Home ಧಾರ್ಮಿಕ ಕ್ಷೇತ್ರಗಳು ಶಿವನ ಜಟೆಯಲ್ಲಿ ಅಂತರಗಂಗೆ; ಕಾಲಕಾಲೇಶ್ವರದಲ್ಲಿ ವಿಸ್ಮಯ ಲೋಕ

ಶಿವನ ಜಟೆಯಲ್ಲಿ ಅಂತರಗಂಗೆ; ಕಾಲಕಾಲೇಶ್ವರದಲ್ಲಿ ವಿಸ್ಮಯ ಲೋಕ

8000
0
SHARE

ಶಿವನ ಶಿರದಲ್ಲಿ ಗಂಗೆ ಉಕ್ಕಿದಂತೆ ಗದಗ ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ (ಈಶ್ವರ) ದೇವಸ್ಥಾನದ ಮೇಲಿನ ಬೆಟ್ಟದಲ್ಲಿ ನೀರು ಉಕ್ಕಿತ್ತಿದೆ. ಹೀಗೆ ನೀರು ಚಿಲುವೆಯಾಗಿ ಹರಿಯುತ್ತಿರುವುದು ಒಂದೆಡೆ ನಿಸರ್ಗ ವಿಸ್ಮಯವಾದರೆ, ಮತ್ತೊಂದೆಡೆ ಭಕ್ತರಿಗೆ ಪವಿತ್ರ ತೀರ್ಥಪ್ರಸಾದವಾಗಿದೆ.

ದರ್ಶನಕ್ಕೆ ಬಂದ ಜನರು ಈ ನೀರನ್ನು ತೀರ್ಥದಂತೆ ಕುಡಿಯುತ್ತಾರೆ, ಬಾಟಲ್ ನಲ್ಲಿ ಸಂಗ್ರಹಿಸಿಕೊಂಡು ಮನೆ ಮಂದಿಗೆಲ್ಲ ಕೊಟ್ಟು ರೋಗದಿಂದ ದೂರವಾಗುತ್ತಾರೆ. ಬಿತ್ತನೆ ಮಾಡುವ ಪೂರ್ವದಲ್ಲಿ ಈ ನೀರನ್ನು ಜಮೀನಿನಲ್ಲಿ ಚುಮುಕಿಸಿ ರೋಗರುಜಿನಗಳು ಬೆಳೆಗಳಿಗೆ ನುಸುಳದಂತೆ ದಿಗ್ಭಂಧನ ವಿಧಿಸುತ್ತಾರೆ. ಇದೆಲ್ಲ ಅವರವರ ಭಕ್ತಿಯ ನಂಬಿಕೆಯ ಜೊತೆಗೆ ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯವೂ ಆಗಿದೆ. ಬೆಟ್ಟದ ಮೇಲ್ಭಾಗದಲ್ಲಿ ನೂರಾರು ವರ್ಷಗಳಿಂದ ಬೆಳೆದ ಸಸ್ಯಗಳ ಬೇರುಗಳ ಜಟೆಯಂತೆ ಒಂದಕ್ಕೊಂದು ಹೆಣೆದುಕೊಂಡು ಬೆಟ್ಟದ ಅಡಿಯಲ್ಲಿ ಇಳಿದು ಶಿವನ ತಲೆಯ ಮೇಲೆ ನೀರಿನ ಸಿಂಚನ ಮಾಡುತ್ತಿವೆ.ಬೆಟ್ಟದ ಮೇಲ್ಭಾಗದಲ್ಲಿ ಒಂದೂ ಮರ ಇರದಿದ್ದರೂ ಬೇರುಗಳು ಮಾತ್ರ ಬೆಳೆಯುತ್ತಲೇ ಇವೆ.

ಐತಿಹಾಸಿಕ ಬೆಟ್ಟ
ಗಜೇಂದ್ರ ಗಡದ ಈ ಕಾಲಕಾಲೇಶ್ವರ ಹಿಂದೆ ಹಸುರಿನಿಂದ ತುಂಬಿಕೊಂಡಿತ್ತು. ಹೈದಾರಾಬಾದ್ ನಿಜಾಮನ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಹೋರಾಟಗಾರರಿಗೆ ಇದು ಆಶ್ರಯ ನೀಡುವ ರಹಸ್ಯ ತಾಣವಾಗಿತ್ತು. ಈ ಬೆಟ್ಟದಲ್ಲಿರುವ ವಿಶಾಲವಾದ ಬಯಲು ಹಾಗೂ ಹಲವಾರು ಗುಹೆಗಳು ಸ್ವಾತಂತ್ರ್ಯವೀರರಿಗೆ ತರಬೇತಿ ನೀಡುವ, ಶಿಬಿರ ನಡೆಸುವ ಕೇಂದ್ರವೂ ಆಗಿತ್ತು. ಹೀಗಾಗಿ ಹೈದಾರಾಬಾದ್ ಕರ್ನಾಟಕ ವಿಮೋಚನೆ ಎಂದಾಗ ಈ ಭಾಗದ ಜನರ ಕಂಗಳ ಮುಂದೆ ಬಂದು ನಿಲ್ಲುವ ದೃಶ್ಯವೇ ಈ ಕಾಲಕಾಲೇಶ್ವರ ಬೆಟ್ಟ.

ದೂರದಿಂದ ನೋಡಿದರೆ ಬೆಟ್ಟದ ಅಂಚುಗಳಲ್ಲಿ ನಿಸರ್ಗವೇ ಬಿಡಿಸಿದ ರೇಖಾ ಚಿತ್ರಗಳು ಕಂಡುಬರುತ್ತವೆ. ಕ್ರಮೇಣ ಗಿಡ, ಮರಗಳು ನಾಶವಾದಂತೆ ಬೆಟ್ಟದ ಆಳದಲ್ಲಿರುವ ಆಲ, ಬೇವು, ಅರಳೆಯಂಥ ಮರಗಳ ಬೇರುಗಳು ದಾರಿ ಮಾಡಿಕೊಂಡು, ಒಂದಕ್ಕೊಂದು ಜಟೆ ಹೆಣೆದುಕೊಂಡು ದಿನದಿಂದ ದಿನಕ್ಕೆ ಬೆಳೆಯುತ್ತಾ ಸದ್ಯ 85 ಅಡಿಗಿಂತಲೂ ಉದ್ದವಾಗಿ, ಕೆಳಮುಖವಾಗಿ ಬೆಳೆಯುತ್ತಲೇ ಇವೆ. ಅದರಲ್ಲೇನು ವಿಶೇಷ ಎನ್ನುತ್ತೀರಾ? ಅಲ್ಲಿಯೇ ಇರುವುದು ಚಮತ್ಕಾರ.ಈ ಜಟೆಬೇರುಗಳ ಮೂಲಕ ಬೆಟ್ಟದಲ್ಲಿರುವ ತೇವಾಂಶ, ಹನಿಹನಿಯಾಗಿ ಸೇರಿ ದೊಡ್ಡ ಪ್ರಮಾಣದಲ್ಲಿ ಜಲಪೂಂಜವಾಗಿ ಕಾಲಾಂತರದಿಂದಲೇ ಒಸರುತ್ತಿದೆ. ಬೆಟ್ಟದ ಮೇಲೆ ಹೊಂಡ,ಬಾವಿ, ಕೆರೆಗಳೇನೂ ಇಲ್ಲವಾದರೂ ದಾರಿ ಜಲ ಸಿಂಚನ ಇಲ್ಲಿ ನಡೆದಿರುತ್ತದೆ. ಮಳೆಗಾಲದಲ್ಲಿ ರಭಸದಿಂದ ನೀರು ಇಳಿದರೆ, ಬೇಸಿಗೆಯಲ್ಲಿ ತುಂತುರು ಆಗಿ ಬೀಳುತ್ತದೆ.ಮಳೆಯಾದಾಗ ಬೆಟ್ಟದಲ್ಲಿರುವ ಇಂಗಿರುವ ನೀರು ಬೇರಿನ ಮೂಲಕ ಹೀಗೆ ಒಸರುವುದು ನೋಡುವುದಕ್ಕೆ ಆಶ್ವರ್ಯವೆನಿಸುತ್ತದೆ.

ಈ ಬಿಸಿಲು ನೆಲದಲ್ಲಿ ಬಳಲಿ ಬೆಂಡಾದ ಈ ಭಾಗದ ಜನರು, ದೇವಸ್ಥಾನಕ್ಕೆ ಬಂದು ಈ ಜಟೆಯಲ್ಲಿ ಇಳಿಯುವ ನೀರನ್ನು ತೀರ್ಥವೆಂದು ಸ್ವೀಕರಿಸಿ ಮೇಲಿಂದ ಚಿಮ್ಮುವ ನೀರಿಗೆ ಮುಖಮೊಡ್ಡಿ ಸಂತೋಷಪಡುತ್ತಾರೆ.ನೀರು ಬೀಳುವ ಜಾಗದಲ್ಲಿ ಹೊಂಡ ಇರುವುದರಿಂದ, ನೀರು ತುಂಬಿದ ಅನಂತರ ಬೆಟ್ಟದ ಕೆಳಗೆ ಹರಿದು ಭಕ್ತರ ದಾಹ ಹಿಂಗಿಸುತ್ತದೆ. ಹೊಂಡದ ಸುತ್ತಲೂ ನಿಂತ ಜನಕ್ಕೆ ಮೇಲಿಂದ ಹರಿದು ಭಕ್ತರ ದಾಹ ಹಿಂಗಿಸುತ್ತದೆ. ಹೊಂಡದ ಸುತ್ತಲೂ ನಿಂತ ಜನಕ್ಕೆ ಮೇಲಿಂದ ರಭಸವಾಗಿ ಜಿಗಿಯುವ ಹನಿಗಳು ಮುಖಕ್ಕೆ ಮುತ್ತಿಡುತ್ತವೆ.

“ಕೆಮ್ಮು, ಜ್ವರ, ಕೈಬ್ಯಾನಿ, ಕಾಲು ನೋವಿಗೆ ಈ ನೀರು ಔಷಧಿ ಇದ್ದಂಗರಿ” ಎನ್ನುತ್ತಾರೆ ಸ್ಥಳೀಯ ಭಕ್ತರು. ಮೂಲಿಕೆ ಸಸ್ಯಗಳ ಬೇರುಗಳ ಮೂಲಕ ಬರುವ ಈ ನೀರು ಔಷಧೀಯ ಗುಣ ಹೊಂದಿದೆ ಎಂದು ಸ್ಥಳೀಯ ಮಲ್ಲಿಕಾರ್ಜುನ ಮ್ಯಾಗೇರಿ ಹೇಳುತ್ತಾರೆ. ನೂರಾರು ವರ್ಷಗಳಿಂದ ಈ ರೀತಿ ನೀರು ಜಿನುಗಿ ಬರುವುದರಿಂದ ಬೇರು ಹಸುರಾಗಿ ಬೂಸ್ಟ್ ತರಹ ಪಾಚಿಕಟ್ಟಿದೆ. ಆದರೂ ಭಕ್ತರಿಗೆ ಮಾತ್ರ ಬಹುಸವಿಯಾಗಿದೆ!

ಚಿತ್ತ ನಕ್ಷತ್ರ ಬಳಿಕ ರಥೋತ್ಸವ!
‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿಯಾಗಿರುವ ಈ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಭಕ್ತರು ಸದಾ ತುಂಬಿರುತ್ತಾರೆ. ಯುಗಾದಿಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.ಆ ಸಮಯದಲ್ಲಿ ದೇಗುಲದ ಧರ್ಮದರ್ಶಿಗಳು ಈಶಾನ್ಯ ದಿಕ್ಕಿನಲ್ಲಿ ಚಿತ್ತ ನಕ್ಷತ್ರ ಕಂಡ ಬಳಿಕ ಕುಶಾಲ ತೋಪಿನ ಮೂಲಕ ಗುಂಡು ಹಾರಿಸಿ ಮಹಾ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಇದು ಹಿಂದಿನಿಂದ ನಡೆದು ಬಂದ ಸಂಪ್ರಾದಾಯ, ಭಕ್ತ ಸಮೂಹ, ಕಳಕಮಲ್ಲ, ಕಾಲಭೈರವ, ಕಾಲ ಕಾಲೇಶ್ವರ, ಸ್ವಯಂಭೂ ಲಿಂಗ ಸ್ವರೂಪಿ ಹರಿಹರ, ಮಹಾದೇವ ಎಂದೆಲ್ಲ ಈ ಕಾಲಕಾಲೇಶ್ವರನನ್ನು ನಂಬಿದ್ದಾರೆ.

ಪ್ರಕೃತಿ ನಿರ್ಮಿತ ಸೌಂದರ್ಯದ ಈ ಮಡಿಲಲ್ಲಿ ಹಚ್ಚ ಹಸುರಿನ ಈ ಏಕಶಿಲೆ ಬೆಟ್ಟ ಕಂಗೊಳಿಸುತ್ತದೆ. ಬೆಟ್ಟದ ತುದಿಯಲ್ಲಿ ಸ್ವಯಂಭೂ ಲಿಂಗ ಸ್ವರೂಪಿಯಾಗಿರುವ ಕಾಲಕಾಲೇಶ್ವರ ದೇವರನ್ನು ಉತ್ತರ ಪಡೆದು ಗವಿಯಲ್ಲಿ ಭಕ್ತರು ಪೂಜಿಸುತ್ತಾರೆ. ಇಲ್ಲಿಂದ ಮುಂದೆ ನಾಲ್ಕು ಹೆಜ್ಜೆ ನಡೆದರೆ ಬರುವುದೇ ಶಿವನ ಜಟೆಯಲ್ಲಿ ನೆಲೆಸಿದ ಗಂಗೆ ಇರುವ ಸ್ಥಳ ಈ ನೀರಿನ ಹರಿವು ಎಲ್ಲಿಂದ ಎಂಬುದು ಇಂದಿಗೂ ನಿಗೂಢ. ಹೀಗಾಗಿ ಇದಕ್ಕೆ ‘ಅಂತರಗಂಗೆ’ ಎಂದೇ ಕರೆಯಲಾಗುತ್ತಿದೆ.

ಬೆಟ್ಟದಲ್ಲಿರುವ ಈಶ್ವರನನ್ನು ಕಾಣಲು ಹಲವಾರು ಮೆಟ್ಟಿಲುಗಳನ್ನು ಏರಿದರೆ ಏಕಶಿಲೆಯಲ್ಲಿ ನಿರ್ಮಿಸಲಾದ ಎರಡು ದೀಪಸ್ತಂಭಗಳು ಕಾಣುತ್ತವೆ.ಮತ್ತಷ್ಟನ್ನು ಮೆಟ್ಟಿಲನ್ನೇರಿ ಬಾಗಿಲು ಪ್ರವೇಶಿಸುವ ಬಲಭಾಗದಲ್ಲಿ ಕಾಣುವ ಅಂತರಗಂಗೆಯು ಹಿಮಾಲಯದಲ್ಲಿ ಹುಟ್ಟಿರುವ ಗಂಗೆಯಷ್ಟೆ ದೈವೀಕ ಎಂಬುದು ಇಲ್ಲಿನ ಭಕ್ತರ ನಂಬಿಕೆ.

ಪೌರಾಣಿಕ ಹಿನ್ನೆಲೆ
ಸಾವಿರಾರು ವರ್ಷಗಳ ಇತಿಹಾಸವಿರುವ ಇದನ್ನು ಜಾಲಿಂದ್ರ ಗರಿ ಬೆಟ್ಟವೆಂದು ಸ್ಕಂದ ಪುರಾಣ ಉಲ್ಲೇಖಿಸಿದೆ. ವಿಷ್ಣು ಹೇಗೆ ದಶಾವತಾರಗಳನ್ನು ತಾಳಿದನೋ….ಹಾಗೆ ದುಷ್ಟರನ್ನು ಶಿಕ್ಷಿಸಲು ಶಿವ ಭೈರವನ ಅವತಾರ ಧರಿಸಿದ್ದಾನೆ ಎಂದು ಪುರಾಣದಲ್ಲಿ ಬಣ್ಣಿಸಲಾಗಿದೆ.

ಮಳೆ ಮುನ್ಸೂಚನೆ ನೀಡುವ ತಾಣ!

ಈ ಬೆಟ್ಟ ಮಳೆಗಾಲದಲ್ಲಿ ನಿಸರ್ಗಪ್ರಿಯರಿಗೆ ರಮಣೀಯ ಸ್ವರ್ಗ, ಚಾರಣಿಗರಿಗೆ ಸಾಹಸದ ವೇದಿಕೆ, ಸಂಶೋಧಕರಿಗೆ ಅಧ್ಯಯನ ಕೇಂದ್ರ, ಕಲಾವಿದರಿಗೆ ಸ್ಫೂರ್ತಿಯ ಕಾರಂಜಿಯಾಗಿ, ಯಾತ್ರಾರ್ಥಿಗಳಿಗೆ ಚೈತನ್ಯದ ಚೆಲುವೆಯಾಗಿದೆ. ಕಲ್ಲಿನ ಮಹಾದ್ವಾರ ಬಳಿಯ ವಿನಾಯಕ, ಮಧ್ಯದಲ್ಲಿಯ ಹನುಮಾನ್,ಮರ,ಗಿಡಗಳು ಭಕ್ತರನ್ನು ಮಂತ್ರ ಮುಗ್ದರನ್ನಾಗಿಸುತ್ತವೆ. ಕಾಲಕಾಲೇಶ್ವರ ಬೆಟ್ಟಕ್ಕೆ ಎದುರಾಗಿ ನಂದಿ ಸ್ವರೂಪದಲ್ಲಿ ಗುಡ್ಡ ಮೈದಳೆದಿದ್ದು, ಅದರ ಮೇಲೆ ಇರುವ ರುದ್ರನ ಪಾದ ಅನೇಕ ಮಹಿಮೆಗಳಿಂದ ಕೂಡಿದೆ ಎಂದು ಜನ ಹೇಳುತ್ತಾರೆ.

ಕಾಲಕಾಲೇಶ್ವರನ ಸನ್ನಿಧಿ ಅನ್ನದಾತರಿಗೆ ಮಳೆ,ಬೆಳೆ ಮುನ್ಸೂಚನೆ ಅಂದಾಜಿಸುವ ತಾಣವೂ ಆಗಿದೆ. ಹೀಗಾಗಿ ಯುಗಾದಿಯಂದು ಬೆಳೆಯ ಭವಿಷ್ಯ, ಮಳೆ ಪ್ರಮಾಣದ ಮುನ್ಸೂಚನೆ ಕಾಣಲು ರೈತರು ಕಾತರರಾಗಿರುತ್ತಾರೆ.

ಶಿವನ ಜಟೆಯಲ್ಲಿ ಉಕ್ಕುವ ನೀರಿನ ಆಧಾರದ ಮೇಲೆಯೇ ರೈತರು ಆ ವರ್ಷದ ಮಳೆಯನ್ನು ಅಂದಾಜಿಸುತ್ತಾರೆ.
ದೇಗುಲ ಅಂತರಗಂಗೆ ಮೇಲ್ಭಾಗದಲ್ಲಿ ಯಾರೂ ಹತ್ತಲಾಗದ ಸ್ಥಳದಲ್ಲಿ ಸುಣ್ಣ ಕೆಂಪು ಸುರುಮ ಆಶ್ಚರ್ಯಕರ ರೀತಿಯಲ್ಲಿ ತಾನೆ ಹಚ್ಚಿಕೊಳ್ಳುತ್ತದೆ ಎಂದು ಈಗಲೂ ಹೇಳುತ್ತಾರೆ. ಹೀಗಾಗಿ ಯುಗಾದಿ ದಿನ ಸಂಜೆ ದೇಗುಲದಲ್ಲಿ ಸುಣ್ಣ, ಸುರುಮಕ್ಕೆ ಪೂಜೆ ಇಟ್ಟು ಬರುತ್ತಾರೆ. ಬೆಳಗಾಗುವಷ್ಟರಲ್ಲಿ ಗುಡ್ಡದ ಮೇಲ್ಭಾಗದ ಪಡಿಯಲ್ಲಿ ಸುಣ್ಣ ಸುರುಮ ಕುರುಹು ಕಾಣಿಸುತ್ತದೆ.

ತರಂಗ

LEAVE A REPLY

Please enter your comment!
Please enter your name here