಡ, ನಂದಿಧ್ವಜ, ಮಠದ ಬಿರುದಾವಳಿ, ಚೆಂಡೆ ಕೊಂಬು ಶಂಖವಾದನ, ಭಜನೆ, ನಾದಸ್ವರ ತಂಡ, ಶೃಂಗಾರಿ ಮೇಳ, ತಟ್ಟಿರಾಯ, ದುಡಿ ಕುಣಿತ, ಗೊರವರ, ಸೋಮ, ವೀರಭದ್ರನ ಕುಣಿತ, ಶಿಲ್ಪಗೊಂಬೆ ಬಳಗ, ಚಿಲಿಪಿಲಿ ಗೊಂಬೆ, ಹುಲಿ ವೇಷ ಕುಣಿತ, ಮಹಿಳಾ ಚೆಂಡೆ, ಮರಗಾಲು, ಅರ್ಧನಾರೀಶ್ವರ, ಬೆಂಡರ ಕುಣಿತ, ಪಂಚ ವಾದ್ಯ, ತೆಯ್ಯಮ್, ನಗಾರಿ, ಜಗ್ಗಳಿಕೆ ಮೇಳ, ಕೋಳಿಗಳು, ಗೂಳಿ, ಸ್ಕೇಟಿಂಗ್, ಕಥಕ್ಕಳಿ, ಸೃಷ್ಟಿ ಗೊಂಬೆ ಬಳಗ, ಹೊನ್ನಾವರ ಬ್ಯಾಂಡ್, ತುಳುನಾಡ ವಾದ್ಯ, ಪೂರ್ಣಕುಂಭ, ವೇದಘೋಷಗಳು ಮೊದಲಾದ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಮೇಳೈಸಿದವು.
ರಸ್ತೆಯಂಚಲ್ಲಿ ಜನಸಮೂಹ
ಕಿನ್ನಿಮೂಲ್ಕಿಯಿಂದ ಶ್ರೀಕೃಷ್ಣ ಮಠದವರೆಗೆ ಮೆರವಣಿಗೆ ಸಾಗಿದ ವೇಳೆ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ರಸ್ತೆಯ ಎರಡೂ ಅಂಚಲ್ಲಿ ಶಾಲಾ ಮಕ್ಕಳು, ಮಹಿಳೆಯರ ಸಹಿತ ಸರ್ವ ಜನರು ಸೇರಿದ್ದರು.
ಮಜ್ಜಿಗೆ ವಿತರಣೆ
ಕೋರ್ಟ್ ಆವರಣದ ಮುಂಭಾಗದಲ್ಲಿ ಮುಸ್ಲಿಂರು ಹಾಗೂ ಅಲಂಕಾರ್ ಚಿತ್ರಮಂದಿರದ ಸಮೀಪ ಲಯನ್ಸ್ ಸಂಸ್ಥೆಯವರಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಮಜ್ಜಿಗೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಪೌರಾಯುಕ್ತ ಮಂಜುನಾಥಯ್ಯ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಗಣ್ಯರಾದ ಮನೋಹರ್ ಎಸ್. ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಡಾ| ಎಂ.ಬಿ. ಪುರಾಣಿಕ್, ಯಶಪಾಲ್ ಎ. ಸುವರ್ಣ, ಪಿ. ಕಿಶನ್ ಹೆಗ್ಡೆ, ತಿಂಗಳೆ ವಿಕ್ರಮಮಾರ್ಜುನ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಡಯಾನ ವಿಟuಲ ಪೈ, ಭುವನೇಂದ್ರ ಕಿದಿಯೂರು, ತಲ್ಲೂರು ಶಿವರಾಮ ಶೆಟ್ಟಿ, ವಿಲಾಸ್ ನಾಯಕ್, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಇಂದ್ರಾಳಿ ಜಯಕರ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಸ್ಥಳದಲ್ಲೇ ಪೇಟಾ ತಯಾರಿ..!
ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಜೋಡುಕಟ್ಟೆಯಲ್ಲಿ ಮಹಾರಾಷ್ಟ್ರ ಶೈಲಿಯ ಪೇಟಾವನ್ನು ತೊಡಿಸಲಾಗುತ್ತಿತ್ತು. ಇದು ರೆಡಿಮೇಡ್ ಅಲ್ಲ ಜೋಡುಕಟ್ಟೆಯಲ್ಲಿ ಬಟ್ಟೆಯನ್ನು ತಲೆಗೆ ಸುತ್ತಿ ಹಾಕಿ ಪೇಟಾದ ರೀತಿ ಮಾಡಿ ಕಟ್ಟುತ್ತಿರುವ ದೃಶ್ಯ ಕಂಡುಬಂದಿತ್ತು. ಮಹಿಳೆಯರು ಸಹ ಪೇಟಾದತ್ತ ಆಕರ್ಷಿತರಾಗಿ ತಾವೂ ತಲೆಗೆ ಪೇಟಾ ಹಾಕಿದ್ದ ದೃಶ್ಯವೂ ಕಂಡುಬಂತು.
ನಾಗರಿಕರಿಂದ ಅಭಿನಂದನೆ
ಅದಮಾರಿನಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಅಪರಾಹ್ನ 4 ಗಂಟೆಯ ಸುಮಾರಿಗೆ ಜೋಡುಕಟ್ಟೆಗೆ ಆಗಮಿಸಿದ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ಅದಕ್ಕೂ ಮೊದಲು ಬೈಕ್ ಹಾಗೂ ವಿವಿಧ ವಾಹನಗಳ ರ್ಯಾಲಿ ಬಂದಿತ್ತು. ಅಭಿಮಾನಿಗಳು, ನಾಗರಿಕರಿಂದ ಅಭಿನಂದನೆ ನಡೆಯಿತು. ಎರ್ಮಾಳು, ಉಚ್ಚಿಲ, ಪಾಂಗಳ, ಕಾಪು, ಕಟಪಾಡಿ, ಉದ್ಯಾವರ ಮೊದಲಾದ ಸ್ಥಳಗಳಲ್ಲಿ ಶ್ರೀಪಾದರನ್ನು ಸ್ವಾಗತಿಸಿ ಮಾಲಾರ್ಪಣೆ ಮಾಡಲಾಯಿತು.
ಚಿತ್ರ: ಆಸ್ಟ್ರೋ ಮೋಹನ್