Home ಧಾರ್ಮಿಕ ಸುದ್ದಿ ನಿಡ್ಪಳ್ಳಿ: ಮತ್ತೆ ತಲೆ ಎತ್ತಿತು ಕಾಲಗರ್ಭದಲ್ಲಿ ಮರೆಯಾಗಿದ್ದ ದೇಗುಲ

ನಿಡ್ಪಳ್ಳಿ: ಮತ್ತೆ ತಲೆ ಎತ್ತಿತು ಕಾಲಗರ್ಭದಲ್ಲಿ ಮರೆಯಾಗಿದ್ದ ದೇಗುಲ

1893
0
SHARE

ಪುತ್ತೂರು : ಇತಿಹಾಸದ ಕಾಲಚಕ್ರದಲ್ಲಿ ನಲುಗಿ ಹೋಗಿದ್ದ ದೇವಸ್ಥಾನವೊಂದು ಮತ್ತೆ ಮೈದಳೆದು ನಿಂತಿದೆ. ಊರವರ ಮೈಮನಗಳಲ್ಲಿ ಹೊಸ ಚೈತನ್ಯ ಪ್ರವಹಿಸುತ್ತಿದ್ದು, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ನಿಡ್ಪಳ್ಳಿ ಗ್ರಾಮದಲ್ಲಿ ದೇವಸ್ಥಾನ ಇತ್ತೆಂಬ ಮಾತಿಗೆ ನಿದರ್ಶನ- ಕೆಲ ವರ್ಷಗಳ ಹಿಂದೆ ಸಿಕ್ಕಿರುವ ದೇವಿ ವಿಗ್ರಹದ ಅವಶೇಷ ಹಾಗೂ ಪಾಣಿಪೀಠ. ಹಲವು ಸಮಯದಿಂದ ಈ ಪಾಣಿಪೀಠದ ಮೇಲ್ಗಡೆ ದೇವಿ ವಿಗ್ರಹದ ಅವಶೇಷಗಳನ್ನು ಬಾಲಾಲಯದಲ್ಲಿಟ್ಟು ಪೂಜೆ ನಡೆಸಲಾಗುತ್ತಿದೆ. ಇದೀಗ ಶ್ರೀ ಶಾಂತದುರ್ಗಾ ದೇವಿಗೆ ಆಲಯ ಸಿದ್ಧ ವಾಗುತ್ತಿದ್ದು, ಮಾರ್ಚ್‌ 8ರಿಂದ 12ರ ವರೆಗೆ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ನಡೆಯಲಿದೆ.

ಪಡುಮಲೆ, ನಿಡ³ಳ್ಳಿ, ಪಾಣಾಜೆ, ಕದಿಕೆ ಚಾವಡಿ ಪರಸ್ಪರ ಸಂಬಂಧ ಹೊಂದಿವೆ. ಪೂರ್ವ ಕಾಲದಲ್ಲಿ ಪಡುಮಲೆ ಉಳ್ಳಾಕುಲು ಜಾತ್ರೆಯ ಬಳಿಕ ನಿಡ್ಪಳ್ಳಿಯಲ್ಲಿ, ಅನಂತರ ಪಾಣಾಜೆ ಇರ್ದೆಯಲ್ಲಿ, ಕದಿಕೆ ಚಾವಡಿಯಲ್ಲಿ ಜಾತ್ರೆ ನಡೆಯುತ್ತಿತ್ತು.

2003ರಲ್ಲಿ ನಿಡ³ಳ್ಳಿಗುತ್ತು ಚಾವಡಿಯ ಪ್ರಮೋದ್‌ ಆರಿಗ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ, ಗಣೇಶ್‌ ರೈ ಆನಾಜೆ ಅಧ್ಯಕ್ಷರಾಗಿದ್ದಾಗ ದೇವಸ್ಥಾನದ ಶೇ. 30ರಷ್ಟು ಕೆಲಸ ನಡೆದಿತ್ತು. 2013ರಲ್ಲಿ ಕೆ.ಎನ್‌. ಕೃಷ್ಣ ಶೆಟ್ಟಿ ನುಳಿಯಾಲು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷತೆಯಲ್ಲಿ ಶೇ. 60ರಷ್ಟು ಕಾಮಗಾರಿ ನಡೆಯಿತು.

ಹೀಗೆ ದೇವಸ್ಥಾನದ ಒಟ್ಟು ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಉಳಿದ ಕಾಮಗಾರಿಗಳು ಅಂತಿಮ ಹಂತ ತಲುಪಿವೆ. 2018ರಲ್ಲಿ ಪದ್ಮನಾಭ ಬೋರ್ಕರ್‌ ಬ್ರಹ್ಮರಗುಂಡ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಉದ್ಯಮಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅವರು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮೇಲೆ ಇವರ ಸಾರಥ್ಯದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ದೇಗುಲದ ಹಿನ್ನೆಲೆ ದೇವಸ್ಥಾನ ಯಾವ ಕಾಲದಲ್ಲಿ ಇತ್ತೆಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇಲ್ಲಿನ ದೈವಸ್ಥಾನದ ವಾರ್ಷಿಕ ನೇಮ 45 ವರ್ಷಗಳ ಹಿಂದೆ ನಡೆಯುತ್ತಿತ್ತು.
ಉಳುವವನೇ ಭೂಮಿಯ ಒಡೆಯ ಕಂದಾಯ ಮಸೂದೆ ಜಾರಿಯಾದ ಬಳಿಕ ಆಗ ವಾರ್ಷಿಕ ನೇಮೋತ್ಸವ ನಡೆಸುತ್ತಿದ್ದ ಆರಿಗ ಮನೆತನದ ಜಾಗ ಚದುರಿ ಹೋಯಿತು. ಇದರಿಂದಾಗಿ ನೇಮದ ಕಾರ್ಯಗಳು ಸ್ಥಗಿತಗೊಂಡವು. 1972ರಲ್ಲಿ ಕೊನೆಯ ನೇಮ ನಡೆದಿತ್ತು. ದೈವಸ್ಥಾನದ ಕಾರ್ಯಗಳು ಮತ್ತೂಮ್ಮೆ ನಡೆಯಬೇಕು ಎಂಬ ಸಂಕಲ್ಪದಿಂದ ಗ್ರಾಮಸ್ಥರು 2003ರಲ್ಲಿ ಗುತ್ತು ಚಾವಡಿಯಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿಟ್ಟರು. ಈ ಸಂದರ್ಭ ದೇವಸ್ಥಾನದ ಇತ್ತು ಎಂದು ಕಂಡುಬಂದಿತು.

ಮಾ. 8ರಿಂದ 12ರವರೆಗೆ ಪ್ರತಿಷ್ಠಾ ಅಷ್ಟಬಂಧ ಮಾ. 8ರಿಂದ 12ರವರೆಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಶ್ರೀ ಶಾಂತಾದುರ್ಗಾ ದೇವಿ, ಶ್ರೀ ಕಿನ್ನಿಮಾಣಿ, ಪೂಮಾಣಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರತಿದಿನ ವೈವಿಧ್ಯಮಯ, ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ.

LEAVE A REPLY

Please enter your comment!
Please enter your name here