ಪಜೀರು: ಹಿಂದೂ ಸಮಾಜ ಧರ್ಮ ಜಾಗೃತಿಯೊಂದಿಗೆ ಸಂಘಟಿತರಾಗಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅಭಿಪ್ರಾಯಪಟ್ಟರು.
ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ಆಶ್ರಯದ ಪಜೀರು, ಬೀಜಗುರಿಯಲ್ಲಿರುವ ಗೋಶಾಲಾ ವಠಾರದಲ್ಲಿ ರವಿವಾರ ನಡೆದ ಸಾಮೂಹಿಕ ಗೋಪೂಜೆ ಕಾರ್ಯ ಕ್ರಮದಲ್ಲಿ ಗೋಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಭಾರತದಲ್ಲಿ ನಾವು ಬಹುಸಂಖ್ಯಾಕ ರಾದರೂ ಹಿಂದೂ ಧರ್ಮ ಮತ್ತು ನಾವು ಪೂಜಿಸುವ ಗೋವುಗಳಿಗೆ ಅಭದ್ರತೆ ಇದೆ ಅದಕ್ಕೆ ಮುಖ್ಯ ಕಾರಣ ನಾವು ಸಂಘಟಿತರಾಗದೇ ಇರುವುದು.
ಮುಖ್ಯವಾಗಿ ಅನ್ಯಮತಿಯರು ನಮ್ಮ ಮೇಲೆ ದಾಳಿ ಮಾಡುವಾಗ ಮಾತ್ರ ಸಂಘಟಿತರಾಗದೆ ನಮ್ಮ ಅಧ್ಯಾತ್ಮಿಕ ಸೇರಿದಂತೆ ಧಾರ್ಮಿಕ ವಿಚಾರಗಳಿಗೆ ಸಂಘಟಿತರಾಗಿ ಮುನ್ನಡೆದರೆ ನಮ್ಮನ್ನು ಯಾರಿಗೂ ಎದುರಿಸಲು ಸಾಧ್ಯವಿಲ್ಲ ಎಂದರು.
ಮಂಗಳಾ ಸೇವಾ ಟ್ರಸ್ಟ್ನ ಅಧ್ಯಕ್ಷ ಎಲ್.ಶ್ರೀಧರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಗೋವನಿತಾಶ್ರಯ ಟ್ರಸ್ಟ್ನ ಕೋಶಾಧಿಕಾರಿ ಅನಂತ ಲಕ್ಷ್ಮೀ ಭಟ್, ಟ್ರಸ್ಟಿಗಳಾದ ಲಕ್ಷ್ಮೀಶ್ ಯಡಿಯಾಳ್, ಮೋಹನ್ ದಾಸ್ ಪಡಿಯಾರ್, ರಘುರಾಮ ಕಾಜವ, ರವಿ ರೈ ರಾಜೇಶ್ ಶೆಟ್ಟಿ ಪಜೀರುಗುತ್ತು, ವಿಶ್ವ ಹಿಂದೂ ಪರಿಷತ್ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಜಿಲ್ಲಾ ಸಹ ಕಾರ್ಯದರ್ಶಿ ಸುರೇಖಾರಾಜ್, ಜಿಲ್ಲಾ ಗೋರಕ್ಷ್ಮೀ ಪ್ರಮುಖ್ ಪ್ರದೀಪ್ ಪಂಪ್ ವೆಲ್, ಸಹ ಕೋಶಾಧ್ಯಕ್ಷ ನಾಗೇಶ್ ಕಡೆಗೋಳಿ, ಭಜರಂಗದಳ ಜಿಲ್ಲಾ ಸಹ ಸಂಯೋಜಕ ಪುನೀತ್ ಅತ್ತಾವರ್, ರವಿ ಅಲೆವೂರಾಯ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಸ್ವಾಗತಿಸಿದರು. ಗೋವನಿತಾಶ್ರಯ ಟ್ರಸ್ಟ್ನ ಕಾರ್ಯದರ್ಶಿ ಡಾ| ಪಿ.ಅನಂತಕೃಷ್ಣ ಭಟ್ ಪ್ರಸ್ತಾವನೆಗೈದರು. ಟ್ರಸ್ಟಿ ಮನೋಹರ ತುಳಜಾರಾಂ ವಂದಿಸಿದರು. ಹಿಂದೂ ಪರಿಷತ್ನ ಉಳ್ಳಾಲ ಪ್ರಖಂಡ ಕಾರ್ಯದರ್ಶಿ ರವಿ ಅಸೈಗೋಳಿ ನಿರ್ವಹಿಸಿದರು.