ಆರಾಮ
ಪಡುಬಿದ್ರಿ: ನಾಗಾರಾಧನೆ, ದೈವಾರಾಧನೆ, ತನು ತಂಬಿಲಗಳೆಂದು ಪರಂಪರೆಯಲ್ಲಿ ಮುಂದುವರಿಯುತ್ತಾ ಇಂದಿಗೂ ನಮ್ಮ ನಡುವೆ ಜನಪದೀಯ ಪೂಜಾ ಪದ್ಧತಿಗಳು ಉಳಿದುಕೊಂಡಿವೆ. ವಿಶಿಷ್ಟ ವೈದಿಕ ಹಾಗೂ ತಂತ್ರಾಧಾರಿತ ವಿಶಿಷ್ಟ ಪೂಜಾ ಪದ್ಧತಿಯಾಗಿ ಪಡುಬಿದ್ರಿಯ ಬ್ರಹ್ಮಸ್ಥಾನ ದಲ್ಲಿ ದ್ವೈವಾರ್ಷಿಕ ನಡಾವಳಿಯಾಗಿ ಮುಂದುವರಿಯುತ್ತಾ ಬಂದಿರುವ ‘ಢಕ್ಕೆಬಲಿ’, ‘ಮಂಡಲ ಸೇವೆ’ಯು ಪ್ರಕೃತಿ ಆರಾಧನೆಗೆ ಸಾಕ್ಷಿಯಾಗಿ ನಿಲ್ಲಬಲ್ಲ ಅಪೂರ್ವ ಆಚರಣೆಯಾಗಿದೆ.
ಚಿದಂಬರ ರಹಸ್ಯದ ತಾಣ
ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನವು ನಾಸ್ತಿಕರ ಕಣ್ಣಿಗೆ ಕೇವಲ ಒಂದು ಗುಡ್ಡ ಅಥವಾ ಕಾಡಾಗಿ ಕಾಣಿಸಬಲ್ಲದು. ಆದರೆ ಇಲ್ಲಿನ ಆಸ್ತಿಕತೆಯ ಆಳವನ್ನು ಅರಿಯಬಲ್ಲ ಆಸಕ್ತರು, ವಿಶೇಷವಾಗಿ ಮಾರ್ಥಾ ಆ್ಯಸ್ಟನ್ರಂತಹ ಪಾಶ್ಚಿಮಾತ್ಯ ವಿದ್ವಾಂಸರು, ಪಾರಮಾರ್ಥಿಕರು ಇದನ್ನು ಪ್ರಕೃತಿ ಮಾತೆಯ ಮಡಿಲಲ್ಲಿನ ದೇವತಾ ಆರಾಧನೆಯ ತೊಟ್ಟಿಲಾಗಿ ಪರಿಗಣಿಸಿದ್ದಾರೆ. ಚಿದಂಬರ ರಹಸ್ಯಗಳನ್ನು ಒಳಗೊಂಡು ಇಲ್ಲಿನ ಪೂಜಾ ಪರಂಪರೆ, ಆರಾಧನಾ ವಿಧಾನ, ಕೇವಲ ಮಾಂತ್ರಿಕವೂ ಅಲ್ಲದೆ ಯಾಂತ್ರಿಕವಾಗಿ ಒಂದರ ಮೇಲೊಂದ ರಂತೆ ದೈವೀ ಸನ್ನಿವೇಶಗಳ ಸೃಷ್ಟಿಯಾಗಿ ರಾತ್ರಿ ಎಲ್ಲ ಮೈನವಿರೇಳುವ ಕ್ಷಣಗಳನ್ನು ಒದಗಿಸಿ ನೋಡುಗರ ಕಣ್ಣಲ್ಲಿ ಅಚ್ಚಳಿ ಯದ ರಮಣೀಯ ದೃಶ್ಯಾವಳಿಗಳ ಸರಮಾಲೆಗಳನ್ನೇ ಉಂಟುಮಾಡುತ್ತವೆ.
ಢಕ್ಕೆಬಲಿ – ಪ್ರವಾಸೋದ್ಯಮಕ್ಕೆ ಉತ್ತೇಜನ
ಮುಂಜಾವದ ಪಂಚಾಮೃತಾಭಿಷೇಕ ದೊಂದಿಗೆ ಆರಂಭಗೊಳ್ಳುವ ಢಕ್ಕೆಬಲಿ ಸೇವೆಯ ಆರಂಭವು ಮುಂದೆ ಬ್ರಾಹ್ಮಣಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಸಂಜೆ ಹೊತ್ತಿಗೆ ವಿಜೃಂಭಣೆಯ ಹೊರೆ ಕಾಣಕೆ ಮೆರವಣಿಗೆಯೊಂದಿಗೆ ನಡೆಯುತ್ತದೆ. ವಿವಿಧ ಫಲಪುಷ್ಪ, ಅಡಕೆ, ಹಿಂಗಾರ, ತೆಂಗಿನಕಾಯಿ, ತೆಂಗಿನಗರಿ, ಸೀಯಾಳಗಳ ರಾಶಿ ಬಯಲು ಆಲಯ ‘ಬ್ರಹ್ಮಸ್ಥಾನ’ದೊಳಕ್ಕೆ ಬಂದು ಸೇರಿಕೊಳ್ಳುತ್ತದೆ. ಮುಂದೆ ಇದನ್ನೆಲ್ಲಾ ಅಲಂಕರಿಸಿ ಕಾನನವನ್ನು ಸಿರಿಸಿಂಗಾರಗೊಳಿಸುತ್ತಾರೆ. ನೋಡುಗರ ಕಣ್ಣಿಗೆ ರಮ್ಯವಾಗಿ ಕಾಣಿಸಿಕೊಳ್ಳುವ ಈ ಪುಷ್ಪಾಲಂಕಾರಗಳಿಂದಲೇ ಪಡುಬಿದ್ರಿಯ ತರುಣರಿಗೆ ಇಂದಿಗೂ ಹೊರ ಜಿಲ್ಲೆ, ರಾಜ್ಯ ಗಳಲ್ಲಿ ವಿಶಿಷ್ಟ ಹೆಸರಿದೆ. ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನವನ್ನು ಈ ಸುಂದರ ಪುಷ್ಪಾಲಂಕಾರಗಳಿಗಾಗಿಯೇ ಹೊರ ರಾಜ್ಯ, ಜಿಲ್ಲೆ ಸೇರಿದಂತೆ ದೇಶ, ವಿದೇಶಗಳ ಮಂದಿಯೂ ಬಂದು ವೀಕ್ಷಿಸಿ ಪುಳಕಿತರಾಗುತ್ತಾರೆ. ಪ್ರವಾಸೋದ್ಯಮಕ್ಕೂ ಈ ಢಕ್ಕೆಬಲಿ ಪರ್ವವು ಉತ್ತೇಜನವನ್ನೀಯುತ್ತದೆ. ಈ ಅಲಂಕಾರಗಳೆಲ್ಲಾ ಮುಗಿದು ರಾತ್ರಿಯ ವೇಳೆ ತಂಬಿಲ ಸೇವೆ, ಢಕ್ಕೆಬಲಿಗಳು ಅಲ್ಲಿನ ಅರ್ಚಕರು, ಕೊರಡುಗಳು, ವೈದ್ಯರು, ಗುರಿಕಾರರು, ಮಾನ್ಯರು ಹಾಗೂ ಸ್ಥಳವಂದಿಗರ ಕೂಡುವಿಕೆಯಿಂದ ನಡುರಾತ್ರಿಯ ಒಂದಿಷ್ಟು ವಿರಾಮದ ಹೊರತಾಗಿ ಮುಂಜಾವದವರೆಗೂ ಮುಂದುವರಿಯು ತ್ತವೆ. ಬೆಳಗ್ಗೆ ಪ್ರಸಾದ ವಿತರಣೆಯೊಂದಿಗೆ ಈ ಸೇವೆಗಳು ಕೊನೆಗೊಳ್ಳುತ್ತವೆ. ಪ್ರಸಾದವಾಗಿ ಅಲಂಕರಿಸಿದ ಬಾಳೆಹಣ್ಣು. ಹೂ, ಸೀಯಾಳಗಳು ವಿತರಿಸಲ್ಪಡುತ್ತದೆ. ಮರುದಿನದ ಸೇವೆ ಮತ್ತೆ ಅಲ್ಲಿ ನಡೆಯುವ ಪಂಚಾಮೃತಾಭಿಷೇಕ ದೊಂದಿಗೆ ಆರಂಭಗೊಳ್ಳುವುದು.
ಭಕ್ತರಿಗೆ ಮರಳು ಇಲ್ಲಿ ಪ್ರಸಾದ ವಾಗಿರುತ್ತದೆ. ಯಾರೇ ಬಂದರೂ ಇಲ್ಲಿನ ಮರಳೇ ಅವರಿಗೆ ಆಸನವಾಗಿರುತ್ತದೆ. ಮಹಿಳೆ ಯರೂ, ಪುಟಾಣಿಗಳೂ ಸೇರಿದಂತೆ ಸಹಸ್ರಾರು ಮಂದಿ ಈ ಐತಿಹಾಸಿಕ ವನದಲ್ಲಿ ಢಕ್ಕೆಬಲಿ ಸೇವೆಗಾಗಿ ಸೇರುತ್ತಾರೆ.
ಈ ಬಾರಿ ನಾಗಮಂಡಲ ಸಹಿತ 35 ಸೇವೆ
ಈ ಬಾರಿ ಜ. 18ರಿಂದ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಆರಂಭಗೊಳ್ಳಲಿದೆ. ಒಂದು ನಾಗಮಂಡಲ ಸೇರಿದಂತೆ ಒಟ್ಟು 35 ಸೇವೆಗಳು ಈ ಬಾರಿ ನಡೆಯ ಲಿದೆ. ಪಡುಬಿದ್ರಿಯ ಬ್ರಹ್ಮಸ್ಥಾನವು ಶಿವಳ್ಳಿ ಬ್ರಾಹ್ಮಣ ಸಮುದಾಯದ ಶ್ರೀ ವನದುರ್ಗಾ ಟ್ರಸ್ಟ್ನ ಆಡಳಿತಕ್ಕೊಳಪಟ್ಟಿದೆ. ಬ್ರಾಹ್ಮಣ ಸಮಾಜದ ವತಿಯಿಂದ ನಡೆಯುವ ಮಂಡಲ ಹಾಕುವ ಸೇವೆಯೊಂದಿಗೆ ಆರಂಭಗೊಳ್ಳುವ ಢಕ್ಕೆಬಲಿಯು ನಿರ್ದಿಷ್ಟ ದಿನಗಳಲ್ಲಿ ಮುಂದುವರಿಯುತ್ತಾ ಮುರುಡಿ ಬ್ರಹ್ಮಸ್ಥಾನ ಮತ್ತು ಹೆಜಮಾಡಿಯ ಬ್ರಹ್ಮಸ್ಥಾನಗಳ ಪೂರ್ವ ಸಂಪ್ರದಾಯದ ಎರಡು ಸೇವೆಗಳೂ ಸೇರಿದಂತೆ ಒಟ್ಟು 35 ಸೇವೆಗಳು ಮಾ. 12ರಂದು ಕೊನೆಗೊಳ್ಳುತ್ತದೆ .
ವೈ. ಎನ್. ರಾಮಚಂದ್ರ ರಾವ್, ಶ್ರೀ ವನದುರ್ಗಾ ಟ್ರಸ್ಟ್ನ ಕಾರ್ಯದರ್ಶಿ