ಹೊಸಬೆಟ್ಟು : ನವವೃಂದಾವನ ಸೇವಾ ಪ್ರತಿಷ್ಠಾನ, ಗುರು ರಾಘವೇಂದ್ರ ಮಠ ಇಲ್ಲಿ ಶ್ರೀ ಗುರು ಸಾರ್ವಭೌಮರ 347ನೇ ಆರಾಧನಾ ಮಹೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರ ಬೆಳಗ್ಗೆ ಭಜನೆ, ಸಂಕೀರ್ತನೆ ಬಳಿಕ ಅಗರಿ ಭಾಗವತರ ಶೈಲಿಯಲ್ಲಿ ಯಕ್ಷಗಾನ ಹಾಡುಗಾರಿಕೆ ಜರಗಿತು. ಅಗರಿ ಶೈಲಿಯನ್ನು ಉಳಿಸಿ ಬೆಳೆಸಿ ಕಲಿಸುವ ಮೂಲಕ ಮುಂದಿನ ತಲೆ ಮಾರಿಗೂ ಯಕ್ಷಗಾನ ರಂಗದ ಅನನ್ಯ ಶೈಲಿ ಉಳಿಸಲು ಪ್ರಥಮ ಕಾರ್ಯಕ್ರಮ ಮಠದಲ್ಲಿ ಆಯೋಜಿಸಲಾಗಿತ್ತು.
ಅಗರಿ ರಘುರಾಮ ಭಾಗವತ ಹಾಗೂ ಸುಬ್ರಾಯ ಭಟ್ ಗಜಂತೋಡಿ ಭಾಗವತಿಕೆಯಲ್ಲಿದ್ದರೆ, ಮದ್ದಳೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ ಸಹಕರಿ ಸಿದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಬಳಿಕ ಎಚ್. ಅನಂತಸತ್ಯ ಸಂಜೀವ ತಂಡದಿಂದ ಸಿತಾರ್ ವಾದನ, ಸುಧೀಕ್ಷಾ ಆರ್.ಸುರತ್ಕಲ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಆ. 28ರಂದು ಬೆಳಗ್ಗೆ ಭಜನ ಕಾರ್ಯಕ್ರಮ, ರವೀಂದ್ರ ಪ್ರಭು ಬಳಗದಿಂದ ಭಕ್ತಿ ಸಂಗೀತ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾಘವೇಂದ್ರ ಸಂಚಾರಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ತಾಳಮದ್ದಳೆ ನೂತನ ಪ್ರಸಂಗ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ಜರಗಲಿದೆ.