ಬೆಳ್ತಂಗಡಿ : ಮುಂಡೂರಿ ನಲ್ಲಿರುವ ಸುಮಾರು 800 ವರ್ಷಗಳ ಹಿಂದಿನ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಪುನಃಪ್ರತಿಷ್ಠೆಯ ಹನ್ನೆರಡು ವರ್ಷಗಳ ಬಳಿಕದ ಬ್ರಹ್ಮ ಕಲಶೋತ್ಸವಕ್ಕೆ ದಿನ ನಿಗದಿಯಾಗಿದ್ದು, ಹೀಗಾಗಿ ಅದರ ಪೂರ್ವಭಾವಿಯಾಗಿ ಶುಕ್ರವಾರ ಕ್ಷೇತ್ರದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು.
ವೈದಿಕರಿಂದ ಗಣಪತಿ ಹೋಮ, ಮೃತ್ಯುಂಜಯ ಹೋಮ, ಐಕಮತ್ಯ ಹೋಮ, ತಿಲಹೋಮ, ಸಪ್ತಶತೀ ಪಠನೆ, ವಿಷ್ಣು ಸಹಸ್ರನಾಮ ಪಾರಾಯಣಗಳು ನಡೆದವು. ಜತೆಗೆ ಉಜಿರೆಯ ಶಿವಳ್ಳಿ ಸಭಾದ ಮಹಿಳೆಯರಿಂದ ಸೋಭಾನ ಕಾರ್ಯಕ್ರಮಗಳು ನಡೆದವು. ನೀಲೇಶ್ವರದ ತಂತ್ರಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ ಸಾಲ್ಯಾನ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ| ಎಂ.ಎಂ. ದಯಾಕರ್, ವಿಷ್ಣು ಸಂಪಿಗೆತ್ತಾಯ, ಚೌಕದಬೆಟ್ಟು ರಾಮಭಟ್ಟ, ಜಯಪ್ರಕಾಶ ಮುಚ್ಚಿನ್ನಾಯ, ಅರ್ಚಕ ಅರವಿಂದ ಭಟ್, ಭಕ್ತರು ಭಾಗವಹಿಸಿದ್ದರು. ಉಜಿರೆಯ ಬಾಲಕೃಷ್ಣ ಅರಿಪಾಡಿತ್ತಾಯರು ದೇವಿಗೆ ನೂತನ ರಜತ ಪ್ರಭಾವಳಿಯನ್ನು ಸಮರ್ಪಿಸಿದರು.