ಪುತ್ತೂರು : ಪ್ರಕೃತಿ ವಿಕೋಪಕ್ಕೆ ಕೇರಳ, ಕೊಡಗು ಭಾಗದ ಜನರು ತತ್ತರಿಸಿದ್ದಾರೆ. ಅವರು ಮತ್ತೂಮ್ಮೆ ಸಮೃದ್ಧವಾಗಿ ಜೀವನ ನಡೆಸುವಂತಾಗಬೇಕು. ಪ್ರಕೃತಿ ವಿಕೋಪ ಕೊನೆಯಾಗಬೇಕು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಸ್ವಾಮೀಜಿ, ಮಂಗಳವಾರ ಪ್ರಕೃತಿ ವಿಕೋಪ ಶಮನಕ್ಕೆ ನಡೆಸಿದ ಗಾಯತ್ರಿ ಯಜ್ಞದ ಬಳಿಕ ಆಶೀರ್ವಚನ ಇತ್ತರು.
ಪ್ರಕೃತಿ ವಿಕೋಪ ಎಲ್ಲವೂ ನಿಂತು ಹೋಗಬೇಕು ಎಂಬ ದೃಷ್ಟಿಯಿಂದ ಗಾಯತ್ರಿ ಯಜ್ಞ ಮಾಡಿದ್ದೇವೆ. ಇಲ್ಲಿ ಸೂರ್ಯನನ್ನು ಉಪಾಸನೆ ಮಾಡುವುದು ಮುಖ್ಯ. ಸೂರ್ಯ ಕಾಣಿಸಲಿ, ಮೋಡ ಸರಿಯಲಿ ಎನ್ನುವ ಗಾಯತ್ರಿ ಯಜ್ಞವನ್ನು ಅನೇಕ ವೈದಿಕರು ಶ್ರದ್ಧೆಯಿಂದ ಮಾಡಿದ್ದಾರೆ ಎಂದರು.
60 ವೈದಿಕರ ತಂಡ
ಚಾತುರ್ಮಾಸ್ಯ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಮತ್ತು ವೇ|ಮೂ| ಶ್ರೀಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಉದಯ ನಾರಾಯಣ ಕಲ್ಲೂರಾಯ ಸಹಿತ ಸುಮಾರು 60 ಮಂದಿ ವೈದಿಕರ ತಂಡದಿಂದ ಗಾಯತ್ರಿ ಸಹಿತ ವಿವಿಧ ಯಜ್ಞ ನಡೆಸಲಾಯಿತು.
ಬೆಳಗ್ಗೆಯಿಂದ ಶ್ರೀ ಅನ್ನಪೂರ್ಣೇಶ್ವರಿ ದೇಗುಲದ ಗೋಪುರದಲ್ಲಿ ಗಣಪತಿ ಹವನ ನಡೆಯಿತು. ಕಾಣಿಯೂರು ಶ್ರೀಗಳಿಂದ ನರಸಿಂಹ ದೇವರಿಗೆ ವಿಶೇಷ ತುಳಸಿ ಅರ್ಚನೆ, ಗಾಯತ್ರಿ ಯಜ್ಞ, ರುದ್ರ ಪಾರಾಯಣ, ವಿಷ್ಣು ಸಹಸ್ರನಾಮಗಳು ಶ್ರೀ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ನಡೆಯಿತು. ಮಧ್ಯಾಹ್ನದ ವೇಳೆ ಪೂರ್ಣಾ ಹುತಿಯ ಬಳಿಕ ಶ್ರೀ ಅನ್ನಪೂರ್ಣೇಶ್ವರಿ ದೇವರ ಗರ್ಭಗುಡಿಯ ಮುಂದೆ ಕಾಣಿ ಯೂರು ಶ್ರೀಗಳು ಮತ್ತು ವೇ|ಮೂ| ಶ್ರೀಕೃಷ್ಣ ಉಪಾಧ್ಯಾಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ, ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕೃಷ್ಣಪ್ಪ, ಪ್ರಸನ್ನ ಮಾರ್ತ ಉಪಸ್ಥಿತರಿದ್ದರು.