ಮರವೂರು: ಗುರುಪುರ ನದಿ ಸೇತುವೆಯ ಸಮೀಪದಲ್ಲಿರುವ ಮರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನಕ್ಕೆ ಲೋಕ ಕಲ್ಯಾಣಾರ್ಥ, ಸಕಲ ಸಂಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ 5ನೇ ವರ್ಷದ ‘ಅಮ್ಮನೆಡೆಗೆ ನಮ್ಮ ನಡೆ’ ಪಾದಯಾತ್ರೆ ರವಿವಾರ ನಡೆಯಿತು.
ಪಾದಯಾತ್ರೆಯನ್ನು ಕದ್ರಿ ಯೋಗೇಶ್ವರ ಮಠದ ಶ್ರೀ ನಿರ್ಮಲ್ನಾಥ್ಜೀ ಉದ್ಘಾಟಿಸಿದರು.
ಭಕ್ತರು ಮರವೂರು ದೇಗುಲದಲ್ಲಿ ಮುಂಜಾನೆ 4 ಗಂಟೆಗೆ ಸೇರಿದ್ದರು. ದೇವರ ದರ್ಶನ ಪಡೆದು, ಅಲ್ಲಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿದರು. ಸುಮಾರು 30 ಸಾವಿರ ಭಕ್ತರು ಪಾಲ್ಗೊಂಡಿದ್ದು, ಈ ಪಾದಯಾತ್ರೆಯ ಅಭಿಯಾನ ಭಕ್ತರ ಮಹಾಪೂರಕ್ಕೆ ಸಾಕ್ಷಿಯಾಯಿತು.
ಕದ್ರಿ ಯೋಗೇಶ್ವರ ಮಠದ ರಾಜಯೋಗಿ ಶ್ರೀ ನಿರ್ಮಲ್ನಾಥ್ಜೀ ಮಹಾರಾಜ್ ಅವರು ಮರವೂರು ದೇವಸ್ಥಾನದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ದಾರಿಯುದ್ದಕ್ಕೂ ಬೆಲ್ಲ, ನೀರು, ಮಜ್ಜಿಗೆ ವ್ಯವಸ್ಥೆ
ದಾರಿಯುದಕ್ಕೂ ಭಕ್ತರಿಗಾಗಿ ವಿವಿಧ ಸಂಘ ಸಂಸ್ಥೆಗಳಿಂದ ಬೆಲ್ಲ, ನೀರು, ಮಜ್ಜಿಗೆ ವ್ಯವಸ್ಥೆ ಇತ್ತು. ಆ್ಯಂಬುಲೆನ್ಸ್ ಸೇವೆ, ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸುಮಾರು 14 ಕಿ.ಮೀ. ಪಾದಯಾತ್ರೆ ಸಾಗಿತು. ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಕವಿತಾ ಸನಿಲ್, ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಆದಾನಿ ಗ್ರೂಪ್ನ ಕಿಶೋರ್ ಅಳ್ವ, ಮಾಜಿ ಸಚಿವ ನಾಗರಾಜ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ದಿವಾಕರ ಶೆಟ್ಟಿ ಮುದ್ರಾಡಿ ಮುಂಬಯಿ, ರವೀಂದ್ರ ಅರಸ ಮುಂಬಯಿ, ಸಂತೋಷ್ ಕುಮಾರ್ ಶೆಟ್ಟಿ, ಗಿರೀಶ್ ಶೆಟ್ಟಿ, ದೇವಿಚರಣ್ ಶೆಟ್ಟಿ, ಶಶಿಧರ್ ಶೆಟ್ಟಿ ಮರವೂರು, ಅನಿಲ್ ದಾಸ್, ಜಗದೀಶ್ ಶೇಣವ, ಭಾಸ್ಕರ್ ರೈ ಕುಕ್ಕುವಳ್ಳಿ, ನಿವೇದಿತಾ ಎನ್. ಶೆಟ್ಟಿ, ಡಾ| ಸತೀಶ್ ಕಲ್ಲಿಮಾರ್, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಮರವೂರು ದೇಗುಲದ ಆರ್ಚಕ ಶ್ರೀನಿವಾಸ ಉಪಾಧ್ಯಾಯ, ಪಾದಯಾತ್ರೆ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಉಪಸ್ಥಿತರಿದ್ದರು.
ಶಿಸ್ತುಬದ್ಧವಾಗಿ ಯಾತ್ರೆ
ಮರವೂರು ದೇವಸ್ಥಾನದಿಂದ ಬೆಳಗ್ಗೆ 7.30ಕ್ಕೆ ಕಟೀಲು ದೇವಿಯ ಚಿತ್ರಪಟವನ್ನೊಳಗೊಂಡ ಪಾದ ಯಾತ್ರೆಯಲ್ಲಿ ಪುಷ್ಪಾ ಲಂಕೃತ ದೇವರ ರಥ, ಯಕ್ಷಗಾನ ವೇಷಧಾರಿಗಳು, ವಿವಿಧ ಸಂಘ- ಸಂಸ್ಥೆಗಳ ಸದಸ್ಯರು, ಮಕ್ಕಳು, ಯುವಕ, ಯುವತಿಯರು, ವಯಸ್ಕರು, ಭಜನೆ, ಚೆಂಡೆಯೊಂದಿಗೆ ರಸ್ತೆಯಲ್ಲಿ ಶಿಸ್ತುಬದ್ಧವಾಗಿ ಸಾಗಿದರು. ಕೆಂಜಾರು, ಕರಂಬಾರು, ಬಜಪೆ, ಪೆರ್ಮುದೆ, ಎಕ್ಕಾರು ಮಾರ್ಗವಾಗಿ
ಕಟೀಲಿಗೆ ತಲುಪಿತು. ಮರವೂರಿನಿಂದ ಕಟೀಲಿಗೆ ಭಕ್ತರ ಪಾದಯಾತ್ರೆ ರವಿವಾರ ಜರಗಿತು.