ಬೆಳ್ಮಣ್ : ನಂದಳಿಕೆ ಸಿರಿ ಜಾತ್ರೆ ಎಲ್ಲ ಧಾರ್ಮಿಕ ಕೇಂದ್ರಗಳ ಜಾತ್ರೆಗಳಿಗೆ ಮಾದರಿಯಾಗಬೇಕೆಂದು ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಹೇಳಿದರು.
ರವಿವಾರ ನಂದಳಿಕೆ ದೇಗುಲದ ಸಭಾಭವನದಲ್ಲಿ ಮಾರ್ಚ್ 31ರಂದು ನಡೆಯಲಿರುವ ನಂದಳಿಕೆ ಸಿರಿ ಜಾತ್ರೆಯ ಯಶಸ್ಸಿನ ಕುರಿತು ರೂಪುರೇಷೆಗಳ ತಯಾರಿಯ ಬಗ್ಗೆ ನಂದಳಿಕೆ, ಕೆದಿಂಜೆ ಗ್ರಾಮಸ್ಥರನ್ನೊಳಗೊಂಡ ವಿಶೇಷ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐತಿಹಾಸಿಕ ನಂದಳಿಕೆ ಸಿರಿ ಜಾತ್ರೆ ಅಯನೋತ್ಸವ ಯಶಸ್ಸು ಪಡೆಯಬೇಕಾದರೆ ಇಲ್ಲಿನ ಸ್ವಯಂ ಸೇವಕರ ಕಾರ್ಯ ಮಹತ್ತರವಾದದು. ನಾಡಿನಲ್ಲೆ ಅತ್ಯಂತ ಪ್ರಸಿದ್ಧಿ ಪಡೆಯುತ್ತಿರುವ ಸಿರಿಜಾತ್ರೆಯ ಸ್ವಯಂ ಸೇವಕರ ಶಿಸ್ತಿನ ಕಾರ್ಯ ಇತರ ದೇಗುಲಗಳಿಗೆ ಮಾದರಿಯಾಗಿದೆ ಎಂದ ಅವರು, ಸ್ವಯಂ ಸೇವಕ ಶ್ರದ್ಧೆ ಹಾಗೂ ತಾಳ್ಮೆ ಇಲ್ಲಿನ ಯಶಸ್ಸಿನ ಗುಟ್ಟು ಎಂದರು.
ಕೆದಿಂಜೆ, ನಂದಳಿಕೆ ಗ್ರಾಮದ ನೂರಾರು ಮಂದಿ ಗ್ರಾಮಸ್ಥರು ಭಾಗವಹಿಸಿದ್ದು ಪಕ್ಕದ ಸೂಡ , ಕಲ್ಯಾ, ಬೆಳ್ಮಣ್ ಗ್ರಾಮದ ಗ್ರಾಮಸ್ಥರೂ ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಸಿರಿ ಜಾತ್ರೆಯ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿ ಮಾಹಿತಿ ನೀಡಲಾಯಿತು. ಆಶಾ ಸುಹಾಸ್ ಹೆಗ್ಡೆ, ದೇಗುಲದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ವ್ಯವಸ್ಥಾಪಕ ರವಿರಾಜ್ ಭಟ್ ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ವಿ.ಕೆ. ರಾವ್ ನಂದಳಿಕೆ ನಿರೂಪಿಸಿ, ವಂದಿಸಿದರು.