ನಿಡ್ಪಳ್ಳಿ : ನುಳಿಯಾಲಿನಲ್ಲಿ ಸಂಪೂರ್ಣ ನವೀಕೃತ ನೂತನ ನಾಗಸನ್ನಿಧಿ ಯಲ್ಲಿ ನಾಗದೇವರ ಪ್ರತಿಷ್ಠೆ, ನುಳಿಯಾಲು ತರವಾಡಿನ ಧರ್ಮದೈವ ಶ್ರೀ ಬೀರ್ಣಾಳ್ವ ಸ್ವಾಮಿಯ ಧರ್ಮಚಾವಡಿ ಹಾಗೂ ಶ್ರೀ ರಕ್ತೇಶ್ವರಿ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ನೂತನ ತರವಾಡಿನ ಗೃಹ ಪ್ರವೇಶ ಮತ್ತು ನೇಮ ಎ. 20ರಿಂದ 23ರ ವರೆಗೆ ನಡೆಯಲಿದ್ದು, ಶನಿವಾರ ಬೆಳಗ್ಗೆ ಗೊನೆ ಮುಹೂರ್ತ ನೆರವೇರಿತು.
ತರವಾಡಿನ ಯಜಮಾನ, ನಿವೃತ್ತ ಡಿವೈಎಸ್ಪಿ ನುಳಿಯಾಲು ಜಗನ್ನಾಥ ರೈ ತೆಂಗಿನ ಕಾಯಿ ಒಡೆಯುವ ಮೂಲಕ ಚಪ್ಪರ ಮುಹೂರ್ತ ನೆರವೇರಿಸಿದರು. ಪಾನಕ ಪೂಜೆಯ ಮೂಲಕ ಮುಡಿಪು ಸೇವೆ ನಡೆಸಿ, ತಿರುಪತಿ ಕ್ಷೇತ್ರ ದರ್ಶನಕ್ಕೆ ಹೋಗುವ ಕಾರ್ಯಕ್ರಮ ಕೈಗೊಳ್ಳಲಾಯಿತು. ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪೂರ್ವ ತಯಾರಿ ಬಗ್ಗೆ ಸಮಾಲೋಚನ ಸಭೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ನುಳಿಯಾಲು ತರವಾಡು ಟ್ರಸ್ಟ್ನ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.