Home ನಂಬಿಕೆ ಸುತ್ತಮುತ್ತ ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ 24 ಗುರುಗಳಲ್ಲಿ ಒಂಬತ್ತನೆಯ ಗುರು: ಹೆಬ್ಬಾವು

ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ 24 ಗುರುಗಳಲ್ಲಿ ಒಂಬತ್ತನೆಯ ಗುರು: ಹೆಬ್ಬಾವು

6379
0
SHARE

ಮನುಷ್ಯನು ಯಾವಾಗಲೂ ಇಂದ್ರಿಯಗಳ ದಾಸನೇ ಆಗಿರುತ್ತಾನೆ. ಒಂದಲ್ಲ ಒಂದು ರೀತಿಯಲ್ಲಿ ಇಂದ್ರಿಯಗಳ ಸೆಳತಕ್ಕೆ ಒಳಗಾಗಿ ಪಾಪಕರ್ಮಗಳಲ್ಲಿ ತಿಳಿದೋ ತಿಳಿಯದೆಯೋ ತೊಡಗಿಕೊಳ್ಳುತ್ತಾನೆ. ನಾವು ಸೇವಿಸುವ ಆಹಾರದಿಂದ ಹಿಡಿದು ಪ್ರಾಪಂಚಿಕವಾಗಿ ಅನುಭವಿಸುವ ಎಲ್ಲ ಸುಖಭೋಗಗಳು ಇಂದ್ರಿಯಗಳಿಂದ ನಿಯಂತ್ರಿಸಲ್ಪಡುತ್ತವೆ. ನಾಲಿಗೆ ರುಚಿಯನ್ನು ಬಯಸುತ್ತದೆ. ಆ ರುಚಿಗಾಗಿ ಬಗೆಬಗೆಯ ತಿನಿಸುಗಳನ್ನು ಹುಡುಕುವುದು ಮನಸ್ಸು. ಇನ್ನು ಎಷ್ಟು ತಿನ್ನಬೇಕು ಎಂಬುದನ್ನೂ ಹಸಿವೆಗಿಂತಲೂ ಹೆಚ್ಚಾಗಿ ರುಚಿರುಚಿ ಖಾದ್ಯಗಳೇ ನಿರ್ಣಯಿಸಿಬಿಡುತ್ತವೆ. ಹಾಗಾಗಿ ಮನುಷ್ಯನಿಗೆ ಕೆಲವೊಮ್ಮೆ ತಿಂದಷ್ಟೂ ತೃಪ್ತಿಯಿಲ್ಲ. ಹಾಗಾಗಿ ಆಹಾರವೂ ನಮ್ಮ ದುಃಖಕ್ಕೆ ಮೂಲವಾಗುವ ಸಂಗತಿಗಳಲ್ಲೊಂದು. ಆಹಾರ ಸೇವನೆಯೂ ಒಂದು ಬಗೆಯ ಸಂಸ್ಕಾರವೇ. ಈ ಸಂಸ್ಕಾರ ಆರೋಗ್ಯಕ್ಕೂ ಮನಸ್ಸಿನ ನೆಮ್ಮದಿಗೂ ಪರೋಕ್ಷವಾಗಿ ಕಾರಣವಾಗುವಂತದ್ದು.

ಶ್ರೀಮದ್ಭಾಗವತದಲ್ಲಿ ನಮಗೆ ಜೀವನಕ್ಕೆ ಅಗತ್ಯವಿರುವ ಜ್ಞಾನವನ್ನು ತಿಳಿಹೇಳುತ್ತಾ ಹೆಬ್ಬಾವಿನ ಉದಾಹರಣೆಯನ್ನು ಕೊಡಲಾಗಿದೆ. ಹೆಬ್ಬಾವಿನಿಂದಲೂ ನಾವು ಕಲಿಯುವುದಕ್ಕಿದೆ ಎನ್ನುತ್ತದೆ ಶ್ರೀಮದ್ಭಾಗವತ. ಮುಖ್ಯವಾಗಿ ಆಹಾರ ಸೇವನೆಯನ್ನು ಅಂದರೆ ಆಹಾರ ಸೇವಿಸುವಲ್ಲಿನ ನಿಯಂತ್ರಣ ಶಕ್ತಿಯನ್ನು ಹೆಬ್ಬಾವಿನ ಆಹಾರ ಸೇವನಾ ವಿಧಾನವನ್ನು ನೋಡಿ ತಿಳಿದುಕೊಳ್ಳಬೇಕು ಎಂದರ್ಥ. ಹೆಬ್ಬಾವು ತಾನಾಗಿಯೇ ದೊರೆತ ಆಹಾರವನ್ನು ತಿಂದು ಮಲಗುತ್ತದಂತೆ. ಅದು ಸಿಕ್ಕಿದ ಆಹಾರದಲ್ಲಿಯೇ ತೃಪ್ತಿಪಟ್ಟುಕೊಳ್ಳುವದಲ್ಲದೆ, ಆಹಾರವಿಲ್ಲದೆ ಕೆಲವು ದಿನಗಳನ್ನು ಕಳೆಯಬಲ್ಲದು. ನಾವೂ ಕೂಡ ಅದರಂತೆಯೇ ತಾನಾಗಿ ದೊರೆತ ಆಹಾರವನ್ನು ಮಾತ್ರ ಸೇವಿಸಬೇಕು. ಇದು ಯೋಗಿಯಾದವನು ಮುಖ್ಯವಾಗಿ ಅಳವಡಿಸಿಕೊಳ್ಳಲೇಬೇಕಾದ ನಿಯಮ. ಸಾಧಾರಣ ಮಾನವರೂ ಇದನ್ನು ಅನುಸರಿಸಿದರೆ ಮುಕ್ತಿ ಸಾಧನೆ ಸುಲಭ ಸಾಧ್ಯ. ದೊರಕಿದ ಆಹಾರವು ಮಧುರವಾಗಿರಲೀ, ನೀರಸವಾಗಿರಲೀ, ಹೆಚ್ಚಿರಲೀ ಅಥವಾ ಕಡಮೆಯಿರಲಿ ಅಷ್ಟನ್ನೇ ತೃಪ್ತಿಯಿಂದ ಸೇವಿಸಿ ಬದುಕಬೇಕು. ಆಗ ದೇಹವನ್ನೂ ಮನಸ್ಸನ್ನೂ ನಿಯಂತ್ರಿಸುವ ಶಕ್ತಿ ಹೆಚ್ಚುತ್ತ ಹೋಗುತ್ತದೆ. ಅತಿಯಾದ ಆಹಾರ, ರುಚಿಯ ವ್ಯಾಮೋಹಗಳ ಬಗ್ಗೆ ಉದಾಸೀನ ತಾಳುವುದೇ ಒಳ್ಳೆಯದು.

ಆಹಾರ ದೇಹವನ್ನೂ ಮನಸ್ಸನ್ನೂ ನಿಯಂತ್ರಿಸುವ ಶಕ್ತಿ ಹೊಂದಿದೆ. ಆಹಾರ ಸೇವನೆಯೂ ಸಾತ್ತ್ವಿಕವಾಗಿದ್ದಾಗ ಸತ್ತ್ವಗುಣಗಳನ್ನು ಬೆಳಸಿಕೊಳ್ಳಲು ಸಾಧ್ಯ. ಆಹಾರದ ಬಗ್ಗೆ ಆದಷ್ಟು ಜಡತ್ವ ಇದ್ದರೆ ಒಳ್ಳೆಯದು. ಬದುಕು ಸಾತ್ತ್ವಿಕವಾಗಿ ಗುಣಾತೀತವಾಗಲು ಯೋಗಿಯಂತೆಯೇ ಕೆಲವಷ್ಟು ನಿಯಮಗಳನ್ನು ಪಾಲಿಸಿಕೊಂಡು ಜೀವಿಸಬೇಕು. ಬೇಕು-ಬೇಡಗಳು ನಿರ್ಧಿಷ್ಟವಾದ ಕಾರಣವನ್ನೂ ಹೊಂದಿರಬೇಕಲ್ಲದೆ, ಕೆಲವೊಮ್ಮೆ ಬೇಕೇಬೇಕು ಎಂದೆನಿಸಿದ್ದನ್ನೂ ತ್ಯಜಿಸಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಇನ್ನೂ ಬೇಕೂ ಎಂತಿದ್ದರೂ ಇದ್ದದುರಲ್ಲಿಯೇ ತೃಪ್ತಿಪಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬದುಕು ಕೂಡ ಒಂದು ಬಗೆಯ ತಪಸ್ಸೇ. ಹೆಬ್ಬಾವಿನಂತೆ ಹಸಿವೆಯನ್ನು ನಿಯಂತ್ರಿಸುವ ಶಕ್ತಿಯನ್ನು ವರ್ಧಿಸಿಕೊಳ್ಳಬೇಕು. ಈ ನಿಯಂತ್ರಣ ಎಂಬುದು ಒಂದು ಸಾಧನೆ. ಇಲ್ಲಿ ಗೆದ್ದವನು ಹಸಿವೆಯನ್ನೂ ಗೆಲ್ಲುತ್ತಾನೆ. ಹಸಿವೆಯನ್ನು ಗೆದ್ದವನಿಗೆ ಜಗತ್ತನ್ನು ಗೆಲ್ಲುವುದು ಸುಲಭ!

ಇಲ್ಲಿ ಮುಖ್ಯವಾಗಿ ಕಲಿಯಬೇಕಾದ ಪಾಠವೆಂದರೆ ಅಗತ್ಯತೆಗಳ ಹೊಂದಾಣಿಕೆ. ಇರುವುದರಲ್ಲೇ ತೃಪ್ತನಾಗುವ ಮನೋಭಾವ ಹುಟ್ಟಬೇಕು. ಮತ್ತು ಇರುವುದನ್ನು ಹೆಚ್ಚುಕಾಲ ಉಪಯೋಗಿಸುವ ಜಾಣ್ಮೆ ಇರಬೇಕು. ಇಲ್ಲ ಎಂದುಕೊಂಡು ಅತೃಪ್ತಿಯಿಂದ ಅದೇ ಚಿಂತೆಯಲ್ಲಿರದೆ ತ್ಯಾಗಮಯಿಯೂ ಆದಾಗ ಮಾತ್ರ ಮನಸ್ಸು ಹಿತವಾದ ಆನಂದವನ್ನು ಹೊಂದುತ್ತದೆ.

..ಮುಂದುವರಿಯುವುದು.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here