Home ಧಾರ್ಮಿಕ ಸುದ್ದಿ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾರಾಜೇಶ್ವರ ತೀರ್ಥರು ನಿಯೋಜನೆ

ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾರಾಜೇಶ್ವರ ತೀರ್ಥರು ನಿಯೋಜನೆ

1678
0
SHARE

ಉಡುಪಿ : ಶುಕ್ರವಾರ ಸನ್ಯಾಸಾಶ್ರಮ ಸ್ವೀಕರಿಸಿದ ಕಂಬಳಕಟ್ಟದ ಶೈಲೇಶ್‌ ಉಪಾಧ್ಯಾಯರು ರವಿವಾರ ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜನೆಗೊಂಡರು. 30ನೆಯ ಪೀಠಾಧಿಪತಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು 31ನೆಯ ಪೀಠಾಧಿಪತಿಯವರನ್ನು ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಎಂದು ಪ್ರಕಟಿಸಿದರು.

ಮಧ್ಯಾಹ್ನ 12.20 ಗಂಟೆ ಅಭಿಜಿನ್‌ ಮುಹೂರ್ತದಲ್ಲಿ ಸರ್ವಜ್ಞ ಪೀಠದಲ್ಲಿ ಕುಳಿತು ಶ್ರೀವಿದ್ಯಾಧೀಶತೀರ್ಥರು ಶಿಷ್ಯನಿಗೆ ಪಟ್ಟಾಭಿಷೇಕ ನಡೆಸಿದರು. ತಮ್ಮ ಉಪಾಸ್ಯಮೂರ್ತಿಗಳಾದ ವೇದವ್ಯಾಸರು, ಶ್ರೀಕೃಷ್ಣ, ವಿಶ್ವಂಭರ ಸಾಲಿಗ್ರಾಮವನ್ನು ಹರಿವಾಣದಲ್ಲಿಟ್ಟು ಅದನ್ನು ಶಿಷ್ಯನ ಶಿರದ ಮೇಲಿರಿಸಿ ಅಭಿಷೇಕ ಮಾಡಿದರು. ಈ ನೀರು ಶಿಷ್ಯನ ದೇಹವನ್ನು ಒದ್ದೆಯಾಗಿಸಿತು.

ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಆಶ್ರಮ ಜ್ಯೇಷ್ಠ ಯತಿಗಳಿಗೆ ಶ್ರೀವಿದ್ಯಾಧೀಶ ತೀರ್ಥರು, ಶ್ರೀ ವಿದ್ಯಾರಾಜೇಶ್ವರ ತೀರ್ಥರು ಫ‌ಲ ಸಮರ್ಪಣೆಯೊಂದಿಗೆ ದಂಡವತ್‌ ಪ್ರಣಾಮ ಗೌರವ ಸಲ್ಲಿಸಿದರು. ಎಲ್ಲ ಮಠಾಧೀಶರು ಪಟ್ಟ ಕಾಣಿಕೆಯನ್ನು ಸಮರ್ಪಿಸಿದರು.

ಬೆಳಗ್ಗೆ ಮಹಾಪೂಜೆಯನ್ನು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನಡೆಸಿದರು. ಬಳಿಕ ಗರ್ಭಗುಡಿ ಹೊರಭಾಗ ವೈದಿಕರು ಚತುರ್ವೇದ ಪಾರಾಯಣ, ಭಾಗವತ, ಮಹಾಭಾರತ, ವಿಷ್ಣುಸಹಸ್ರನಾಮ, ಗೀತೆ ಇತ್ಯಾದಿ ಪವಿತ್ರ ಗ್ರಂಥಗಳ ಪಾರಾಯಣವನ್ನು, ಮಧ್ವಮಂಟಪದಲ್ಲಿ ಮಹಿಳೆಯರು ಲಕ್ಷ್ಮೀಶೋಭಾನೆ ಪಠನ ನಡೆಸಿದರು.

ಪಲಿಮಾರು ಮಠದ ಶ್ರೀ ರಾಜರಾಜೇಶ್ವರ ತೀರ್ಥರು ರಚಿಸಿದ ‘ಮಂಗಲಾಷ್ಟಕ’ವನ್ನು ರಾಜಾಂಗಣದಲ್ಲಿ ಮೂರ್‍ನಾಲ್ಕು ಬಾರಿ ಪಠಿಸಲಾಯಿತು. ಇದನ್ನು ದೇಶಕ್ಕೆ ಒಳಿತಾಗಲೆಂದು ‘ಮಂಗಲ ಭಾರತ ನಿರ್ಮಾಣ’ ಪರಿಕಲ್ಪನೆಯಲ್ಲಿ ಪಾರಾಯಣ ನಡೆಸಲಾಯಿತು. ಮಧ್ವಮಂಟಪ, ರಾಜಾಂಗಣದಲ್ಲಿ ನೇರ ಪ್ರಸಾರ ನಡೆಸಲಾಯಿತು.

LEAVE A REPLY

Please enter your comment!
Please enter your name here