ಸವಣೂರು ಫೆ. 26: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕಾರಣಿಕ ಹಾಗೂ ಸಿದ್ಧಿ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಮೊದಲ ದಿನ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ಸಮರ ಸೌಗಂಧಿಕಾ ಪೌರಾಣಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.
ಮರುದಿನ ಪ್ರಾತಃಕಾಲ ವ್ಯಾಘ್ರ ಚಾಮುಂಡಿಯ ನೇಮ, ಬೆಳಗ್ಗೆ ರುದ್ರ ಚಾಮುಂಡಿಯ ನೇಮ ಹಾಗೂ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಿತು. ಅರ್ಚಕ ಹರಿನಾರಾಯಣ ಮನೋಳಿತ್ತಾಯ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಎನ್. ಮೋಹನ್ದಾಸ್ ರೈ, ಎನ್. ಚಂದ್ರಶೇಖರ್ ರೈ, ಕಿಶೋರ್ ಕುಮಾರ್ ರೈ, ಸತೀಶ್ ರೈ, ಅರುಣ್ ಕುಮಾರ್ ರೈ, ಪ್ರವೀಣ್ ಕುಮಾರ್, ನಾರಾಯಣ ರೈ ಮೊದೆಲ್ಕಾಡಿ, ಡಾ| ಸುಚೇತಾ ಜೆ. ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ಚಂದ್ರ ರೈ, ಗೌರವಾಧ್ಯಕ್ಷ ಪುರುಷೋತ್ತಮ ಭಟ್ ಕಾರ್ದಾಂಟು, ಗಿರಿಜಾ ಎನ್. ರೈ ಹಾಗೂ ಭಕ್ತರು ಉಪಸ್ಥಿತರಿದ್ದರು.