Home ಧಾರ್ಮಿಕ ಸುದ್ದಿ ನಿಧಾನವಾಗಿ ಏರುತ್ತಿದೆ ಸ್ಥಳೀಯ ಭಕ್ತರ ಸಂಖ್ಯೆ

ನಿಧಾನವಾಗಿ ಏರುತ್ತಿದೆ ಸ್ಥಳೀಯ ಭಕ್ತರ ಸಂಖ್ಯೆ

1525
0
SHARE
ಸದಾ ಭಕ್ತರಿಂದ ತುಂಬಿರುತ್ತಿದ್ದ ಕೊಲ್ಲೂರಿನ ಈಗಿನ ದೃಶ್ಯ.

ಉಡುಪಿ: ರಾಜ್ಯಾದ್ಯಂತ ಜೂ. 8ರಿಂದ ಧಾರ್ಮಿಕ ದತ್ತಿ ದೇವ ಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಸರಕಾರ ಅನುಮತಿ ನೀಡಿದ್ದು, ಭಕ್ತರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಹೆಚ್ಚಿನ ದೇಗುಲಗಳಲ್ಲಿ ಸ್ಥಳೀಯ ಭಕ್ತರು ಕಂಡು ಬರುತ್ತಿದ್ದಾರೆ. ಆದರೆ ದೂರದ ಊರಿನಿಂದ ಜನರು ಬರುತ್ತಿಲ್ಲ. ಆದ್ದರಿಂದ ಪ್ರಸಿದ್ಧ ದೇವಸ್ಥಾನಗಳಿಗಿಂತ ಸಾಮಾನ್ಯ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ.

ಜೂನ್‌ ಎರಡನೇ ವಾರದಲ್ಲಿ ದೇವಸ್ಥಾನಗಳು ತೆರೆದಾಗ ಭಕ್ತರ ಸಂಖ್ಯೆ ತುಂಬಾ ಕಡಿಮೆಯಿತ್ತು. ಅದಕ್ಕೆ ಹೋಲಿಸಿದರೆ ಈಗ ಹೆಚ್ಚಾಗಿದೆ. ಮಳೆಗಾಲದಲ್ಲಿ ಸಹಜವಾಗಿಯೇ ಜನರ ಸಂಚಾರ ಕಡಿಮೆ ಇರುತ್ತದೆ. ಮಳೆಗಾಲ ಮುಗಿದ ಬಳಿಕ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಉತ್ತಮ ಚೇತರಿಕೆ ಕಂಡುಬರಬಹುದು ಎಂಬ ಆಶಾವಾದವಿದೆ.

ಹಿಂದಿನಿಂದಲೂ ಪ್ರತಿ ಶುಕ್ರವಾರ, ಮಂಗಳವಾರ ದೇವಿ ದೇವಸ್ಥಾನಗಳಿಗೆ, ಸೋಮವಾರ ಶಿವ ದೇವಸ್ಥಾನಕ್ಕೆ, ಶನಿವಾರ ಆಂಜನೇಯನ ದೇವಸ್ಥಾನಗಳಿಗೆ ಭಕ್ತರು ಹೆಚ್ಚಾಗಿ ಹೋಗುತ್ತಿರುತ್ತಾರೆ. ಈಗಲೂ ಇಂತಹ ದೇವಸ್ಥಾನಗಳಿಗೆ ಇದೇ ಪದ್ಧತಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಕೊಲ್ಲೂರಿಗೆ ಕಡಿಮೆ
ಕೊಲ್ಲೂರಿಗೆ ಕೇರಳದ ಭಕ್ತರೇ ಹೆಚ್ಚು. ಈಗ ಅಲ್ಲಿಂದ ಭಕ್ತರು ಬರುತ್ತಿಲ್ಲ. ಕರ್ನಾಟಕದಲ್ಲಿರುವ ಕೇರಳ ಮೂಲದ ಭಕ್ತರು ಹಾಗೂ ಸ್ಥಳೀಯರು ಬರುತ್ತಿದ್ದಾರೆ. ಅವರು ಧ್ವಜಸ್ತಂಭದ ಬಳಿಯಿಂದಲೇ ದರ್ಶನ ಮಾಡುತ್ತಿದ್ದಾರೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಹೇಳುತ್ತಾರೆ.

ಮಾರಣಕಟ್ಟೆ, ಮಂದಾರ್ತಿ ದೇವಸ್ಥಾನ ಗಳಲ್ಲೂ ಮಂಗಳವಾರ, ಶುಕ್ರವಾರದಂಥ ದಿನಗಳಲ್ಲಿ ಸರಿಸುಮಾರು ಸಾವಿರದಷ್ಟು ಭಕ್ತರು ಬರುತ್ತಿದ್ದಾರೆ. ಆದರೆ ಯಾವ ದೇವಸ್ಥಾನದಲ್ಲೂ ಸೇವೆ, ತೀರ್ಥ- ಪ್ರಸಾದ, ಭೋಜನದ ವ್ಯವಸ್ಥೆ ಇಲ್ಲ.

ಮುಜರಾಯಿ ಇಲಾಖೆಯಿಂದ ಹೊರತಾದ ದೇವಸ್ಥಾನ ಹಾಗೂ ದೈವಸ್ಥಾನಗಳೂ ತೆರೆದಿದ್ದು, ಇಲ್ಲೂ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.

ಸ್ಥಳೀಯ ಭಕ್ತರು
ಹೊರ ರಾಜ್ಯ ಹಾಗೂ ಪರಸ್ಥಳದ ಭಕ್ತರು ಕಡಿಮೆ ಇದ್ದು, ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆಂದು ದೇವಸ್ಥಾನಗಳ ಮೂಲಗಳು ತಿಳಿಸುತ್ತಿವೆ.
ಸುಧಾಕರ್‌, ತಹಶೀಲ್ದಾರ್‌,
ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ, ಉಡುಪಿ ಜಿಲ್ಲೆ.

 

 

LEAVE A REPLY

Please enter your comment!
Please enter your name here