ಮಹಾನಗರ: ಮಹತೋಭಾರ ಶ್ರೀ ಮಂಗಳಾದೇವಿಯ ನವರಾತ್ರಿ ಮಹೋತ್ಸವವು ಅ.10ರಿಂದ 20ರ ವರೆಗೆ ನಡೆಯಲಿದೆ. ಸುರತ್ಕಲ್ ಎನ್ಐಟಿಕೆ ನಿವೃತ್ತ ಪ್ರಾಧ್ಯಾಪಕ ಕೃಷ್ಣಯಾಜಿ ಉದ್ಘಾಟಿಸಲಿದ್ದಾರೆ. 9.30ಕ್ಕೆ ಮುಳಿಹಿತ್ಲು ಗೇಮ್ಸ್ ಟೀಮ್ನ ಹುಲಿ ವೇಷದ ಸುವರ್ಣ ಮಹೋತ್ಸವದ ಪ್ರಯುಕ್ತ ಧ್ವಜಸ್ತಂಭದ ಪೀಠಕ್ಕೆ ಬೆಳ್ಳಿ ಮತ್ತು ಪಂಚಲೋಹದ ಹೊದಿಕೆ ಸಮರ್ಪಣೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮೇಯರ್ ಭಾಸ್ಕರ್ ಕೆ. ನೆರವೇರಿ ಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ| ವೈ. ಭರತ್ ರಾಜ್ ಶೆಟ್ಟಿ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಭಾಗವಹಿಸಲಿರುವರು.
ಪ್ರತೀ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 11 ದಿನಗಳ ಕಾರ್ಯಕ್ರಮದಲ್ಲಿ ಸುಮಾರು 1,500-2,000 ದ ವರೆಗೆ ಕಲಾಭಿಮಾನಿಗಳು ಭಾಗವಹಿಸಲಿರುವರು. ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಪ್ರತೀ ದಿನ ಸಂಜೆ 4 ರಿಂದ 5 ರ ವರೆಗೆ ವಿವಿಧ ಸಂಘ ಸಂಸ್ಥೆಗಳಿಂದ ಸುಮಾರು ಹತ್ತು ತಂಡಗಳಿಂದ ಭಜನ ಕಾರ್ಯಕ್ರಮ ನಡೆಯಲಿದೆ. ನವರಾತ್ರಿ ಉತ್ಸವದ ಸಮಯದಲ್ಲಿ ವಿಶೇಷ ಆಹ್ವಾನಿತರಾಗಿ ಸಂಸದ ನಳಿನ್ ಕುಮಾರ್ ಕಟೀಲು ಆಗಮಿಸಲಿರುವರು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್. ಲೋಬೋ ಮೊದಲಾದ ಗಣ್ಯರು ಭಾಗವಹಿಸಲಿರುವರು.
ಅ.7: ಜಾನಪದ ಕಲೋತ್ಸವ ಸ್ಪರ್ಧೆ
ದೇವಸ್ಥಾನದ ವತಿಯಿಂದ ನಡೆಯಲಿರುವ 25ನೇ ವರ್ಷದ ಬೆಳ್ಳಿ ಹಬ್ಬ ಸಮಾರಂಭದ ಜಾನಪದ ಕಲೋತ್ಸವ ಸ್ಪರ್ಧೆಯು ಅ. 7ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಈ ಸ್ಪರ್ಧೆಗೆ ಹೆಸರು ನೋಂದಾಯಿಸುವವರು ಅ. 6ರಂದು ಸಂಜೆ 6 ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.