Home ನಂಬಿಕೆ ಸುತ್ತಮುತ್ತ ನವರಾತ್ರಿ ವಿಶೇಷ; ದುರ್ಗೆಯ ಕೂಷ್ಮಾಂಡಾ ಅವತಾರದ ಹಿನ್ನೆಲೆ ಏನು?

ನವರಾತ್ರಿ ವಿಶೇಷ; ದುರ್ಗೆಯ ಕೂಷ್ಮಾಂಡಾ ಅವತಾರದ ಹಿನ್ನೆಲೆ ಏನು?

2131
0
SHARE

ನವರಾತ್ರಿಯೆಂಬ ದೇವಿಯ ಶುಭಾಶೀರ್ವಾದವನ್ನು ಪಡೆಯುವ ನಾಲ್ಕನೆಯ ದಿನವಾದ ಇಂದು ದುರ್ಗೆಯ ಕೂಷ್ಮಾಂಡಾ ಅಥವಾ ಕುಷ್ಮಾಂಡಿನಿ ಅವತಾರವನ್ನು ಪೂಜಿಸುತ್ತೇವೆ. ಅಷ್ಟಭುಜೆಯಾಗಿರುವ ಕೂಷ್ಮಾಂಡಾ ದೇವಿಯು ಮೃಗವಾಹನೆಯಾಗಿ ಸೃಷ್ಟಿ ಸ್ಥಿತಿ ಲಯ ಈ ಮೂರನ್ನೂ ನಿಯಂತ್ರಿಸುವವಳಾಗಿದ್ದಾಳೆ. ಕೂಷ್ಮಾಂಡ ಎಂಬುದನ್ನು ಅಂಡರೂಪವನ್ನು ಪುನಃಪುನಃ ಹೊಂದುವುದು ಎಂದು ಅರ್ಥೈಸಲಾಗಿದೆ. ಈ ಅಂಡರೂಪದಿಂದ ಬಿಡುಗಡೆಗೊಳಿಸುವವಳೇ ಕೂಷ್ಮಾಂಡಾ ಎಂದು ಪ್ರಾಜ್ಞರು ಹೇಳಿರುತ್ತಾರೆ.

ಮಾನವನ ಜೀವನದ ಸಿದ್ಧಾಂತವು ದೇವರನ್ನು ಆಧರಿಸಿದೆ. ಆದರೆ ಆ ದೇವರು ಯಾರು? ಏನು? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲೇ ಕಾಲಕಳೆಯುತ್ತೇವೆ. ಕೂಷ್ಮಾಂಡ ಎಂಬ ಕಲ್ಪನೆಯೇ ಬದುಕಿನ ಬೆನ್ನೆಲುಬಾಗಿ ಸ್ವೀಕರಿಸಿ ನಿಯಮದ ಚೌಕಟ್ಟಿನಲ್ಲಿ ಬದುಕಬೇಕು. ಅಂಡ ಎಂಬುದು ಇಲ್ಲಿ ಜನ್ಮದ ಪ್ರತಿರೂಪವಾಗಿ ಬಳಕೆಯಾಗಿದೆ. ಅದೊಂದು ಜೀವಕೋಶದ ಸಂಕೇತ. ಮಾನವ ಜನ್ಮ ದೊಡ್ಡದು ಎಂಬ ಮಾತಿದೆ. ಆದರೆ ಮಾನವ ದಾನವನಾದರೆ ಜನ್ಮವು ಪುನರ್ಜನ್ಮಕ್ಕೆ ಸಿದ್ಧವಾದಂತೆ. ಮನುಷ್ಯ ಎಷ್ಟೇ ಆಸೆಗಳನ್ನು ಹೊಂದಿದ್ದರೂ ಕೊನೆಯಲ್ಲಿ ಬಯಸುವುದು ಮುಕ್ತಿಯನ್ನು. ಈ ಮುಕ್ತಿಯನ್ನು ಹೊಂದಬೇಕಾದರೆ ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಬೇಕೇ ಹೊರತು ದುರ್ಮಾರ್ಗವನ್ನು ತುಳಿಯಬಾರದು. ಆಗ ಮಾತ್ರ ಈ ಅಂಡದಿಂದ ಬಿಡುಗಡೆ.

ಗ್ರಹಗಳನ್ನೊಮ್ಮೆ ನೋಡಿ. ಭೂಮಿಯೂ ಸೇರಿದಂತೆ ಅದರ ರೂಪ ಗೋಲಾಕೃತಿ. ಅಂಡದ ಪ್ರತಿರೂಪವೇ. ಸೌರಮಂಡಲವನ್ನು ಹಿಡಿತದಲ್ಲಿಟ್ಟುಕೊಂಡವಳು ಈ ದೇವಿ. ಸೌರಮಂಡಲದ ಬಗೆಗೆ ಗುರುತ್ವಾಕರ್ಷಣೆ ಇನ್ನಿತರ ವೈಜ್ಞಾನಿಕ ಕಾರಣವನ್ನೇ ವಿಜ್ಞಾನ ನಮಗೆ ತಿಳಿಸಿಕೊಡುತ್ತದೆಯಾದರೂ ಅಲ್ಲಿಯೂ ಪ್ರಶ್ನೆ ಉದ್ಭವಿಸುತ್ತದೆ. ಪ್ರಮಾಣ ಮತ್ತು ಪರಿಣಾಮದಲ್ಲಿ ಕಾಣದ ಶಕ್ತಿಯ ಕೈಯಿದೆ. ಜಲಜನಕದ ಎರಡು ಭಾಗ ಮತ್ತು ಆಮ್ಲಜನಕದ ಒಂದು ಭಾಗ ಸೇರಿದರೆ ನೀರು ಸೃಷ್ಟಿಯಾಗುತ್ತದೆ. ಈ ಮೂಲಧಾತುಗಳ ಆ ಪ್ರಮಾಣವನ್ನು ನಿರ್ಧರಿಸಿದ್ದು ಪ್ರಕೃತಿ. ಈ ಮೂಲಧಾತುಗಳಿಗೆ ಕಾರಣ ಪ್ರಕೃತಿ. ಪ್ರಕೃತಿಯೆಂದರೆ ಆದಿಮಾಯೆ. ಅಲ್ಲಿಗೆ ಉತ್ತರ ಕೊನೆಗೆ ಬಂದು ನಿಲ್ಲುವುದು ಕಾಣದ ಶಕ್ತಿ ಎಂದೇ ಅಲ್ಲವೇ?

ಕಣವನ್ನು ಒಡೆದಷ್ಟೂ ಕಣವಾಗುತ್ತಲೇ ಹೋಗುತ್ತದೆಯೇ ಹೊರತು ಅದು ಏನೆಂಬುದು ಅರಿಯಲಾಗದು. ಅಂತೆಯೇ ದೈವೀಶಕ್ತಿಗಳು ಕೂಡ. ವೃತ್ತದ ಮಧ್ಯದಲ್ಲೊಂದು ಕೇಂದ್ರಬಿಂದುವಿದೆ. ಅದು ಇಡೀ ವೃತ್ತದ ಪರಿಧಿಯನ್ನು ನಿಯಂತ್ರಿಸುತ್ತಿದೆ. ಅದನ್ನು ಹಾಳು ಮಾಡುವ ಕಾರ್ಯವನ್ನು ನಾವು ಎಸಗಬಾರದು. ಆರಾಧನೆ ಪೂಜೆಗಳೆಲ್ಲವೂ ಆತ್ಮದ ಶುದ್ಧೀಕರಣದ ಪ್ರಕ್ರಿಯೆ. ಕೂಷ್ಮಾಂಡಾ ದೇವಿ ನಮ್ಮ ಪರಿಪಾಲಕಳು. ತನ್ನ ಮಗುವಿಗೆ ಏನನ್ನು ಕೊಡಬೇಕೆಂಬುದು ತಾಯಿಯಾದವಳಿಗೆ ಗೊತ್ತು. ಕೂಷ್ಮಾಂಡಾ ನಮ್ಮೆಲ್ಲರ ತಾಯಿ. ಅವಳಿಗೆ ಮಕ್ಕಳನ್ನು ಮುದ್ದಿಸುವುದೂ ಗೊತ್ತು; ತಪ್ಪಿನಡೆದರೆ ಶಿಕ್ಷಿಸುವುದೂ ಗೊತ್ತು. ಇವಳು ನಮ್ಮ ಬುದ್ಧಿಯನ್ನು ನಿಯಂತ್ರಿಸುವವಳೂ ಆಗಿದ್ದಾಳೆ.

ಕೂಷ್ಮಾಂಡಾ ದೇವಿಯು ಜಗತ್ತಿನ ಸಕಲರಿಗೂ ಸದ್ಬುದ್ಧಿಯನ್ನು ನೀಡಲಿ. ಶಾಂತಿ ನೆಮ್ಮದಿಯ ಬದುಕು ಎಲ್ಲರದಾಗಲಿ. ಮತ್ತು ಮೋಕ್ಷವನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದರ ಜೊತೆಗೆ ಒಬ್ಬಳು ದೇವಿಯ ಮಕ್ಕಳಾಗಿ ನಾವು ಹೇಗೆ ಬದುಕು ಬೇಕೆಂಬುದನ್ನು ಅವಲೋಕಿಸೋಣ, ಅಳವಡಿಸಿಕೊಳ್ಳೋಣ. ಸತ್ಕರ್ಮಗಳಲ್ಲಿ, ಸನ್ಮಾರ್ಗದಲ್ಲಿಯೇ ನಮ್ಮನ್ನು ತೊಡಗಿಸಿ ಕೊಳ್ಳೋಣ ಎಂಬುದು ಆಶಯ.
ಮುಂದುವರಿಯುವುದು……

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here