Home ನಂಬಿಕೆ ಸುತ್ತಮುತ್ತ ನವರಾತ್ರಿ ವಿಶೇಷ; ದುರ್ಗಾಷ್ಟಮಿ ದಿನ ಮಹಾಗೌರಿ ಆರಾಧನೆ

ನವರಾತ್ರಿ ವಿಶೇಷ; ದುರ್ಗಾಷ್ಟಮಿ ದಿನ ಮಹಾಗೌರಿ ಆರಾಧನೆ

360
0
SHARE

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ|

ಮಹಾಗೌರಿ ಶುಭಂ ದಧ್ಯಾನ್ಮಹಾದೇವ ಪ್ರಮೋದದಾ ||

ಒಂಬತ್ತು ರಾತ್ರಿಗಳಲ್ಲಿ ಎಂಟನೆಯ ದಿನ ಪೂಜಿಸಲ್ಪಡುವ ದೇವತೆಯೇ ಈ ಮಹಾಗೌರಿ. ತೇಜಸ್ಸನ್ನು ಪ್ರಾಪ್ತಿ ಮಾಡಿಕೊಂಡವಳೇ ಮಹಾಗೌರಿ ಎನ್ನಲಾಗಿದೆ. ಗೌರ ಎಂದರೆ ತೇಜಸ್ಸು ಎಂದರ್ಥ. ಮಹತ್ತರವಾದ ತೇಜಸ್ಸನ್ನು ಹೊಂದಿದವಳೂ ಆ ತೇಜಸ್ಸಿನಿಂದಲೇ ಶಿಷ್ಟರನ್ನು ಪಾಲಿಸುವ ಕಾರ್ಯವನ್ನು ಮಾಡುವವಳೇ ಈ ಮಹಾಗೌರಿ. ಮಹಾಗೌರಿಯನ್ನು ಶಿವೆ ಎಂಬುದಾಗಿಯೂ ಕರೆಯುತ್ತಾರೆ. ಈಕೆ ಚತುರ್ಭುಜೆಯಾಗಿದ್ದು ತ್ರಿಶೂಲ ಮತ್ತು ಡಮರು ಇವಳ ಕೈಯಲ್ಲಿದೆ. ಶುಭ್ರವಾದ ಬಿಳಿಯ ಸೀರೆಯನ್ನು ಈಕೆ ಧರಿಸಿದ್ದಾಳೆ. ಶ್ವೇತವೃಷಭ ಇವಳ ವಾಹನ. ಶಾಂತಸ್ವರೂಪಿಣಿಯಾದ ಮಹಾಗೌರಿಯನ್ನು ದುರ್ಗಾಷ್ಟಮಿಯದಿನ ಪೂಜಿಸಿದರೆ ವಿಶೇಷ ಫಲ ಲಭಿಸುವುದು.

ಮಹಾಗೌರಿಯನ್ನು ಪೂಜಿಸುವುದರಿಂದ ದುಃಖ ಸಂತಾಪಗಳು ದೂರವಾಗುತ್ತವೆ. ಶೀಘ್ರಫಲದಾಯಕಿ ಎಂದೇ ಪ್ರಖ್ಯಾತಿಯಾಗಿರುವ ಈಕೆ ನಮಗೆ ಲೌಕಿಕ ಮತ್ತು ಅಲೌಕಿಕ ಸುಖವನ್ನು ಕರುಣಿಸುತ್ತಾಳೆ. ದುಷ್ಟರಿಂದ ರಕ್ಷಿಸುವುದರ ಜೊತೆಗೆ ನಮ್ಮೊಳಗಿದ್ದುಕೊಂಡು ನಮ್ಮನ್ನಾಳುವ ದುಷ್ಟತನವನ್ನೂ ದೂರ ಮಾಡುತ್ತಾಳೆ. ಮಹಾಗೌರಿಯನ್ನು ಆದಿಶಕ್ತಿ ಎನ್ನಲಾಗಿದೆ. ಇವಳ ಪೂಜೆಗೆ ಈ ದುರ್ಗಾಷ್ಟಮಿಯ ಪುಣ್ಯಕಾಲವೇ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಮಹಾಗೌರಿಯನ್ನು ಶ್ರದ್ಧಾ ಭಕ್ತಿಪೂರ್ವಕವಾಗಿ ಪೂಜಿಸುವುದರಿಂದ ಸಕಲ ಸಂಪತ್ತು ಪ್ರಾಪ್ತಿಯಾಗುವುದು.

ಮಹಾ ಎಂದರೆ ದೊಡ್ಡದು ಎಂದರ್ಥ. ಮನುಜ ಜನ್ಮವೇ ದೊಡ್ಡದು. ಗೌರಿ ಇಲ್ಲಿ ತೇಜಸ್ಸಿನ ಪ್ರತೀಕ. ಈ ತೇಜಸ್ಸನ್ನು ಹೊಂದಲು ಆಕೆ ತಪಸ್ಸನ್ನು ಮಾಡಿದ್ದಾಳೆ. ಮಹಾಗೌರಿಯೆಂದರೆ ಮಹಾನ್ ತಪಸ್ಸೂ ಹೌದು. ಇದು ನಮ್ಮ ಜೀವನವನ್ನು ಸೂಕ್ಷ್ಮವಾಗಿ ವಿವರಿಸಿದ ರೂಪ. ಮನುಷ್ಯ ಜನ್ಮವೇ ಮಹಾನ್, ಅಲ್ಲದೆ ಇದೊಂದು ತಪಸ್ಸು ಕೂಡ ಆಗಿದೆ ಎಂಬುದನ್ನು ಈ ದೇವಿಯ ರೂಪ ಹೇಳುತ್ತದೆ. ಉಳಿದ ಯಾವ ಜನ್ಮವನ್ನೂ ಮಾನವನ ಜನ್ಮಕ್ಕೆ ಹೋಲಿಸಲಾಗದು. ಹಾಗಾಗಿಯೇ ಮಾನವ ಜನ್ಮ ಮಹಾತಪಸ್ಸು. ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬಂತೆ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಸುಲಭವಲ್ಲ. ತ್ಯಾಗ ಮತ್ತು ಏಕಾಗ್ರತೆ ಇಲ್ಲಿ ಮುಖ್ಯ. ಅಂತಹ ಶಕ್ತಿಯನ್ನು ಹೊಂದಲು ಮತ್ತು ಮನಸ್ಸನ್ನು ಕೇಂದ್ರೀಕರಿಸಲು ದೇವ ದೇವತೆಯರ ಸಹಾಯ ನಮಗೆ ಬೇಕು. ಹಾಗಾಗಿಯೇ ಮೂರ್ತಿಗಳು, ಮಂತ್ರ ಶ್ಲೋಕಾದಿಗಳು ಮತ್ತು ಪೂಜೆಗಳು ಹುಟ್ಟಿಕೊಂಡವು.

ಒಂದೊಂದು ದೇವತೆಯಲ್ಲಿಯೂ ಒಂದೊಂದು ಭಿನ್ನವಾದ ಶಕ್ತಿಯಿದೆ. ಆ ಶಕ್ತಿಯ ಸ್ವರೂಪವೇ ನಮಗೆ ಆಶ್ರಯ. ಅರಿವಿನ ದೀಪ ಉರಿಯುತ್ತಿರಲೆಂದು ಮಹಾಗೌರಿಯಲ್ಲಿ ಪ್ರಾರ್ಥಿಸಬೇಕು. ಮಹಾಗೌರಿಯು ತೇಜಸ್ಸನ್ನು ಗಳಿಸಿ ಶಿವನನ್ನು ಸೇರಿದಂತೆ ಮಾನವನೂ ಕೊನೆಯಲ್ಲಿ ಸೇರುವುದು ಶಿವನನ್ನೇ. ಹಾಗಾಗಿ ಆತ ನಮಗೆ ಮುಕ್ತಿಯನ್ನು ಕರುಣಿಸಬೇಕಾದರೆ ನಾವು ತೇಜಸ್ಸನ್ನು ಹೊಂದಬೇಕು. ಈ ದುರ್ಗಾಷ್ಟಮಿಯ ದಿನ ಮಹಾಗೌರಿಯನ್ನು ಆರಾಧಿಸುವ ಮೂಲಕ ದ್ವೇಷ ಅಸೂಯೆಗಳನ್ನು ಬಿಟ್ಟು, ಪ್ರೀತಿ, ಸ್ನೇಹ, ಸತ್ಯ, ಮತ್ತು ನಿಷ್ಠೆಯಿಂದ ಬದುಕಿ ತೇಜೋಮಯರಾಗಲು ನಿರ್ಧರಿಸೋಣ.

ಮುಂದುವರಿಯುವುದು..

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳವಾಗಿ ಜೀವಿಸಿ ||

ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here