ಬೊಳುವಾರು: ವಿಹಿಂಪ, ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ಬೊಳುವಾರು ಶ್ರೀ ಆಂಜನೇಯ ಘಟಕದ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯಲ್ಲಿ ದೀಪಾವಳಿಯ ಅಂಗವಾಗಿ ಸಾಮೂಹಿಕ ಗೋಪೂಜೆ ನಡೆಸಲಾಯಿತು.
ಮಾತೆಯರು ಗೋವಿಗೆ ಸ್ನಾನ ಮಾಡಿಸಿ, ಅಲಂಕರಿಸಿ, ಸಿಹಿ ಅವಲಕ್ಕಿ, ದೋಸೆ ಮೊದಲಾದ ದೀಪಾವಳಿಯ ವಿಶೇಷ ತಿಂಡಿಗಳನ್ನು ತಿನ್ನಿಸಿದರು. ಬಳಿಕ ಅಲಂಕೃತ ಗೋಮಾತೆಗೆ ಆರತಿ ಬೆಳಗುವ ಮೂಲಕ ಗೋಪೂಜೆಯನ್ನು ನೆರವೇರಿಸಿದರು.
ವಿಹಿಂಪ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಮಾತನಾಡಿ, ಭಾರತೀಯ ಸಂಸ್ಕೃತಿಯ ಅಂಗವಾಗಿರುವ ಗೋವು ಶ್ರದ್ಧಾವಂತ ಹಿಂದೂಗಳಿಗೆ ಮಾತೃ ಸಮಾನ. ದೀಪಾವಳಿಯ ಸಂದರ್ಭ ಧನಲಕ್ಷ್ಮೀ ಪೂಜೆ ನೆರವೇರಿಸಿದಂತೆ ಗೋಪೂಜೆಯನ್ನೂ ಮಾಡುವ ಮೂಲಕ ಗೋಮಾತೆಗೆ ಗೌರವ ಸಲ್ಲಿಸುವ ಸಂಪ್ರದಾಯ ನಮ್ಮಲ್ಲಿ ಹಿರಿಯರ ಕಾಲದಿಂದಲೂ ಬಂದಿದೆ. ಅದನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಜವಾಬ್ದಾರಿ ನಮಗೆಲ್ಲರಿಗೂ ಇದೆ ಎಂದರು.
ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಸಂತೋಷ್ ಕುಮಾರ್, ಗೌರಿ ಬನ್ನೂರು, ದುರ್ಗಾವಾಹಿನಿಯ ಅರ್ಪಣಾ ಶಿವಾನಂದ, ಪ್ರೊ| ವತ್ಸಲಾ, ಶ್ಯಾಮಲಾ, ರೂಪಾ, ಆಶಾ,
ಶಕುಂತಳಾ, ಪ್ರೇಮಾ ನೂರಿತ್ತಾಯ, ನವೀನ್ ಕೊಂಬೆಟ್ಟು, ಧರ್ಮದರ್ಶಿ ನಾರಾಯಣ ಮಣಿಯಾಣಿ, ಸುರೇಖಾ ಆಚಾರ್, ವಿದ್ಯಾ, ಅನುಪಮಾ, ಪ್ರವೀಣ್ ಕುಮಾರ್ ಬೊಳುವಾರು ಉಪಸ್ಥಿತರಿದ್ದರು.
ಬಜರಂಗ ದಳ ಬೊಳುವಾರು ಘಟಕದ ಸಂಚಾಲಕ ಚೇತನ್ ಬೊಳುವಾರು ಸ್ವಾಗತಿಸಿ, ಮಾತೃ ಮಂಡಳಿಯ ಜಿಲ್ಲಾ ಪ್ರಮುಖ್ ಪ್ರೇಮಲತಾ ರಾವ್ ವಂದಿಸಿದರು. ನವೀನ್
ಪಡಿವಾಳ್ ಕಾರ್ಯಕ್ರಮ ನಿರ್ವಹಿಸಿದರು.