ಕಡಬ: ಬಲ್ಯ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಪ್ರಾರಂಭಗೊಂಡಿದ್ದು, ಅ. 19ರಂದು ವಿಜಯದಶಮಿಯ ವಿಶೇಷ ಪೂಜೆಯೊಂದಿಗೆ ಸಮಾಪನಗೊಳ್ಳಲಿದೆ. ಉತ್ಸವದ ಆರಂಭದ ದಿನ ಬೆಳಗ್ಗೆ ತೆನೆ ಕಟ್ಟು ಕಾರ್ಯಕ್ರಮದ ಬಳಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ ನೆರವೇರಿತು.
ಸಂಜೆ ಭಜನ ಕಾರ್ಯಕ್ರಮ ನಡೆಯಿತು. ರಾತ್ರಿ ರಂಗಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಹೊಸ್ಮಠ ರಾಜಾರಾಮ ಭಟ್ ಮತ್ತು ಮನೆಯವರು 100 ಊಟದ ಬಟ್ಟಲನ್ನು ಮತ್ತು 2018ರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯವರು 50 ಕುರ್ಚಿಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು.
ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ಚಿತ್ತರಂಜನ್ ರೈ ಮಾಣಿಗ, ಕಾರ್ಯದರ್ಶಿ ನಾರಾಯಣ ಎನ್. ಬಲ್ಯ ಕೊಲ್ಲಿಮಾರು, ಕೋಶಾಧಿಕಾರಿ ರಾಜಾರಾಮ ಭಟ್ ಹೊಸ್ಮಠ, ಸದಸ್ಯರಾದ ಕೃಷ್ಣಪ್ಪ ದೇವಾಡಿಗ ಸನಿಲ, ಚಂದ್ರಹಾಸ ಸಾಲ್ಯಾನ್ ಗೋವಿಂದಕಟ್ಟೆ, ತನಿಯ ಸಂಪಡ್ಕ, ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಶಾಂತಾರಾಮ ರೈ ಬೆದ್ರಾಡಿ, ರಾಮಯ್ಯ ಗೌಡ, ಶ್ರೀ ಉಮಾಮಹೇಶ್ವರಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ಗುಂಡಿಜಾಲು, ದೇವಸ್ಥಾನದ ಗೌರವ ಸಲಹೆಗಾರ ಡಾ| ಸುರೇಶ್ ಕುಮಾರ್ ಕೂಡೂರು, ಸಿಬಂದಿ ವೆಂಕಪ್ಪ ಗೌಡ ಸನಿಲ, ಶ್ರೀ ಉಮಾಮಹೇಶ್ವರಿ ಭಜನ ಮಂಡಳಿಯ ಅಧ್ಯಕ್ಷ ಶಶಿಧರ ಕೆರೆನಡ್ಕ ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ಶ್ರೀಪತಿ ಭಟ್, ಪುರೋಹಿತರಾದ ಪ್ರಸಾದ್ ಕೆದಿಲಾಯ, ವಿಷ್ಣು ಭಟ್ ಹಾಗೂ ಇತರರು ಸಹಕರಿಸಿದರು.
ವಿಜಯದಶಮಿ ಉತ್ಸವ
ದೇಗುಲದಲ್ಲಿ ಅ. 19ರಂದು ವಿಜಯದಶಮಿ ಪ್ರಯುಕ್ತ ಶ್ರೀ ಮಹಾಗಣಪತಿ ಹೋಮ, ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ನವಕ ಕಲಾಶಾಭಿಷೇಕ, ಮಹಾಪೂಜೆ, ನವಾನ್ನ ಭೋಜನ ಹಾಗೂ ರಂಗಪೂಜೆ ಜರಗಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.