ಮಹಾನಗರ: ಸಂತ ಆಂತೋನಿಯವರ ಪುಣ್ಯಸ್ಮರಣಿಕೆಗಳ ಮಹೋತ್ಸವಕ್ಕೆ ತಯಾರಿಯಾಗಿ ಮೂರನೇ ದಿನದ ಬಲಿಪೂಜೆಯನ್ನು ಮಿಲಾಗ್ರಿಸ್ ದೇವಾಲಯದಲ್ಲಿ ಮೂಲ್ಕಿ ಡಿವೈನ್ ಕೇಂದ್ರದ ಪ್ರವಚನಕಾರ ವಂ| ಅನಿಲ್ ಕಿರಣ್ ಫೆರ್ನಾಂಡಿಸ್ ಅರ್ಪಿಸಿ ವ್ಯಾಧಿಸ್ಥರಿಗಾಗಿ ಪ್ರಾರ್ಥಿಸಲಾಯಿತು.
ಯೇಸುಸ್ವಾಮಿ ತಮ್ಮ ಸೇವೆಯ ಅವಧಿಯಲ್ಲಿ ಹಲವರನ್ನು ಮುಟ್ಟಿ ಗುಣಪಡಿಸಿದರಲ್ಲದೆ ತಮ್ಮ ಅನುಯಾಯಿಗಳಿಗೆ ಗುಣಪಡಿಸುವ ಶಕ್ತಿಯನ್ನು ದಯಪಾಲಿಸಿದ್ದಾರೆ. ಸಂತ ಅಂತೋನಿಯವರು ತಮ್ಮ ಸೇವೆಯಲ್ಲಿ ಹಲವಾರು ಜನರನ್ನು ಯೇಸು ನಾಮದಿಂದ ಗುಣಪಡಿಸಿದರು. ಇವತ್ತಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಸಾಧ್ಯವಾದುದನ್ನು ಭಕ್ತರು ಸಂತ ಅಂತೋನಿಯವರಲ್ಲಿ ಬೇಡಿ ಗುಣಮುಖರಾಗುತ್ತಾರೆ ಎಂದು ಅವರು ಹೇಳಿದರು.
ಬಲಿಪೂಜೆಯ ಕೊನೆಗೆ ವ್ಯಾಧಿಸ್ತರಿಗಾಗಿ ಯೇಸುಸ್ವಾಮಿಯ ಗುಣಪಡಿಸುವ ಶಕ್ತಿಯನ್ನು ಕೋರಿ ಜನರೆಲ್ಲರ ಮೇಲೆ ಪವಿತ್ರ ಜಲವನ್ನು ಪ್ರೋಕ್ಷಿಸಿದರು.
ವಂ| ಫ್ರಾನ್ಸಿಸ್ ಡಿ’ಸೋಜಾ ಸಂಸ್ಥೆಯ ನಿರ್ದೇಶಕರು ನವೇನ ಪ್ರಾರ್ಥನೆ ನಡೆಸಿಕೊಟ್ಟರು. ಬಲಿಪೂಜೆಯಲ್ಲಿ ಭಾಗವಹಿಸಲು ನೆರವು ನೀಡಿದ ಸಂತ ಜುಜೆ ವಾಜ್ ದೇವಾಲಯ ಮುಡಿಪು ಗಾಯನ ಮಂಡಳಿಯ ಸದಸ್ಯರಿಗೆ ವಂದಿಸಿದರು. ನೂರಾರು ಭಕ್ತರು ಬಲಿಪೂಜೆ ಮತ್ತು ನವೇನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.