Home ಧಾರ್ಮಿಕ ಸುದ್ದಿ ಒಡಿಯೂರು ಶ್ರೀ ದತ್ತಾಂಜನೇಯ ರಥೋತ್ಸವ ಸಂಪನ್ನ

ಒಡಿಯೂರು ಶ್ರೀ ದತ್ತಾಂಜನೇಯ ರಥೋತ್ಸವ ಸಂಪನ್ನ

207
0
SHARE
ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ದತ್ತಾಂಜನೇಯ ದೇವರ ಉತ್ಸವ ಮೂರ್ತಿ ಸಾಲಂಕೃತ ಒಡಿಯೂರು ರಥೋತ್ಸವ ಸಂಪನ್ನಗೊಂಡಿತು.

ಒಡಿಯೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ದತ್ತಾಂಜನೇಯ ದೇವರ ಉತ್ಸವ ಮೂರ್ತಿ, ನವರತ್ನಖಚಿತ ಸ್ವರ್ಣ ಪಾದುಕೆಗಳ ಸಾಲಂಕೃತ ಒಡಿಯೂರು ರಥೋತ್ಸವ ಎರಡು ಗ್ರಾಮಗಳಲ್ಲಿ ಸುಮಾರು 12 ಕಿ.ಮೀ. ಸಂಚರಿಸುವ ಮೂಲಕ ಶನಿವಾರ ರಾತ್ರಿ ಸಂಪನ್ನಗೊಂಡಿತು.

ಒಡಿಯೂರು ಶ್ರೀ ಗುರುದೇವದತ್ತ ಕ್ಷೇತ್ರದಲ್ಲಿ ಶ್ರೀ ದತ್ತಾಂಜನೇಯ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಉತ್ಸವ ಮೂರ್ತಿಗೆ ಕುರೋಮೂಲೆ ವೇ| ಮೂ| ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಕಲ ವೈದಿಕ ವಿಧಿ ವಿಧಾನ ನೆರವೇರಿಸಿ, ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಪೂಜೆ ನಡೆದ ಬಳಿಕ ರಥದಲ್ಲಿ ಆರೋಹಿಸಿ, ಮೆರವಣಿಗೆ ಆರಂಭವಾಯಿತು.

ಶ್ರೀಕ್ಷೇತ್ರದಿಂದ ಹೊರಟ ರಥಯಾತ್ರೆ ಮಿತ್ತನಡ್ಕ ಗ್ರಾಮ ದೈವಸ್ಥಾನ (ಮಿತ್ತನಡ್ಕ)ಕ್ಕೆ ಹೋಗಿ, ಕನ್ಯಾನದ ಶ್ರೀಗುರುದೇವ ಕಲ್ಯಾಣ ಮಂಟಪಕ್ಕೆ ತೆರಳಿ, ಅಲ್ಲಿ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆ ನಡೆದ ಬಳಿಕ ಕನ್ಯಾನ ಪೇಟೆ ಸವಾರಿಯಾಗಿ ಶ್ರೀಸಂಸ್ಥಾನಕ್ಕೆ ಹಿಂದಿರುಗಿತು. ಮಿತ್ತನಡ್ಕ ದೈವಸ್ಥಾನದ ಬಳಿಯಲ್ಲಿ ಹಿಂದೂ ಸೇವಾ ಸಮಿತಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ, ಕನ್ಯಾನದಲ್ಲಿ ತುಳುವೆರೆ ಉಡಲ್‌ ಜೋಡುಕಲ್ಲು ಇವರಿಂದ ‘ಶ್ರೀಮತಿ’ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.

ಚೆಂಡೆಮೇಳ, ಬ್ಯಾಂಡ್‌ ಸೆಟ್‌ ತಂಡ, ಬೊಂಬೆ ಪ್ರದರ್ಶನ ತಂಡ, ತಾಲೀಮು ಪ್ರದರ್ಶನ ತಂಡಗಳು ರಥೋತ್ಸವದ ಮೆರುಗು ಹೆಚ್ಚಿಸಿದವು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ರಾಜಸ್ಥಾನ ಶ್ರೀ ಗುರುದೇವ ಭಕ್ತವೃಂದ ಪ್ರಾಯೋಜಕತ್ವದ ಪ್ರಭಾವಳಿಗಳನ್ನೊಳಗೊಂಡ ಟ್ರಕ್ಕುಗಳು, ಸಿಡಿಮದ್ದು ಪ್ರದರ್ಶನ ಎಲ್ಲರ ಮನ ಸೆಳೆಯಿತು. ವಿವಿಧ ಕಡೆಗಳಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here