ಬಡಗನ್ನೂರು : ಪಡುಮಲೆ ಶ್ರೀ ಪೂಮಾಣಿ -ಕಿನ್ನಿಮಾಣಿ ದೈವಸ್ಥಾನ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ರವಿವಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾ ಭಿಷೇಕದ ವಿಧಿ ವಿಧಾನಗಳು ನಡೆದವು.
ಆದಿ ಪರ್ಮಲೆ, ಅಂತ್ಯ ಪುತ್ತಿಗೆ ಎಂಬ ನುಡಿಗಟ್ಟುಳ್ಳ ಉಳ್ಳಾಕುಲು ಎಂಬುದಾಗಿ ಕರೆಸಿಕೊಳ್ಳುವ ಪೂಮಾಣಿ -ಕಿನ್ನಿಮಾಣಿಗಳು ಬಂದಿಳಿದ ಕ್ಷೇತ್ರ ಪಡುಮಲೆಯಲ್ಲಿ ವಿವಿಧ ಅಭಿವೃದ್ಧಿ, ಬ್ರಹ್ಮಕಲಶೋತ್ಸವ ಸಮಿತಿಗಳು, ಎಡನೀರು ಶ್ರೀಗಳು, ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಈ ದೈವಗಳಿಗೆ ಮತ್ತು ಪ್ರಧಾನ ದೈವ ವ್ಯಾಘ್ರಚಾಮುಂಡಿ (ಹುಲಿಭೂತ) ಹಾಗೂ ಪರಿವಾರ ದೈವಗಳಿಗೆ ಪೂರ್ವಾಹ್ನ 8.25ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಿತು.
ಮುಂಜಾನೆಯಿಂದ ಮಹಾಗಣಪತಿ ಹೋಮ, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕದ ಬಳಿಕ ಪ್ರಾರ್ಥನೆ, ಮಧ್ಯಾಹ್ನ ತಂಬಿಲ ಸೇವೆ, ಮಹಾಮಂಗಳಾರತಿ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಪೂರ್ವಾಹ್ನ ಹಾಗೂ ರಾತ್ರಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹೇಮನಾಥ ಶೆಟ್ಟ ಕಾವು, ಕಾರ್ಯಾ ಧ್ಯಕ್ಷ ಶೈಲೇಶ್ ಸುವರ್ಣ, ಗುರಿಕ್ಕಾರ ಕೇಶವ ಭಟ್ ಕೂವೆತೋಟ, ಆಡಳಿತಾಧಿಕಾರಿ ಕೆ.ಎನ್. ರಾಧಾಕೃಷ್ಣ, ಕ್ರಿಯಾ ಸಮಿತಿ ಗೌರವಾಧ್ಯಕ್ಷ ಗಣೇಶ್ ಭಟ್ ಬೀರ್ನೋಡಿ, ಪಡುಮಲೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಪಿ. ಸಂಜೀವ ರೈ, ವಿವಿಧ ಸಮಿತಿಗಳ ಪ್ರಮುಖರಾದ ಕೇಶವ ಗೌಡ ಕನ್ನಯ, ದೇವಿಪ್ರಸಾದ್ ಕೆ.ಸಿ., ಜನಾರ್ದನ ಪೂಜಾರಿ ಪದಡ್ಕ, ದಯಾ ವಿ. ರೈ ಬೆಳ್ಳಿಪ್ಪಾಡಿ, ಗುರುಪ್ರಸಾದ್ ರೈ ಕುದಾಡಿ, ಗಂಗಾಧರ ರೈ ಎಂ.ಜಿ., ಜಯಂತ ರೈ ಕುದ್ರಾಡಿ, ಕೃಷ್ಣ ರೈ, ರಾಜೇಶ್ ರೈ ಮೇಗಿನ ಮನೆ ಸಹಿತ ನೂರಾರು ಮಂದಿ ಸ್ವಯಂ ಸೇವಾ ಕಾರ್ಯಕರ್ತರು, ಸಾವಿರಾರು ಮಂದಿ ಭಕ್ತರು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.