ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶಾರದಾ ಪ್ರತಿಷ್ಠೆಯ ಪರ್ವಕಾಲದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಉಪಸ್ಥಿತಿಯಲ್ಲಿ ವಿದ್ಯಾರಂಭಕ್ಕೆ ಚಾಲನೆ ನೀಡಲಾಯಿತು.
ಕ್ಷೇತ್ರದ ಭಕ್ತರು ತಮ್ಮ ಮಕ್ಕಳಿಗೆ ಸಂಪ್ರದಾಯಬದ್ಧವಾಗಿ ಅಕ್ಷರಾಭ್ಯಾಸ ಮಾಡಿಸಿದರು. ಕ್ಷೇತ್ರದ ದುರ್ಗಾ ಆದಿಶಕ್ತಿ ದೇವಿಗೆ ಜೋಡಿ ಚಂಡಿಕಾ ಯಾಗ ಸಂಪನ್ನಗೊಂಡಿತು. ಮಂಗಳೂರಿನ ವಂದನಾ ಸಿದ್ಧಾರ್ಥ ದಂಪತಿ, ಕಟಪಾಡಿಯ ಭೋಜ ಪೂಜಾರಿ ಮತ್ತು ಮನೆಯವರ ಸೇವಾರ್ಥ ಚಂಡಿಕಾ ಯಾಗ ನೆರವೇರಿತು. ದಿಶಾ ವೈ.ಎಸ್., ಕ್ಷೇತ್ರದ ಸ್ವಾತಿ ನಾಗರಾಜ್ ಆಚಾರ್ಯ ಅವರಿಂದ ಮಧ್ಯಾಹ್ನ ನೃತ್ಯಸೇವೆ ನಡೆಯಿತು.
ಬಾಲಸುಬ್ರಹ್ಮಣ್ಯ, ಸುಜಾತಾ ಬಾಲಸುಬ್ರಹ್ಮಣ್ಯ ದಂಪತಿಯಿಂದ ದುರ್ಗಾ ನಮಸ್ಕಾರ ಪೂಜೆ ನೆರವೇರಿತು. ಕಲ್ಪೋಕ್ತ ಪೂಜೆ ಸಹಿತ ರಂಗಪೂಜೆ ನಡೆಯಿತು. ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಚೇರ್ಕಾಡಿ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದಿಂದ ಯಕ್ಷ ನೃತ್ಯ ಜರಗಿತು. ಸಾವಿರಾರು ಮಂದಿ ಭಕ್ತರು ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ಸ್ವೀಕರಿಸಿದ್ದಾರೆಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.