ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಗಣಪತಿ ದೇವರಿಗೆ ವರ್ಷಂಪ್ರತಿ ಸಲ್ಲಿಕೆಯಾಗುವ ಕಟಾಹಾಪೂಪ(ಕಟ್ಟದಪ್ಪ) ಸೇವೆಯು ಆ. 10ರಂದು ಸಂಪನ್ನಗೊಂಡಿತು.
ಸುಮಾರು 80ಮುಡಿ ಅಕ್ಕಿಹಿಟ್ಟು, 3ಕ್ವಿಂಟಾಲ್ ಬೆಲ್ಲ, 180ಕೆಜಿ ಅರಳು ಮತ್ತು 710ಕೆ.ಜಿ. ಬಾಳೆಹಣ್ಣುಗಳ ಮಿಶ್ರಣವನ್ನು ತಯಾರಿಸಿ ಶನಿವಾರ ಬೆಳಗ್ಗಿನ ಜಾವದಿಂದ ಆರಂಭಿಸಿ ಸಾಯಂಕಾಲದೊಳಗೆ ಸುಮಾರು 9500 ಸೇವಾದಾರರಿಗೆ ಹಂಚಲು 150,000 ಅಪ್ಪಗಳನ್ನು ತಯಾರಿಸಲಾಗಿತ್ತು. ಬಾಣಸಿಗರಾದ ಯೋಗೀಶ್ ರಾವ್, ಅಡ್ವೆ ಕೃಷ್ಣಮೂರ್ತಿ ಭಟ್, ಅಡ್ವೆ ರಮೇಶ ಭಟ್ ಮತ್ತು ಸ್ಥಳೀಯರೂ ಸೇರಿದಂತೆ ಸುಮಾರು 100 ಪಾಕಶಾಸ್ತ್ರಜ್ಞರು ಕಟ್ಟದಪ್ಪಗಳ ತಯಾರಿಕೆಯಲ್ಲಿ ಸಹಕರಿಸಿದ್ದರು.
ಊರ ಭಕ್ತರ ಅಭೀಷ್ಟಗಳನ್ನು ನೆರವೇರಿಸಲು, ಇಳೆಯು ಉತ್ತಮ ಮಳೆಯಿಂದ ಸಮೃದ್ಧಗೊಳ್ಳಲು ಮತ್ತು ರೈತರ ಉತ್ತಮ ಬೆಳೆಗಾಗಿ ಪ್ರಾರ್ಥಿಸಿ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆಯನ್ನು ಸಲ್ಲಿಸಿ ಆ ಬಳಿಕ ಇವುಗಳನ್ನು ಭಕ್ತರಿಗೆ ಹಂಚಲಾಯಿತು.
ಶ್ರೀ ದೇವಳದ ಅನುವಂಶಿಕ ಮೊಕ್ತೇಸರ ಪಿ. ವಿಶ್ವನಾಥ ಹೆಗ್ಡೆ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಶ್ರೀ ದೇವಳದ ಅರ್ಚಕರಾದ ಪದ್ಮನಾಭ ಭಟ್, ಗುರುರಾಜ ಭಟ್, ಪವಿತ್ರಪಾಣಿ ಸಹೋದರರಾದ ಕೊರ್ನಾಯ ಶ್ರೀಪತಿ ರಾವ್, ಕೊರ್ನಾಯ ಪದ್ಮನಾಭ ರಾವ್, ಎಲ್ಲೂರು ಶ್ರೀ ವಿಶ್ವೇಶ್ವರ ದೇವಳದ ಆಡಳಿತ ಮೊಕ್ತೇಸರ ವೈ. ಪ್ರಪುಲ್ಲ ಶೆಟ್ಟಿ, ವೈ. ಸುರೇಶ್ ರಾವ್, ವೈ. ಗಣಪತಿ ಭಟ್ ಉಪಸ್ಥಿತರಿದ್ದರು.