Home ಧಾರ್ಮಿಕ ಸುದ್ದಿ ಮಾನವ ಜನ್ಮ ಶ್ರೇಷ್ಠ: ಪೇಜಾವರಶ್ರೀ

ಮಾನವ ಜನ್ಮ ಶ್ರೇಷ್ಠ: ಪೇಜಾವರಶ್ರೀ

215
0
SHARE

ಬೆಳ್ಮಣ್‌ : ಮಾನವ ಜನ್ಮ ಶ್ರೇಷ್ಠವಾಗಿದ್ದು ಇತ್ತೀಚೆಗಿನ ದಿನಗಳಲ್ಲಿ ಮನುಷ್ಯ ಪಶುಗಳಿಗಿಂತಲೂ ಕಡೆಯಾಗಿ ವರ್ತಿಸುತ್ತಿರುವುದು ಖೇದಕರ ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಹೇಳಿದರು. ಸೋಮವಾರ ಪಡುಬೆಳ್ಮಣ್‌ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವಾಂಗ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕನ್ನಡ ಸಾಹಿತ್ಯ ಪರಿತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಆಧ್ಯಕ್ಷತೆ ವಹಿಸಿದ್ದು, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.

ಶಾಸಕ ವಿ. ಸುನಿಲ್‌ ಕುಮಾರ್‌, ಗುರ್ಮೆ ಸುರೇಶ್‌ ಶೆಟ್ಟಿ, ಬೆಳ್ಮಣ್‌ ಶ್ರೀ ದುರ್ಗಾ ಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ವಿಘ್ನೇಶ್‌ ಭಟ್‌, ಕರ್ಣಾಟಕ ಬ್ಯಾಂಕ್‌ನ ಜನರಲ್‌ ಮೆನೇಜರ್‌ ಚಂದ್ರಶೇಖರ ರಾವ್‌, ಸಹಾಯಕ ಜನರಲ್‌ ಮೆನೇಜರ್‌ ರವೀಂದ್ರನಾಥ ಹಂದೆ, ಕ್ಷೇತ್ರದ ಪವಿತ್ರಪಾಣಿ ಮಡ್ಕುಮನೆ ರಘುವೀರ ರಾವ್‌ ದಾನಿಗಳನ್ನು ಗೌರವಿಸಿದರು.

ಕರ್ಣಾಟಕ ಬ್ಯಾಂಕ್‌ ವತಿಯಿಂದ ಕ್ಷೇತ್ರದ ಪುಷ್ಕರಿಣಿ ನಿರ್ಮಾಣಕ್ಕೆ 10 ಲಕ್ಷ ರೂ. ದೇಣಿಗೆಯನ್ನು ಬ್ಯಾಂಕ್‌ನ ಚೀಫ್‌ ಜನರಲ್‌ ಮ್ಯಾನೇಜರ್‌ ರಾಘವೇಂದ್ರ ಭಟ್‌ ಹಸ್ತಾಂತರಿಸಿದರು. ಪುನಾರು ರಘುನಾಥ ನಾಯಕ್‌ ಸ್ವಾಗತಿಸಿ, ಸರ್ವಜ್ಞ ತಂತ್ರಿ, ಗಣಪತಿ ಆಚಾರ್‌ ಸಮ್ಮಾನಿತರ ವಿವರ ನೀಡಿದರು. ಡಾ| ಪ್ರಕಾಶಾತ್ಮ ನಿರೂಪಿಸಿದರು.

ಚೆನೈನ ಕರ್ನಾಟಕ ಸಂಘ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಶನೈಶ್ಚರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ, ಬಳಿಕ ಕಿನ್ನಿಗೋಳಿಯ ವಿಜಯ ಕಲಾವಿದರಿಂದ ಲೆಕ್ಕ ತತ್ತಿ ಬೊಕ್ಕ ತುಳು ನಾಟಕ ಪ್ರದರ್ಶನಗೊಂಡಿತು.

ಹಳೆ ದೇಗುಲಗಳ ಪುನರುತ್ಥಾನ ಅರ್ಥಪೂರ್ಣ
ಹಿಂದೆ ಮಂಗನಿಂದ ಮಾನವ ಎಂಬ ಮಾತಿತ್ತು. ಆದರೆ ಇದೀಗ ಮತ್ತೆ ಮಾನವ ಮೃಗೀಯವಾಗಿ ಮಂಗನ ಬದುಕಿಗೆ ಇಳಿದಿದ್ದಾನೆ. ಭಗವಂತನಲ್ಲಿನ ಭಕ್ತಿ ಸಂದೇಶದಂತೆ ಕೆಲಸ ಮಾಡುತ್ತದೆ, ಹೊಸ ದೇಗುಲಗಳ ನಿರ್ಮಾಣಕ್ಕಿಂತ ಹಳೆ ದೇಗುಲಗಳ ಪುನರುತ್ಥಾನ ಅರ್ಥಪೂರ್ಣ.
-ಪೇಜಾವರಶ್ರೀ

LEAVE A REPLY

Please enter your comment!
Please enter your name here