ಧರ್ಮಸ್ಥಳ : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಜ್ಜನದ ಸಂಭ್ರಮ ಮನೆಮಾಡಿದ್ದು, ಬಾಹುಬಲಿಯ ಬೆಟ್ಟದಲ್ಲಿ ನಿತ್ಯ ಪೂಜಾ ವಿಧಿವಿಧಾನಗಳ ಮೂಲಕ ವೈರಾಗ್ಯ ಮೂರ್ತಿ ಪಾದಗಳಿಗೆ ಪ್ರತಿದಿನ ಅಭಿಷೇಕಗಳು ನಡೆಯುತ್ತಿವೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಭಕ್ತರು
ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಹತ್ತು ದಿವಸಗಳ ಮಹಾಮಜ್ಜನದಲ್ಲಿ ಐದು ದಿನಗಳು ಪೂರ್ಣಗೊಂಡಿದ್ದು, ಧರ್ಮಸ್ಥಳ ಹಬ್ಬದ ಸಂಭ್ರಮದಲ್ಲಿದೆ. ಮುಂಜಾನೆಯಿಂದಲೇ ಭಗವಾನ್ ಬಾಹುಬಲಿಗೆ ಅಭಿಷೇಕ, ಪೂಜಾ ವಿಧಿವಿಧಾನ, ಯಜ್ಞ ಯಾಗಾದಿಗಳು ನಡೆಯುತ್ತಿವೆ. ಜೈನ ಮುನಿಗಳ ಸಮ್ಮುಖದಲ್ಲಿ ಬಾಹುಬಲಿಯ ಆರಾಧನೆ ನಡೆಯುತ್ತಿದೆ.
ಫೆ. 15ರ ವರೆಗೆ ಬಾಹುಬಲಿ ಸ್ವಾಮಿಯ ಪಾದಗಳಿಗೆ ಕುಂಕುಮ, ಚಂದನ, ಎಳನೀರು, ಕಲಶಾಭಿಷೇಕಗಳು ನಡೆಯಲಿದ್ದು, 16ರಿಂದ 19ರ ವರೆಗೆ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಹೆಗ್ಗಡೆ ಕುಟುಂಬಸ್ಥರು ಪೂರ್ಣ ರೀತಿಯಲ್ಲಿ ತೊಡಗಿಕೊಂಡಿದ್ದು, ಬಾಹುಬಲಿಗೆ ಜಲಾಭಿಷೇಕ, ಕಬ್ಬಿನ ಹಾಲು, ಸೀಯಾಳ, ಕಷಾಯ, ಕುಂಕುಮ ಚಂದನದ ಅಭಿಷೇಕ ನಡೆಯಲಿದೆ. ಜೈನ ಮುನಿಗಳ ಆದೇಶದಂತೆ ಪ್ರಾತಃಕಾಲದಲ್ಲಿಯೇ ಅಭಿಷೇಕಾದಿ ಕ್ರಿಯೆಗಳು ನಡೆಯಲಿವೆ.