ಬೆಂಗಳೂರು: ಭಕ್ತರ ಮನವಿಯ ಮೇರೆಗೆ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ, ಮೈಸೂರು ಚಾಮುಂಡೇಶ್ವರಿ ಸಹಿತ ರಾಜ್ಯದ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಆನ್ಲೈನ್ ಸೇವೆ ಆರಂಭಿಸಲು ಸರಕಾರ ಮುಂದಾಗಿದೆ.
ಪೂಜೆ ಮತ್ತು ಅಭಿಷೇಕ, ಮಂಗಳಾರತಿಗಳ ಆನ್ಲೈನ್ ನೇರಪ್ರಸಾರಕ್ಕೂ ತೀರ್ಮಾನಿಸಲಾಗಿದೆ. ಭಕ್ತರು ಮನೆಯಲ್ಲಿದ್ದೇ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಬಹುದು. ಪ್ರಸಾದ ಅಂಚೆ ಆಥವಾ ಕೊರಿಯರ್ ಮೂಲಕ ತಲುಪಲಿದೆ. ಮೇ 26 ಅಥವಾ 27ರಿಂದ ಈ ಸೇವೆ ಲಭ್ಯವಾಗಲಿದೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಭಕ್ತರು ಆನ್ ಲೈನ್ ಮೂಲಕ ಸೇವೆ ಮಾಡಿಸಲು ಮನವಿ ಮಾಡುತ್ತಿದ್ದಾರೆ. ಹೀಗಾಗಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಮೊದಲಿಗೆ 50 ದೇವಾಲಯಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅನಂತರ ಸ್ಪಂದನೆ ನೋಡಿಕೊಂಡು ವಿಸ್ತರಿಸಲಾಗುವುದು. ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಮಂದಾರ್ತಿ ದುರ್ಗಾ ಪರಮೇಶ್ವರಿ, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ, ಬೆಂಗಳೂರಿನ ಬನಶಂಕರಿ ಸೇರಿ 50 ದೇವಾಲಯ ಗಳ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಗೌರವಧನ ಬಿಡುಗಡೆ
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ 26,700 ಮುಜರಾಯಿ ದೇವಾಲಯಗಳಲ್ಲಿ ಪೂಜೆ ನೆರವೇರಿಸುತ್ತಿರುವ ಅರ್ಚಕರು ಸಂಕಷ್ಟದಲ್ಲಿದ್ದು, ಅವರಿಗೆ ಮೂರು ತಿಂಗಳ ಮುಂಗಡ ಗೌರವಧನ ಬಿಡುಗಡೆ ಮಾಡಲು ಸಿಎಂ ಒಪ್ಪಿಗೆ ನೀಡಿ 33.65 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ವಾರ್ಷಿಕ ನಿರ್ವಹಣೆ ಬಾಬಿ¤ನಡಿ 5.32 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ನಿತ್ಯ ಪೂಜೆಯೂ ನೇರ ಪ್ರಸಾರ
ದೇಗುಲಗಳಲ್ಲಿ ನಿತ್ಯ ಪೂಜೆಯ ಆನ್ಲೈನ್ ನೇರ ಪ್ರಸಾರಕ್ಕೂ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆಯಿದೆ. ಈ ಸಂಬಂಧ ಸಿಎಂ ಜತೆಗೆ ಚರ್ಚಿಸಲಾಗಿದ್ದು, ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.