ಕೆಯ್ಯೂರು : ಓಲೆಮುಂಡೋವು ದರ್ಗಾ ಶರೀಫ್ ಉರೂಸ್ ಪ್ರಯುಕ್ತ ಮತ ಪ್ರಭಾಷಣದ ಉದ್ಘಾಟನೆ ಈಚೆಗೆ ನಡೆಯಿತು.
ಮುಖ್ಯ ಪ್ರಭಾಷಣ ಮಾಡಿದ ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ ಪತ್ತನಾಪುರಂ ಮಾತನಾಡಿ, ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ. ಹುಟ್ಟು – ಸಾವುಗಳೆಡೆಯಲ್ಲಿ ಅಲ್ಲಾಹನು ಆಜ್ಞಾಪಿಸಿದ ಪ್ರಕಾರ ಜೀವನ ನಡೆಸಿದರೆ ಮಾತ್ರ ರಕ್ಷೆಯಿದೆ. ಬೇಕಾಬಿಟ್ಟಿಯಾಗಿ ಜೀವನ ನಡೆಸುವವರು ಪರಲೋಕದಲ್ಲಿ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾದೀತು ಎಂದು ಹೇಳಿದರು.
ಅಸೂಯೆ ನಮ್ಮ ಸಂತೋಷ ಹಾಗೂ ನೆಮ್ಮದಿ ಹಾಳು ಮಾಡುತ್ತದೆ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಉದಾತ್ತ ಮನೋಸ್ಥಿತಿ ನಮ್ಮದಾಗಬೇಕು. ಇದು ನೈಜ ಮುಸಲ್ಮಾನನ ಲಕ್ಷಣವಾಗಿದೆ. ಕಳೆದು ಹೋದ ಸಮಯ ವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಸಾರ್ಥಕ ಜೀವನ ನಡೆಸಲು ಪ್ರಯತ್ನಿಸಿ ಎಂದು ಹೇಳಿದರು.
ಸ್ಥಳೀಯ ಖತೀಬ್ ಸಯ್ಯದಲವಿ ತಂಙಳ್ ಮಾಸ್ತಿಕುಂಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇದಿಕೆ ಯಲ್ಲಿ ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ರೆಂಜಲಾಡಿ ಖತೀಬ್ ಅಬೂಬಕ್ಕರ್ ದಾರಿಮಿ, ಕೂಡುರಸ್ತೆ ಖತೀಬ್ ಯಾಕೂಬ್ ದಾರಿಮಿ, ತಿಂಗಳಾಡಿ ಖತೀಬ್ ರಶೀದ್ ದಾರಿಮಿ, ಸಂಟ್ಯಾರ್ ಖತೀಬ್ ಅಶ್ರಫ್ ದಾರಿಮಿ, ಸ್ಥಳೀಯ ಮುಅಲ್ಲಿಂ ಇಬ್ರಾಹಿಂ ಮುಸ್ಲಿಯಾರ್, ಸ್ಥಳೀಯ ಸದರ್ ಹಂಝ ದಾರಿಮಿ, ಬಿ.ಎಂ. ಉಮ್ಮರ್ ಕಟ್ಟತ್ತಾರು, ತಿಂಗಳಾಡಿ ಮಸೀದಿಯ ಅಧ್ಯಕ್ಷ ಯೂಸುಫ್ ಕಣ್ಣೂರು, ಓಲೆಮುಂಡೋವು ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಬಲ್ಕಾಡ್, ಉಪಾಧ್ಯಕ್ಷ ಇಬ್ರಾಹಿಂ ಎರಬೈಲು, ಉರೂಸ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಎರಬೈಲು, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಬ್ದುಲ್ ರಜಾಕ್ ಎರಬೈಲು ಉಪಸ್ಥಿತರಿದ್ದರು. ಸ್ಥಳೀಯ ಹಿಫ್ಳ್ ಉಸ್ತಾದ್ ಆಸಿಫ್ ನದ್ವಿ ಬಿಹಾರ್ ಖೀರಾಅತ್ ಪಠಿಸಿದರು. ಪಣೆಮಜಲು ಖತೀಬ್ ಅಬ್ಟಾಸ್ ಮದನಿ ಸ್ವಾಗತಿಸಿದರು. ಜಮಾಅತ್ ಕಮಿಟಿ ಹಾಗೂ ಉರೂಸ್ ಕಮಿಟಿಯವರು ಸಹಕರಿಸಿದರು.
ಪ್ರಸಿದ್ಧ ಝಿಯಾರತ್ ಕೇಂದ್ರ
ದಕ್ಷಿಣ ಭಾರತದ ಪ್ರಸಿದ್ಧ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿರುವ ಹಾಗೂ ಜಾತಿ ಮತ, ಧರ್ಮಗಳ ಭೇದವಿಲ್ಲದೆ ಸಾವಿರಾರು ಜನರು ಸಂದರ್ಶಿಸುತ್ತಿರುವ ಇತಿಹಾಸ ಪ್ರಸಿದ್ಧ ಓಲೆಮುಂಡೋವು ದರ್ಗಾ ಶರೀಫ್ ಮಖಾಂ ಉರೂಸ್ ಸಮಾರಂಭ ಫೆ. 20ರಿಂದ 25ರ ವರೆಗೆ ನಡೆಯಿತು.