ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ದೇವಸ್ಯಮೂಡೂರು ಹಾಗೂ ಮಣಿನಾಲ್ಕೂರು ಗ್ರಾಮದ ಗಡಿ ಭಾಗ ಮುಲ್ಕಾಜೆ ಮಾಡದಲ್ಲಿರುವ ತುಳುನಾಡಿನ ಪುರಾಣ ಪ್ರಸಿದ್ಧ ಶ್ರೀ ಉಳ್ಳಾಲ್ತಿ-ಉಳ್ಳಾಕ್ಲು ದೇವಸ್ಥಾನ ಭಕ್ತರ ಸಂಕಲ್ಪದಂತೆ ಪುನರ್ನಿರ್ಮಾಣಗೊಳ್ಳುತ್ತಿದೆ.
ಕಾರಣಿಕ ಕ್ಷೇತ್ರ
ಈ ಕ್ಷೇತ್ರವು ಕಾರಿಂಜೇಶ್ವರ ದೇವಸ್ಥಾನದ ದಕ್ಷಿಣ ಭಾಗಕ್ಕೆ ಇದ್ದು, ಸುಮಾರು 532 ವರ್ಷ ಇತಿಹಾಸವಿರುವ ಅತ್ಯಂತ ಕಾರಣಿಕ ಸಾನ್ನಿಧ್ಯ ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಗ್ರಾಮಸ್ಥರಿಗೆ ಹಲವು ಕಷ್ಟ-ನಷ್ಟಗಳು ಬಂದ ಸಂದರ್ಭದಲ್ಲಿ ಕೇರಳದ ಪ್ರಸಿದ್ಧ ದೈವಜ್ಞ ಮಾಗಡ್ ಶಶಿಸ್ವರನ್ ಅವರ ಉಪಸ್ಥಿತಿಯಲ್ಲಿ ಅಷ್ಟಮಂಗಲ ಸ್ವರ್ಣ ಪ್ರಶ್ನೆಯನ್ನಿರಿಸಿ ಚಿಂತನೆ ನಡೆಸಿದಾಗ ಈ ಕ್ಷೇತ್ರದ ಐತಿಹ್ಯ ಬೆಳಕಿಗೆ ಬಂದಿದೆ.
ಕದಂಬರ ಪ್ರಸಿದ್ಧ ರಾಜ ಮಯೂರ ವರ್ಮನ ಆಳ್ವಿಕೆಯ ಕಾಲದಲ್ಲಿ ಬ್ರಾಹ್ಮಣರನ್ನು ಶ್ರೀಕ್ಷೇತ್ರ ಕಾರಿಂಜದಲ್ಲಿ ಪೂಜೆ ಪುನಸ್ಕಾರಗಳಿಗೆ ನಿಯೋಜಿಸಿದ್ದು, ಈ ಬ್ರಾಹ್ಮಣರು ಉಂಡಾರು ಎಂಬಲ್ಲಿ ಮಠವನ್ನು ಸ್ಥಾಪನೆ ಮಾಡಿ ಶ್ರೀ ದುರ್ಗೆಯನ್ನು ಆರಾಧಿಸಿಕೊಂಡು ಬರುತ್ತಿದ್ದ ಸಮಯದಲ್ಲಿ ಒಂದು ದಿನ ರಾತ್ರಿ ದುರ್ಗೆ ಸ್ವಪ್ನ ರೂಪದಲ್ಲಿ ಕಾಣಿಸಿಕೊಂಡು ಊರಿನ ಭಕ್ತರಿಗೂ ನನ್ನನ್ನು ಆರಾಧಿಸಲು ಅವಕಾಶ ಕಲ್ಪಿಸು ಎಂಬ ಉಪದೇಶದಂತೆ ದುರ್ಗೆಯನ್ನು ಈ ಮಾಡ ಎಂಬಲ್ಲಿ ಆರಾಧಿಸಲು ತೊಡಗಿದರು. ಆ ಕಾಲಘಟ್ಟದಲ್ಲಿ ದುರ್ಗೆಯು ಗರ್ಭಗುಡಿಯಲ್ಲಿ ನೆಲೆ ನಿಂತು ನಾಲ್ಕು ಸುತ್ತು ಗೋಪುರದೊಂದಿಗೆ ದೈವಿಕ ಶಕ್ತಿಯಾಗಿ ಹೊರಗಡೆ ಉಳ್ಳಾಲ್ತಿ ಅಮ್ಮ ಎಂದು ಕೋಲಾರಾಧನೆ ಪಡೆದು ಮಹಾಶಕ್ತಿಯಾಗಿ ಈ ಮಾಡದಲ್ಲಿ ನೆಲೆಯಾದಳು. ಮಾಡ ಎಂಬ ಶಬ್ದದ ಅರ್ಥ ದೈವ ಸನ್ನಿಧಿ ಎಂದು, ಅದುವೇ ಈಗಿನ ಮುಲ್ಕಾಜೆ ಮಾಡ.
ಅನಂತರ ಈ ಸ್ಥಳಕ್ಕೆ ಕಾಲಾನಂತರ ಜೈನ ಬಲ್ಲಾಳರ ಆಗಮನವಾಗಿ ಆಡಳಿತ ಕಾಲದಲ್ಲಿ ಅವರ ಆರಾಧನೆ ದೈವಿಕ ಶಕ್ತಿ ಸಾನ್ನಿಧ್ಯವಾದ ಕೊಡಮಣಿತ್ತಾಯ, ಮಹಿಷಂದಾಯ, ವರಾಹ ಪಂಜುರ್ಲಿ, ರಕ್ತೇಶ್ವರೀ, ಕಲ್ಕುಡ-ಕಲ್ಲುರ್ಟಿ, ಗುಳಿಗ ದೈವ ಶಕ್ತಿಯ ಆರಾಧನೆ ಮಾಡಿಕೊಂಡು ಬಂದಿರುತ್ತದೆ ಎಂದು ತಿಳಿದು ಬಂತು.
ಮಧ್ಯ ಕಾಲ ಘಟ್ಟದಲ್ಲಿ ಈ ಸನ್ನಿಧಿಯಲ್ಲಿ ಉಳ್ಳಾಕ್ಲು ದೈವಗಳಾದ ಕಿನ್ನಿಮಾಣಿ, ಪೂಮಾಣಿ ದೈವಗಳು ನೆಲೆನಿಂತು ಈ ಸಾನ್ನಿಧ್ಯವು ಕಾರಿಂಜೇಶ್ವರ ಸೀಮೆಯ ಪ್ರದೇಶಕ್ಕೆ ಪ್ರಬಲವಾಗಿ ಮುಲ್ಕಾಜೆ ಮಾಡ ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು. ಮಧ್ಯ ಕಾಲದ ಘಟ್ಟದಲ್ಲಿ ಈ ಸನ್ನಿಧಿಯಲ್ಲಿ ಆರಾಧನೆ ಮಾಡುತ್ತಿದ್ದ ಬ್ರಾಹ್ಮಣ ಅರ್ಚಕರು ಜನ ಸಮೂಹದವರಿಂದ ಹತ್ಯೆಗೀಡಾದ ಘಟನೆ ಸಂಭವಿಸಿದುದರಿಂದ ಈ ಸ್ಥಳದಲ್ಲಿ ಪೂಜೆ ಪುನಸ್ಕಾರ ನಿಂತು ಜೀರ್ಣಾವಸ್ಥೆಗೆ ತಲುಪಿತು. ಈಗ ಈ ಸ್ಥಳದಲ್ಲಿ ಬ್ರಾಹ್ಮಣ ಹತ್ಯೆ ದೋಷವು ಬಾಧಿಸುವುದರಿಂದ ಬ್ರಹ್ಮಗುರು ಕಟ್ಟೆಯನ್ನು ಸ್ಥಾಪನೆ ಮಾಡಬೇಕೆಂದು ಕಂಡು ಬಂದಿರುತ್ತದೆ.
ದೈವಸ್ಥಾನದ ಪುನರ್ನಿರ್ಮಾಣ
ಶ್ರೀಕ್ಷೇತ್ರವು ಶ್ರೀ ದುರ್ಗೆಯ ಅವತಾರ ವಾದ ಶ್ರೀ ಉಳ್ಳಾಲ್ತಿ ದೇವಸ್ಥಾನದ ಸುತ್ತುಗೋಪುರ ಹಾಗೂ ಪರಿವಾರ ದೈವಗಳಾದ ಕಿನ್ನಿಮಾಣಿ, ಪೂಮಾಣಿ, ಕೊಡಮಣಿತ್ತಾಯ, ಮಹಿಷಂದಾಯ, ವರಾಹ ಪಂಜುರ್ಲಿ, ರಕ್ತೇಶ್ವರೀ, ಕಲ್ಕುಡ- ಕಲ್ಲುರ್ಟಿ, ಕ್ಷೇತ್ರ ಮೂಲ ಗುಳಿಗ ದೈವ ಗುಡಿ ನಿರ್ಮಾಣಗೊಳ್ಳಬೇಕಾಗಿದೆ. ಊರಿನ ಭಕ್ತರು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿ ಸುಮಾರು 3 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಡೆಯಲಿದ್ದು, ಈಗಾಗಲೇ ಕೆಲಸ ಕಾರ್ಯಗಳು ಪ್ರಗತಿಯಲಿದ್ದು, ಬ್ರಹ್ಮಕಲಶೋತ್ಸವ ನಡೆಯಲಿದೆ.
ಮಾಜಿ ಸಚಿವ ಬಿ. ರಮಾನಾಥ ರೈ ಅವರ ಗೌರವಾಧ್ಯಕ್ಷತೆ ಮತ್ತು ಬಿ. ಪದ್ಮಶೇಖರ ಜೈನ್ ಬಲ್ಲೋಡಿ ಮಾಗಣೆಗುತ್ತು ಅವರ ಅಧ್ಯಕ್ಷತೆ, ಗಣಪತಿ ಮುಚ್ಚಿನ್ನಾಯ ಮಾಗಣೆ ತಂತ್ರಿಗಳ ಕಾರ್ಯಾಧ್ಯಕ್ಷತೆ, ಸಂಚಾಲಕರಾಗಿ ಯೋಗೀಶ್ ಭಟ್ ಚಿಂತನೆ ಜಪ್ಪಿನಮೊಗರು, ಜೀರ್ಣೋದ್ಧಾರ ಸಮಿತಿ, ಶ್ರೀ ಉಳ್ಳಾಲ್ತಿ-ಉಳ್ಳಾಕ್ಲು ಸೇವಾ ಟ್ರಸ್ಟ್ ಹಾಗೂ ಶ್ರೀ ಉಳ್ಳಾಲ್ತಿ-ಉಳ್ಳಾಕ್ಲು ಮಹಿಳಾ ಸಮಿತಿ ರಚಿಸಿ ಇದರ ನೇತೃತ್ವದಲ್ಲಿ ಪುನಃನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.