ಮೂಲ್ಕಿ : ಸುಮಾರು 500 ವರ್ಷ ಗಳ ಇತಿಹಾಸವುಳ್ಳ ಒಳ ಲಂಕೆ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರಗಿತು.
ಬೆಳ್ಳಗ್ಗೆ ಊರಿನ ಭಜಕ ಜನರಿಂದ ಹಣ್ಣು, ಹಂಪಲು ಮತ್ತು ಇತರ ಹಲವಾರು ವಸ್ತುಗಳಿಂದ ಕೂಡಿದ ಕಾಣಿಕೆಯನ್ನು ಮೆರ ವಣಿಗೆಯಲ್ಲಿ ತಂದು ದೇವರಿಗೆ ಸಮರ್ಪಿಲಾಯಿತು.ಅನಂತರ ದೇಗುಲದಲ್ಲಿ ರಾಜ್ಯದ ವಿವಿ ಧೆಡೆ ಗಳಿಂದ ಹಾಗೂ ಕೇರಳ, ಗುಜರಾತ್ ಮತ್ತು ಮಹಾ ರಾಷ್ಟ್ರದ ವಿವಿಧ ಮೂಲೆಗಳ ಭಕ್ತರಿಂದ ಸಮರ್ಪಿಸಲಾದ ಸುಮಾರು ಒಂದೂವರೆ ಲಕ್ಷಕ್ಕೂ ಮಿಕ್ಕಿದ ಸಂಖ್ಯೆಯ ಸೀಯಾಳಗಳಿಂದ ಶ್ರೀ ಉಗ್ರನರಸಿಂಹ ದೇವರಿಗೆ ಮಹಾ ಅಭಿಷೇಕ ನಡೆಯಿತು.
ಬೆಳಗ್ಗೆ 8ರಿಂದ ಅಪರಾಹ್ನ ಸುಮಾರು 3 ಗಂಟೆಯ ತನಕ ಸೀಯಾಳ ಅಭಿಷೇಕ ಹಾಗೂ ತುಪ್ಪ, ಜೇನು, ಹಾಲು ಮತ್ತು ಇತರ ದ್ರವ್ಯಗಳ ಅಭಿಷೇಕ ನಡೆಯಿತು. ಸಂಜೆ ದೇವರಿಗೆ ಕನಕಾಭಿಷೇಕ ಹಾಗೂ ಗಂಗಾ ಭಾಗೀರಥಿ ಅಭಿಷೇಕ ಅನಂತರ ಮಂಗಳಾರತಿ ನಡೆದು ರಾತ್ರಿ ರಥೋತ್ಸವ ಜರಗಿತು. 5 ಕ್ಕಿಂತ ಹೆಚ್ಚು ಸೀಯಾಳಗಳನ್ನು ದೇವರಿಗೆ ಅರ್ಪಿಸುವವರು ಅದರ ಬದಲು ಮೊತ್ತವನ್ನು ನಗದು ಕಾಣಿಕೆಯಲ್ಲಿ ಕ್ಷೇತ್ರಕ್ಕೆ ಸಮರ್ಪಿಸುವಂತೆ ಆಡಳಿತ ಮಂಡಳಿ ಕೋರಲಾಗಿದ್ದರೂ ಭಕ್ತಾದಿಗಳು ಸೀಯಾಳದ ರಾಶಿಗೆ ಭಕ್ತಿಯಿಂದ ತಮ್ಮ ನೆನವರಿಕೆಯ ಹರಕೆಯಂತೆಯೇ ಸೀಯಾಳವನ್ನು ಭಕ್ತಿಯಿಂದ ತಂದು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಥ ಬೀದಿಯಲ್ಲಿ ಸಹಸ್ರಗಟ್ಟಲೆ ಸೀಯಾಳಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಬಾರಿ ಪ್ರಮಾಣದ ಸೀಯಾಳ ಮಾರಾಟವಾಗಿದ್ದರೂ ಬೆಲೆಯಲ್ಲಿ ಯಾವುದೇ ರೀತಿಯಲ್ಲಿ ದುಬಾರಿಗೆ ಮಾರಾಟ ನಡೆದ ಘಟನೆ ಕಂಡುಬಂದಿಲ್ಲ. ಹೊರಾಂಗಣದಲ್ಲಿ ದೇಗುಲದ ವತಿಯಿಂದ ಭಕ್ತರಿಗೆ ಫಲ ಹಾರದ ವ್ಯವಸ್ಥೆ, ರಾತ್ರಿ ನೈವೇದ್ಯದ ಅನಂತರ ಅನ್ನಸಂತರ್ಪಣೆ ಜರಗಿತು.
ಸೀಯಾಳ ಪ್ರಸಾದ
ದೇಗುಲದ ಸುತ್ತಲೂ ದೇವರಿಗೆ ಅಭಿಷೇಕ ಮಾಡಿದ ಜೇನು, ತುಪ್ಪ, ಹಾಲು, ಸಕ್ಕರೆ ಮಿಶ್ರಿತ ಸೀಯಾಳದ ನೀರನ್ನು ಸ್ವಯಂ ಸೇವಕರು ಭಕ್ತರಿಗೆ ಕುಡಿಯಲು ಮತ್ತು ಬಾಟಲಿಯಲ್ಲಿ ಬೇಕಾದ ಪ್ರಮಾಣದಲ್ಲಿ ತುಂಬಿಸಿಯೂ ಕೊಡಲಾಗುತ್ತಿತ್ತು. ಇದರ ಜತೆ ಬೊಂಡದ ಗಂಜಿ(ಬಾವೆ) ಯನ್ನು ಸೇವಾ ರೂಪದಲ್ಲಿ ಬೆಳ್ಳಿಗೆಯಿಂದ ನೀಡಲಾಗುತ್ತಿತ್ತು. ಭಕ್ತ ಸರತಿಯ ಸಾಲಿನಲ್ಲಿ ಕ್ಷೇತ್ರದ ದೇವರ ದರ್ಶನ ಪಡೆದರು.